ಚಿಕ್ಕಮಗಳೂರು: ಕರ್ನಾಟಕ ರಾಜ್ಯದಲ್ಲಿ 2005ರ ಅಕ್ಟೋಬರ್ 12ರಂದು ಅಸ್ತಿತ್ವಕ್ಕೆ ಬಂದ ಮಾಹಿತಿ ಆಯೋಗವು (Karnataka Information Commission) ಆಡಳಿತದಲ್ಲಿ ಪಾರದರ್ಶಕತೆ ಮತ್ತು ಬದ್ಧತೆಯನ್ನು ತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತರಾದ ಡಾ.ಹರೀಶ್ಕುಮಾರ್ ತಿಳಿಸಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಇಂದು ನಗರದ ಜಿ.ಪಂ.ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಮಾಹಿತಿ ಹಕ್ಕು ಅಧಿನಿಯಮ-2005 ಕುರಿತ ಜಾಗೃತಿ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯ ಅಧ್ಯಯನ ಮತ್ತು ಸಾಮಾನ್ಯ ತಿಳುವಳಿಕೆ ಇರಬೇಕು. ಮಾಹಿತಿ ಬಯಸಿ ಸಲ್ಲಿಕೆಯಾಗುವ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಕಾಯ್ದೆಯಲ್ಲಿ ಲಭ್ಯವಿರುವ ಸೆಕ್ಷನ್ಗಳ ಆಧಾರದ ಮೇಲೆ ಉತ್ತರ ಮತ್ತು ಮಾಹಿತಿಯನ್ನು ಒದಗಿಸಬೇಕು. ಕಳೆದ ಹತ್ತು ವರ್ಷಗಳಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ವಯ ಮಾಹಿತಿ ನೀಡುವಲ್ಲಿ ವಿಳಂಬ, ಸರಿಯಾದ ಮಾಹಿತಿ ನೀಡದಿರುವುದು ಹಾಗೂ ಇತರ ಕಾರಣಗಳಿಂದಾಗಿ 10 ಕೋಟಿಯಷ್ಟು ದಂಡವು ಸರ್ಕಾರಿ ಅಧಿಕಾರಿಗಳಿಂದ ಆಯೋಗಕ್ಕೆ ಜಮೆ ಆಗಿದೆ. ಆದ್ದರಿಂದ ಮಾಹಿತಿ ಅಧಿಕಾರಿಗಳು ಮಾಹಿತಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಕಾಲಮಿತಿಯಲ್ಲಿ ಉತ್ತರ ಒದಗಿಸಬೇಕೆಂದು ಅವರು ಹೇಳಿದರು.
ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕರು ಮಾಹಿತಿ ಕೋರಿ ಸಲ್ಲಿಸುವ ಅರ್ಜಿಗಳನ್ನು ಅರ್ಜಿ ಸಲ್ಲಿಕೆಯಾದ 30 ದಿನಗಳಲ್ಲಿ ವಿಲೇವಾರಿ ಮಾಡಬೇಕು. ಮಾಹಿತಿ ಕೇಳಿ ಯಾವುದೇ ವ್ಯಕ್ತಿಯು ಸರ್ಕಾರದ ಉದ್ಯೋಗ, ಸೌಲಭ್ಯಗಳ ಬಗ್ಗೆ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದ್ದಲ್ಲಿ ಮಾಹಿತಿ ನೀಡಬೇಕಾಗುತ್ತದೆ. ಅಧಿಕಾರಿಯ ಹೆಸರು ಮತ್ತು ಹುದ್ದೆ ಸಾರ್ವಜನಿಕ ದಾಖಲೆಯಾಗಿರುವುದರಿಂದ ಅವುಗಳನ್ನು ನೀಡಬೇಕಾಗುತ್ತದೆ. ಯಾವುದೇ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಅಥವಾ ತನಿಖೆ ಮುಕ್ತಾಯವಾಗಿ ಅಂತಿಮ ವರದಿ ಸಲ್ಲಿಸದಿರುವ ಅಥವಾ ತನಿಖೆ ಮುಕ್ತಾಯವಾದ ಬಗ್ಗೆ ಸಂಬAಧಿಸಿದ ಅಧಿಕಾರಿ ಅಥವಾ ಸಂಸ್ಥೆ ದೃಢೀಕರಣ ನೀಡದ ಹೊರತು ಯಾವುದೇ ಮಾಹಿತಿಯನ್ನು ನೀಡುವಂತಿಲ್ಲ. ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಾಯ್ದೆ ಮತ್ತು ಕಾನೂನುಗಳ ಸಾಮಾನ್ಯ ಜ್ಞಾನವು ಅಗತ್ಯವಾಗಿದೆ ಎಂದರು.
ಮಾಹಿತಿ ಹಕ್ಕು ಕಾಯ್ದೆ 2005 ರಲ್ಲಿ ಜಾರಿಗೆ ಬಂದಿದ್ದರೂ ಸಹ ಹಿಂದಿನ 20 ವರ್ಷಗಳ ಮಾಹಿತಿಗಳಿಗೂ ಈ ಕಾಯ್ದೆ ಅನ್ವಯವಾಗುತ್ತದೆ. ಕಳೆದ 20 ವರ್ಷಗಳಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಕುರಿತು ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯಗಳಿಂದ ಹಲವಾರು ಆದೇಶಗಳು ಬಂದಿವೆ. ಈ ಆದೇಶಗಳು ಮಾಹಿತಿ ಹಕ್ಕು ಕಾಯ್ದೆ ಅನ್ವಯ ಅಳವಡಿಕೆ ಹಾಗೂ ವಿಸ್ತರಣೆಗಳಿಗೆ ಸಾಕಷ್ಟು ಬಲ ತುಂಬಿವೆ ಎಂದು ತಿಳಿಸಿದರು.
ಮಾಹಿತಿ ಆಯುಕ್ತರಾದ ಬದ್ರುದ್ದೀನ್ ಕೆ. ಮಾತನಾಡಿ, ಮಾಹಿತಿ ಅಧಿಕಾರಿಗಳು ಮಾಹಿತಿ ಕೋರಿ ಬಂದ ಅರ್ಜಿಗಳಿಗೆ ಕಾಯ್ದೆಯನ್ವಯ ಪರಿಶೀಲಿಸಿ ನಿಯಮಾನುಸಾರ ವಿಲೇವಾರಿ ಮಾಡಬೇಕು. ಅರ್ಜಿಗಳ ವಿಲೇವಾರಿಯಲ್ಲಿ ಜಿಲ್ಲೆ ಪ್ರಥಮ ಸ್ಥಾನಕ್ಕೆ ಬರುವಂತೆ ಆಶಿಸಿದ ಅವರು, ಕೇವಲ ಸಿಸಿಟಿವಿ ದೃಶ್ಯಗಳು ಪ್ರಕರಣಗಳ ಬಗ್ಗೆ ಅಂತಿಮ ಆರೋಪ ಪಟ್ಟಿ, ಯಾವ ವ್ಯಕ್ತಿ ಮೇಲೆ ಎಷ್ಟು ಪ್ರಕರಣಗಳಿವೆ ಎಂಬುದು ಸೇರಿದಂತೆ ವೈಯಕ್ತಿಕ ಹಾಗೂ ವ್ಯಕ್ತಿಗತ ಮಾಹಿತಿಯನ್ನು ನೀಡುವಾಗ ಮಾಹಿತಿ ಹಕ್ಕು ಕಾಯ್ದೆಯಲ್ಲಿನ ಸೆಕ್ಷನ್ಗಳನ್ನು ಸರಿಯಾಗಿ ತಿಳಿದು ಅರ್ಥೈಸಿಕೊಂಡು ಮುಂದುವರಿಯಬೇಕು. ಯಾವ ಮಾಹಿತಿ ನೀಡಲು ಅವಕಾಶವಿದೆ ಮತ್ತು ಯಾವುದನ್ನು ನೀಡಲು ಅವಕಾಶವಿಲ್ಲ ಎಂಬುದರ ಬಗ್ಗೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ತಿಳುವಳಿಕೆ ಇರಬೇಕು ಎಂದು ಹೇಳಿದರು.


