ಚಿನ್ನದ ಅಂಬಾರಿ ಮೈಸೂರಿಗೆ ಬಂದಿದ್ದು ಹೇಗೆ? `ಮೈಸೂರು ದಸರಾ’ವಾಗಿ ವಿಶ್ವವಿಖ್ಯಾತಿ ಪಡೆದ ಕಥೆ ಓದಿ

Public TV
2 Min Read

ಭಾರತದಲ್ಲಿ ದಸರಾ ಹಬ್ಬವನ್ನು ಎಲ್ಲ ಕಡೆ ಆಚರಿಸಿದ್ದರೂ, ಮೈಸೂರಿನ ದಸರಾ ಮಾತ್ರ ವಿಭಿನ್ನ. ಹೀಗಾಗಿ ಮೈಸೂರಿನ ದಸರಾ ವಿಶ್ವವಿಖ್ಯಾತಿಗಳಿಸಿದೆ. ದಸರಾ ಹಬ್ಬದ ಜಂಬೂ ಸವಾರಿಯಲ್ಲಿ ಪ್ರಮುಖ ಆಕರ್ಷಣೆಯೇ 750 ಕೆಜಿ ತೂಕದ ಚಿನ್ನದ ಅಂಬಾರಿ. ಅಂಬಾರಿಯಲ್ಲಿರುವ ತಾಯಿ ಚಾಮುಂಡೇಶ್ವರಿ ದೇವಿಯ ಈ ಮೆರವಣಿಗೆಯನ್ನು ನೋಡಲು ದೇಶ, ವಿದೇಶಗಳಿಂದ ಲಕ್ಷಾಂತರ ಮಂದಿ ಮೈಸೂರಿಗೆ ಬರುತ್ತಾರೆ.

ರಸ್ತೆಯ ಮೂಲೆಮೂಲೆಗಳಲ್ಲಿ ಜನಸಾಗರವೇ ಈ ಅಂಬಾರಿಯನ್ನು ನೋಡುತ್ತಿರುತ್ತದೆ. ತಾಯಿ ಚಾಮುಂಡೇಶ್ವರಿಯ ಅಂಬಾರಿಯನ್ನು ಹೊತ್ತು ಅರ್ಜುನ ಮತ್ತು ಆತನ ಜೊತೆ ಆನೆಗಳು ಬನ್ನಿ ಮಂಟಪದತ್ತ ಹೋಗುವ ದೃಶ್ಯ ನೋಡುಗರನ್ನು ಮನಸೂರೆಗೊಳಿಸುವಂತೆ ಮಾಡುತ್ತದೆ.

ಈ ಅಂಬಾರಿಯ ಮೂಲ ಹಾಗೂ ನಡೆದು ಬಂದ ಕಥೆಯೇ ರೋಚಕ. ಅಂಬಾರಿಯ ನಂಟು ಕೊಪ್ಪಳದ ಕುಮ್ಮಟದುರ್ಗಕ್ಕೂ ಇದೆ. ಅಂಬಾರಿಯು 14ನೇ ಶತಮಾನದ ಪ್ರಾರಂಭದಲ್ಲಿ ಕಂಪಿಲರಾಯನ ಆಡಳಿತದ ಕುಮ್ಮಟ ದುರ್ಗದಲ್ಲಿತ್ತು ಎಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ.

ಮಹಾರಾಷ್ಟ್ರದ ದೇವಗಿರಿಯಲ್ಲಿ ಮೂಲತಃ ಈ ರತ್ನ ಖಚಿತ ಅಂಬಾರಿ ಇತ್ತು. ದೇವಗಿರಿ ನಾಶವಾದ ಬಳಿಕ ಇದನ್ನು ದೇವಗಿರಿಯ ರಾಜ ಮುಮ್ಮಡಿ ಸಿಂಗ ನಾಯಕನಿಗೆ ಹಸ್ತಾಂತರ ಮಾಡಿ, ಕಾಪಾಡುವಂತೆ ಕೇಳಿಕೊಳ್ಳಲಾಗಿತ್ತು. ಮುಮ್ಮಡಿ ಸಿಂಗ ನಾಯಕ ಇದನ್ನು ಬಳ್ಳಾರಿ ಬಳಿಯ ರಾಮದುರ್ಗ ಕೋಟೆಯಲ್ಲಿ ಮುಚ್ಚಿಟ್ಟಿದ್ದ. ಈತನ ಮಗ ಕಂಪಿಲರಾಯ ರಾಜ್ಯ ವಿಸ್ತರಿಸುತ್ತಾ, ಕುಮ್ಮಟದುರ್ಗವನ್ನು ರಾಜಧಾನಿಯಾಗಿ ಮಾಡಿಕೊಳ್ಳುತ್ತಾನೆ. ಕುಮ್ಮಟದುರ್ಗದಲ್ಲಿ ಶ್ರೀ ದುರ್ಗಾದೇವಿಯನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ಈ ಪೂಜೆಯನ್ನು ಕಂಪಿಲರಾಯನ ಮಗ ಯುವರಾಜನ ಕಾಲದಲ್ಲಿಯೂ ನಡೆಯುತ್ತದೆ.

1327ರಲ್ಲಿ ದೆಹಲಿ ಸುಲ್ತಾನರ ದಾಳಿಗೆ ಕಂಪಿಲ ರಾಜ್ಯ ನಾಶವಾಗುತ್ತದೆ. ಆಗ ಭಂಡಾರ ಸಂರಕ್ಷಣೆ ಮಾಡುತ್ತಿದ್ದ ಹಕ್ಕ-ಬುಕ್ಕ ಸಹೋದರರು ಚಿನ್ನದ ಅಂಬಾರಿಯನ್ನು ಹುತ್ತವೊಂದರಲ್ಲಿ ಮುಚ್ಚಿಟ್ಟು ಹೋಗುತ್ತಾರೆ. ಇದಾದ ನಂತರ 1,336ರ ವೇಳೆಗೆ ದೆಹಲಿ ಸುಲ್ತಾನರು ನಾಶವಾದ ಸಮಯದಲ್ಲಿ ಪುನಃ ರಾಜ್ಯ ಸ್ಥಾಪಿಸುವುದಕ್ಕೆ ಹಕ್ಕಬುಕ್ಕರು ಮುಂದಾಗುತ್ತಾರೆ. ಆನೆಗೊಂದಿಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಲಾಗುತ್ತದೆ. ಇದು ವಿಜಯನಗರ ಸಾಮ್ರಾಜ್ಯದ ಮೊದಲನೇ ರಾಜಧಾನಿಯಾಗುತ್ತದೆ. ನಂತರ ಹಕ್ಕ ಬುಕ್ಕರು ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯದ ಎರಡನೇ ರಾಜಧಾನಿ ಸ್ಥಾಪನೆ ಮಾಡುತ್ತಾರೆ. ಇದಾದ ನಂತರ ಹಂಪಿಗೆ ಅಂಬಾರಿ ಸ್ಥಳಾಂತರ ಮಾಡಲಾಗುತ್ತದೆ.

ಸಂಗಮ, ಸಾಳವ, ತುಳುವ ಹಾಗೂ ಅರವಿಡು ಎನ್ನುವ ನಾಲ್ಕು ವಂಶಗಳು ವಿಜಯನಗರ ಸಾಮ್ರಾಜ್ಯ ಆಳ್ವಿಕೆ ಮಾಡುತ್ತವೆ. ವಿಜಯನಗರ ಸಾಮ್ರಾಜ್ಯ ನಾಶವಾದಾಗ ಅಂಬಾರಿಯನ್ನು ಸಂರಕ್ಷಣೆಗಾಗಿ ಆಂಧ್ರದ ಪೆನಗೊಂಡಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಬಳಿಕ ಕೆಲವು ವರ್ಷದ ನಂತರ ಶ್ರೀರಂಗಪಟ್ಟಣ, ಕೊನೆಯದಾಗಿ ಮೈಸೂರಿಗೆ ಬಂದು ಸೇರುತ್ತದೆ.

`ಮೈಸೂರು ದಸರಾ’ ಆಗಿದ್ದು ಹೇಗೆ?
ಆರಂಭದಲ್ಲಿ ವಿಜಯದಶಮಿಯನ್ನು ವಿಜಯನಗರದ ಅರಸರು ಆಚರಿಸಿಕೊಂಡು ಬರುತ್ತಿದ್ದರು. ವಿಜಯನಗರ ಸಾಮ್ರಾಜ್ಯ ಪತನದ ಬಳಿಕ ಮೈಸೂರಿನ ಯದುವಂಶಸ್ಥರು ಇದನ್ನು ಮುಂದುವರಿಸಿಕೊಂಡು ಬಂದರು ಎಂದು ಇತಿಹಾಸ ಹೇಳುತ್ತದೆ. ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿಸಿಕೊಂಡು ರಾಜ್ಯವನ್ನು ಆಳುತ್ತಿದ್ದ ರಾಜ ಒಡೆಯರ್ 1610ರಲ್ಲಿ ವಿಜಯದಶಮಿಯನ್ನು ಮೊದಲು ಆಚರಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ (1799-1868) ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿದರು. 1800ರಲ್ಲಿ ಮೈಸೂರಿನಲ್ಲಿ ದಸರಾ ಆರಂಭವಾಗಿ ಬಳಿಕ “ಮೈಸೂರು ದಸರಾ” ಎಂದೇ ವಿಶ್ವವಿಖ್ಯಾತಿ ಪಡೆಯಿತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *