ವೈದ್ಯರ ನಿರ್ಲಕ್ಷ್ಯ, ಹೊಟ್ಟೆಯಲ್ಲೇ ಮಗು ಸಾವು – ಗ್ರಾಮಸ್ಥರಿಂದ ವೈದ್ಯರ ತರಾಟೆ

Public TV
1 Min Read

ಯಾದಗಿರಿ: ಯಾದಗಿರಿ (Yadgiri) ತಾಲೂಕಿನ ಹೊನಗೇರಾದಲ್ಲಿನ ಪ್ರಾಥಮಿಕ ಆಸ್ಪತ್ರೆಗೆ ಹೆರಿಗೆಗೆಂದು ತೆರಳಿದ್ದ ಗರ್ಭಿಣಿಗೆ (Pregnant) ಸೂಕ್ತ ಚಿಕಿತ್ಸೆ ದೊರೆಯದ ಹಿನ್ನೆಲೆ ಹೊಟ್ಟೆಯಲ್ಲಿಯೇ ಶಿಶು (Infant) ಮೃತಪಟ್ಟಿರುವ ಘಟನೆ ನಡೆದಿದೆ.

ಆಶನಾಳ ಗ್ರಾಮದ ಗರ್ಭಿಣಿ ಲಕ್ಷ್ಮಿ ಎಂಬುವವರಿಗೆ ಸರಿಯಾದ ಚಿಕಿತ್ಸೆ ಸಿಗಲಿಲ್ಲ. ವೈದ್ಯರ (Doctor) ನಿರ್ಲಕ್ಷ್ಯದಿಂದಲೇ ಹೀಗೆ ಆಗಿದೆ ಎಂದು ಆರೋಪ ಮಾಡಲಾಗಿದೆ. ಮೊದಲಿಗೆ ಆಶಾ ಕಾರ್ಯಕರ್ತೆಯು ಇವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (Primary Health Centre) ಕರೆದೊಯ್ದಿದ್ದರು. ಅಲ್ಲಿ ವೈದ್ಯರು ಇರದ ಹಿನ್ನೆಲೆಯಲ್ಲಿ ಯಾದಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಸೋಮವಾರ ರಾತ್ರಿ ಗರ್ಭಿಣಿ ಲಕ್ಷ್ಮಿಯ ಸ್ಕ್ಯಾನಿಂಗ್ (Scanning) ಮಾಡಿಸಿದಾಗ ಹೊಟ್ಟೆಯಲ್ಲಿ ಶಿಶು ಮೃತಪಟ್ಟಿದ್ದ ಬಗ್ಗೆ ತಿಳಿದುಬಂದಿದೆ. ಕೊನೆಗೆ ಮೃತ ಶಿಶುವನ್ನು ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಹೊರ ತೆಗೆದಿದ್ದಾರೆ. ಬಳಿಕ ಬಾಣಂತಿ ಲಕ್ಷ್ಮಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಇದನ್ನೂ ಓದಿ: ಸ್ಲೀಪರ್ ಕೋಚ್ ಬಸ್‍ನಲ್ಲಿ ವಿಷ ಕುಡಿದು ಮಲಗಿದ ಪ್ರೇಮಿಗಳು- ಯುವತಿ ಸಾವು

ವೈದ್ಯರ ನಿರ್ಲಕ್ಷ್ಯತನದಿಂದ ಶಿಶು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ಬಾರದೆ ನಿರ್ಲಕ್ಷ್ಯ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಆರೋಗ್ಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಕುಟುಂಬಸ್ಥರು, ಸೂಕ್ತ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ತಪ್ಪಿತಸ್ಥ ವೈದ್ಯರ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು (Villagers) ಯಾದಗಿರಿ ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ (Protest) ನಡೆಸಿ, ಸೂಕ್ತ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರಿಯಕರನಿಂದ ಪ್ರಿಯತಮೆ ಮರ್ಡರ್!

ವಿಷಯ ತಿಳಿದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು (Channareddy Patil Tunnur) ಆಸ್ಪತ್ರೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ. ಈ ವೇಳೆ ಶಾಸಕರ ಮುಂದೆ ಗ್ರಾಮಸ್ಥರು ನೋವು ತೋಡಿಕೊಂಡಿದ್ದಾರೆ. ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿ ಗ್ರಾಮಸ್ಥರನ್ನು ಸಮಾಧಾನ ಪಡಿಸಿದ್ದಾರೆ. ಇದನ್ನೂ ಓದಿ: ಮೈ-ಬೆಂ. ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ- ಇಬ್ಬರು ಗಂಭೀರ

Share This Article