11ಕ್ಕೆ 3, 87ಕ್ಕೆ 5 ಕೊನೆಗೆ 7 ವಿಕೆಟ್ ನಷ್ಟಕ್ಕೆ 281 ರನ್: ಇದು ಧೋನಿ, ಪಾಂಡ್ಯಾ, ಭುವಿ ಬ್ಯಾಟಿಂಗ್ ಕರಾಮತ್ತು

Public TV
2 Min Read

ಚೆನ್ನೈ: 11 ರನ್ ಗಳಿಗೆ 3 ವಿಕೆಟ್ ಪತನಗೊಂಡು 87 ರನ್ ಗಳಿಗೆ 5 ಮಂದಿ ಟಾಪ್ ಬ್ಯಾಟ್ಸ್ ಮನ್ ಗಳು ಔಟಾದಾಗ ಭಾರತ ಶೀಘ್ರವೇ ಆಲೌಟ್ ಆಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಧೋನಿ, ಪಾಂಡ್ಯಾ, ಕೊನೆಯಲ್ಲಿ ಬೌಲರ್ ಭುವನೇಶ್ವರ್ ಕುಮಾರ್ ಅವರ ಭರ್ಜರಿ ಆಟದಿಂದಾಗಿ ಭಾರತ ಆಸ್ಟ್ರೇಲಿಯಾಗೆ 282 ರನ್‍ಗಳ ಗುರಿಯನ್ನು ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ 3.3 ಓವರ್ ಗಳಲ್ಲಿ 11 ರನ್ ಗಳಿಸುವಷ್ಟರಲ್ಲೇ ರಹಾನೆ ವಿಕೆಟ್ ಕಳೆದುಕೊಂಡಿತ್ತು. ನಂತರ ಕೊಹ್ಲಿ ಮತ್ತು ಮನೀಷ್ ಪಾಂಡೆ ಶೂನ್ಯಕ್ಕೆ ಔಟಾದರು. ಇಲ್ಲಿಗೆ 5.3 ಮೂರು ಓವರ್ ಮುಕ್ತಾಯಗೊಂಡಿದ್ದರೂ ಭಾರತ ಗಳಿಸಿದ್ದು ಮಾತ್ರ ಅಷ್ಟೇ 11 ರನ್.

ನಂತರ ಬಂದ ಕೇದಾರ್ ಜಾಧವ್ ರೋಹಿತ್ ಶರ್ಮಾಗೆ ಸಾಥ್ ನೀಡಿದರು. ರೋಹಿತ್ ಶರ್ಮಾ 28 ರನ್ ಗಳಿಸಿದರೆ ಕೇದಾರ್ ಜಾಧವ್ 54 ಎಸೆತದಲ್ಲಿ 5 ಬೌಂಡರಿ ಸಿಡಿಸಿ 40 ರನ್ ಗಳಿಸಿ ಔಟಾದರು.

ಧೋನಿ ಪಾಂಡ್ಯಾ ಜುಗಲ್‍ಬಂದಿ: 21.3 ಓವರ್ ಗಳಲ್ಲಿ 87 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್ ಗೆ ಹಾರ್ದಿಕ್ ಪಾಂಡ್ಯಾ ಆಗಮಿಸಿದರು. ಆರಂಭದಲ್ಲಿ ನಿಧಾನವಾಗಿ ಇನ್ನಿಂಗ್ಸ್ ಕಟ್ಟಲು ಆರಂಭಿಸಿದ ಧೋನಿ ಪಾಂಡ್ಯಾ ಜೋಡಿ 36.2 ಓವರ್ ಗಳಲ್ಲಿ ಭಾರತ ರನ್ 150ರ ಗಡಿ ದಾಟಿಸಿತು. 48 ಎಸೆತಗಳಲ್ಲಿ ಅರ್ಧಶತಕ ಹೊಡೆದ ಪಾಂಡ್ಯಾ ಅಂತಿಮವಾಗಿ 66 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಿಡಿಸಿ 83 ರನ್‍ಗಳಿಸಿದ್ದಾಗ ಕ್ಯಾಚ್ ನೀಡಿ ಔಟಾದರು. ಆ್ಯಡಮ್ ಜಂಪಾ ಎಸೆದ 37 ನೇ ಓವರ್‍ನ ಕೊನೆಯಲ್ಲಿ ಹ್ಯಾಟ್ರಿಕ್ ಸಿಕ್ಸ್ ಹೊಡೆದು ಮತ್ತೊಮ್ಮೆ ತಾನೊಬ್ಬ ಸಮರ್ಥ ಆಲ್‍ರೌಂಡರ್ ಎನ್ನುವುದನ್ನು ಸಾಬೀತುಪಡಿಸಿದರು. ಒಟ್ಟಿನಲ್ಲಿ ಧೋನಿ ಮತ್ತು ಪಾಂಡ್ಯಾ 6ನೇ ವಿಕೆಟ್ ಗೆ 128 ಎಸೆತಗಳಲ್ಲಿ 118 ರನ್ ಹೊಡೆಯುವ ಮೂಲಕ ಭಾರತ 200 ರನ್‍ಗಳ ಗಡಿ ದಾಟಿತು.

ಧೋನಿ ಮತ್ತು ಭುವನೇಶ್ವರ್ ಕುಮಾರ್ 7ನೇ ವಿಕೆಟ್‍ಗೆ 72 ರನ್ ಪೇರಿಸಿದರು. 40.3 ಓವರ್ ಗಳಲ್ಲಿ 200 ರನ್ ಗಳಿಸಿದ್ದ ಭಾರತ ಕೊನೆಯ 9.3 ಓವರ್ ಗಳಲ್ಲಿ 81 ರನ್ ಗಳಿಸಿತು. ಧೋನಿ 79 ರನ್(88 ಎಸೆತ, 4 ಬೌಂಡರಿ, 2 ಸಿಕ್ಸರ್) ಹೊಡೆದು ಕೊನೆಯವರಾಗಿ ಔಟಾದರು. ಭುವನೇಶ್ವರ್ ಕುಮಾರ್ ಔಟಾಗದೇ 30 ರನ್(30 ಎಸೆತ, 5 ಬೌಂಡರಿ) ಗಳಿಸಿದರು.

ಆಸ್ಟ್ರೇಲಿಯಾದ ಪರ ನೇಥನ್ ಕೌಲ್ಟರ್ ನೈಲ್ 3 ವಿಕೆಟ್ ಪಡೆದರೆ, ಮಾರ್ಕಸ್ ಸ್ಟೊಯಿನಿಸ್ 2ವಿಕೆಟ್ ಪಡೆದರು. ಜೇಮ್ಸ್ ಫಾಲ್ಕೂನರ್ ಮತ್ತು ಆ್ಯಡಂ ಜಂಪಾ ತಲಾ ಒಂದೊಂದು ವಿಕೆಟ್ ಪಡೆದರು. ಆಸ್ಟ್ರೇಲಿಯಾದ ಬ್ಯಾಟಿಂಗ್ ವೇಳೆ ಮಳೆ ಅಡ್ಡಿಪಡಿಸಿದ್ದು, ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

 


 

Share This Article
Leave a Comment

Leave a Reply

Your email address will not be published. Required fields are marked *