ಪರ್ತ್ ಟೆಸ್ಟ್ – ಸಚಿನ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ!

Public TV
2 Min Read

ಪರ್ತ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್‍ನಲ್ಲಿ 283 ರನ್ ಗಳಿಗೆ ಆಲೌಟ್ ಆಗಿದ್ದು, ಈ ಮೂಲಕ 43 ರನ್ ಗಳ ಹಿನ್ನಡೆ ಅನುಭವಿಸಿದೆ.

ನಾಯಕ ವಿರಾಟ್ ಕೊಹ್ಲಿ ಶತಕ ಹೊರತಾಗಿಯೂ ಆಸೀಸ್ ಬೌಲರ್ ಗಳ ದಾಳಿಯನ್ನು ಎದುರಿಸಲು ವಿಫಲವಾದ ಟೀಂ ಇಂಡಿಯಾ, 2ನೇ ದಿನದಾಟದಲ್ಲಿ ಕೇವಲ 110 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿತು. 3ನೇ ದಿನದಾಟದ ಆರಂಭದಲ್ಲೇ ಟೀಂ ಇಂಡಿಯಾಗೆ ಆಘಾತ ನೀಡಿದ ನಥಾನ್ ಲಯನ್, ರಹಾನೆ ವಿಕೆಟ್ ಪಡೆದರು. ಬಳಿಕ ಬಂದ ಹನುಮ ವಿಹಾರಿ ಆಕ್ರಮಣಕಾರಿ ಆಟಕ್ಕೆ ಮುಂದಾದರೂ ಕೇವಲ 20 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ನಾಯಕ ವಿರಾಟ್ ಕೊಹ್ಲಿ ತಮ್ಮ ತಾಳ್ಮೆಯ ಆಟ ಮುಂದುವರಿಸಿ ವೃತ್ತಿ ಜೀವನದ 25ನೇ ಟೆಸ್ಟ್ ಶತಕ ಪೂರ್ಣಗೊಳಿಸಿದರು. ಈ ಮೂಲಕ ಆಸೀಸ್ ನೆಲದಲ್ಲಿ 6 ಶತಕಗಳನ್ನ ಸಿಡಿಸಿ ಸಚಿನ್ ದಾಖಲೆಯನ್ನು ಸರಿಗಟ್ಟಿದರು. ಕೊಹ್ಲಿ ಆಸೀಸ್ ವಿರುದ್ಧ ಸಿಡಿಸಿದ 7ನೇ ಶತಕ ಇದಾಗಿದೆ.

214 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ ಶತಕ ಸಿಡಿಸಿದ ಕೊಹ್ಲಿ 123 ರನ್ ಗಳಿಸಿದ್ದ ವೇಳೆ ಕಾಮಿನ್ಸ್ ಬೌಲಿಂಗ್‍ನಲ್ಲಿ ವಿವಾದಾತ್ಮಕ ಕ್ಯಾಚ್ ಗೆ ಬಲಿಯಾದರು. ಇದರ ಬೆನ್ನಲ್ಲೇ ಮೊಹಮ್ಮದ್ ಶಮಿ ಶೂನ್ಯ ಸುತ್ತುವ ಮೂಲಕ ನಿರಾಸೆ ಮೂಡಿಸಿದರು. ಇದರೊಂದಿಗೆ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿತ್ತು.

ನಾಯಕ ವಿರಾಟ್ ಕೊಹ್ಲಿ ಔಟಾಗುತ್ತಿದಂತೆ ಯುವ ಆಟಗಾರ ರಿಷಭ್ ಪಂತ್‍ರ ಮೇಲೆ ನಿರೀಕ್ಷೆ ಹೆಚ್ಚಾಯಿತು. ತಾಳ್ಮೆಯ ಆಟಕ್ಕೆ ಮುಂದಾದ ಪಂತ್, ಯಾದವ್ ಜೊತೆಗೂಡಿ 9ನೇ ವಿಕೆಟ್‍ಗೆ 25 ರನ್ ಜೊತೆಯಾಟ ನೀಡಿದರು. ಆದರೆ ಹೆಚ್ಚು ಹೊತ್ತು ಕ್ರಿಸ್‍ನಲ್ಲಿ ನಿಲ್ಲಲು ವಿಫಲರಾದ ಪಂತ್, 50 ಎಸೆತಗಳಿಂದ 35 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಉಳಿದಂತೆ ಇಶಾಂತ್ ಶರ್ಮಾ 1 ರನ್, ಬುಮ್ರಾ 4 ರನ್ ಗಳಿಗೆ ಔಟಾಗುವ ಮೂಲಕ ಟೀಂ ಇಂಡಿಯಾ 105.5 ಓವರ್ ಗಳಲ್ಲಿ 283 ರನ್ ಗಳಿಗೆ ಸರ್ವಪತನವಾಯಿತು. ಆಸೀಸ್ ತಂಡದ ಲಯನ್ ಮಿಂಚಿನ ಬೌಲಿಂಗ್ ದಾಳಿ ನಡೆಸಿ 5 ವಿಕೆಟ್ ಪಡೆದರು. ಟೀಂ ಇಂಡಿಯಾ ವಿರುದ್ಧ 43 ರನ್ ಗಳ ಮುನ್ನಡೆ ಪಡೆದ ಆಸೀಸ್ 2ನೇ ಇನ್ನಿಂಗ್ಸ್ ಆರಂಭಿಸಿದ್ದು, ವಿಕೆಟ್ ನಷ್ಟವಿಲ್ಲದೇ 11 ಓವರ್ ಗಳಲ್ಲಿ 33 ರನ್ ಗಳಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *