ಕೊಲೆ ಆರೋಪಿಗಳನ್ನು ಬಂಧಿಸಿ, ರಸ್ತೆಯಲ್ಲಿ ಮೆರವಣಿಗೆ ಮಾಡಿದ ಪೊಲೀಸರು

Public TV
1 Min Read

ಭೋಪಾಲ್: 20 ವರ್ಷದ ಯುವಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿರುವ ಇಂದೋರ್ ಪೊಲೀಸರು ರಸ್ತೆಗಳಲ್ಲಿ ಮೆರವಣಿಗೆ ಮಾಡಿಸಿದ್ದಾರೆ.

ಜುಲೈ 22ರ ರಾತ್ರಿ ಇಂದೋರ್‍ನ ನಿವಾಸಿ ಅರ್ಪಿತ್ ಕೊಲೆ ನಡೆದಿತ್ತು. ಈ ಕೊಲೆ ಆರೋಪಿಗಳಾದ ರಾಜ ಕಚೋರಿ ಮತ್ತು ಆಶಿಶ್ ಶರ್ಮಾರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದರು. ಆದರೆ ಈ ಆರೋಪಿಗಳನ್ನು ಸುಮ್ಮನೆ ಬಿಡದೇ ರಸ್ತೆಯಲ್ಲಿ ಪೊಲೀಸರು ಮೆರವಣಿಗೆ ಮಾಡಿಸಿದ್ದಾರೆ.

ಇಂದೋರಿನ ನಂದಾ ನಗರದಲ್ಲಿ ಮುಂಜಾನೆ 1 ಗಂಟೆ ಸುಮಾರಿಗೆ ಅರ್ಪಿತ್‍ಗೆ ಆರೋಪಿಗಳು ಚಾಕು ಇರಿದಿದ್ದರು. ಕೆಲವು ಗಂಟೆಗಳ ನಂತರ ಯುವಕ ಸಾವನ್ನಪ್ಪಿದ್ದನು. ಈ ಸಂಬಂಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 307, 323, 294, 506 ಮತ್ತು 302ರ ಅಡಿಯಲ್ಲಿ ಪರದೇಸಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಇಂದೋರ್ ಎಸ್‍ಎಸ್‍ಪಿ ರುಚಿ ವರ್ಧನ್ ಮಿಶ್ರಾ ತಿಳಿಸಿದ್ದಾರೆ.

ಕೊಲೆಯಾಗಿರುವ ಅರ್ಪಿತ್ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದನು. ಹಣದ ವಿಚಾರಕ್ಕೆ ಆಶಿಶ್ ಹಾಗೂ ಅರ್ಪಿತ್ ನಡುವೆ ಜಗಳ ನಡೆದಿತ್ತು. ಹಾಗೆಯೇ ರಾಜ ಕಚೋರಿಗೂ ಕೂಡ ಅರ್ಪಿತ್ ಮೇಲೆ ದ್ವೇಷವಿತ್ತು. ಅಲ್ಲದೇ ಈ ಆರೋಪಿಗಳನ್ನು ಬಿಟ್ಟು ಲೋಕೇಶ್, ಅಶು, ವತನ್ ಈ ಮೂವರೊಟ್ಟಿಗೆ ಕೂಡ ಅರ್ಪಿತ್ ದ್ವೇಷ ಹೊಂದಿದ್ದನು.

ಆರೋಪಿಗಳು ಈ ಕೃತ್ಯ ಎಸಗುವ ಮುನ್ನ ಮೂರು ಬಾರಿ ಅರ್ಪಿತ್ ಕೊಲೆ ಮಾಡಲು ಯತ್ನಿಸಿದ್ದರು. ಆದರೆ ವಿಫಲರಾಗಿದ್ದರು ಎಂದು ಮಿಶ್ರಾ ಅವರು ಹೇಳಿದ್ದಾರೆ.

ಆ ಬಳಿಕ ಲೋಕೇಶ್ ಮನೆಯಲ್ಲಿ ಆರೋಪಿಗಳು ಅರ್ಪಿತ್ ಕೊಲೆಗೆ ಸಂಚು ರೂಪಿಸಿದ್ದರು. ಅವರಿಗೆ ಲೋಕೇಶ್ ಚಾಕು ತಂದು ಕೊಟ್ಟು ಕೊಲೆ ಮಾಡಲು ಸಹಾಯ ಮಾಡಿದ್ದನು. ನಂತರ ಆರೋಪಿಗಳು ಕರೆ ಮಾಡಿ ಅರ್ಪಿತ್ ನನ್ನು ಕರೆಸಿಕೊಂಡು ಚಾಕು ಇರಿದು ಕೊಲೆ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *