2013ರಿಂದ ಇಂದಿರಾ ಗಾಂಧಿ ಹುಟ್ಟಿದ ಮನೆಯ ತೆರಿಗೆ ಪಾವತಿಸಿಲ್ಲ

Public TV
2 Min Read

– 4.35 ಕೋಟಿ ರೂ.ತೆರಿಗೆ ಬಾಕಿ
– ಸೋನಿಯಾ ಗಾಂಧಿ ಒಡೆತನದಲ್ಲಿರುವ ಕಟ್ಟಡ

ಲಕ್ನೋ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನಿಸಿದ ಉತ್ತರ ಪ್ರದೇಶದ ಪ್ರಯಾಗರಾಜ್‍ನಲ್ಲಿನ ಆನಂದ ಭವನದ ತೆರಿಗೆಯನ್ನು ಪಾವತಿಸದೆ ವರ್ಷಗಳೇ ಕಳೆದಿದ್ದು, ಒಟ್ಟು 4.35 ಕೋಟಿ ರೂ. ತೆರಿಗೆ ಕಟ್ಟುವಂತೆ ನೋಟಿಸ್ ನೀಡಲಾಗಿದೆ.

ವಸತಿ ರಹಿತ ವರ್ಗದಡಿಯಲ್ಲಿ ತೆರಿಗೆ ವಿಧಿಸಲಾಗಿದ್ದು, 2013ರಿಂದ ಈ ಮನೆಯ ತೆರಿಗೆ ಪಾವತಿಸಲಾಗಿಲ್ಲ ಎಂದು ಉಲ್ಲೇಖಿಸಲಾಗಿದೆ. ಆನಂದ ಭವನ ಗಾಂಧಿ ಕುಟುಂಬದ ನೆಲೆಯಾಗಿತ್ತು. ಇದೀಗ ಆ ಬಂಗಲೆಯಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಜವಾಹರಲಾಲ್ ನೆಹರು ಸ್ಮಾರಕ ಟ್ರಸ್ಟ್ ನಡೆಸಲಾಗುತ್ತಿದೆ.

ನಗರಸಭೆ ಕಾಯ್ದೆ ಮತ್ತು ಆಸ್ತಿ ತೆರಿಗೆ ನಿಯಮಗಳ ಅಡಿಯಲ್ಲಿ ನೋಟಿಸ್ ನೀಡಲಾಗಿದೆ ಎಂದು ಪ್ರಯಾಗರಾಜ್ ಮುನ್ಸಿಪಲ್ ಕಾರ್ಪೋರೇಶನ್(ಪಿಎಂಸಿ)ನ ಮುಖ್ಯ ತೆರಿಗೆ ಮೌಲ್ಯಮಾಪನ ಅಧಿಕಾರಿ ಪಿ.ಕೆ.ಮಿಶ್ರಾ ತಿಳಿಸಿದ್ದಾರೆ.

ತೆರಿಗೆ ಮೊತ್ತವನ್ನು ನಿರ್ಧರಿಸಲು ಸಮೀಕ್ಷೆ ನಡೆಸಿದ್ದೇವೆ. ಮೌಲ್ಯಮಾಪನದ ಬಗ್ಗೆ ಆಕ್ಷೇಪಣೆಯನ್ನು ಸಹ ಆಹ್ವಾನಿಸಿದ್ದೆವು ಆದರೆ ಯಾವುದನ್ನೂ ಸ್ವೀಕರಿಸಿಲ್ಲ. ಹೀಗಾಗಿ ನಾವು ನಮ್ಮ ಮೌಲ್ಯಮಾಪನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ನೋಟಿಸ್ ನೀಡಿದ್ದೇವೆ ಎಂದು ಮಿಶ್ರಾ ತಿಳಿಸಿದ್ದಾರೆ.

ಪಿಎಂಸಿ ಮಾಜಿ ಮೇಯರ್ ಚೌಧರಿ ಜಿತೇಂದ್ರನಾಥ್ ಸಿಂಗ್ ಈ ಕುರಿತು ಮಾಹಿತಿ ನೀಡಿ, ಜವಾಹರಲಾಲ್ ನೆಹರು ಸ್ಮಾರಕ ಟ್ರಸ್ಟ್ ಎಲ್ಲ ರೀತಿಯ ತೆರಿಗೆಗಳಿಂದ ವಿನಾಯಿತಿ ಪಡೆದಿರುವ ಹಿನ್ನೆಲೆ ಆನಂದ್ ಭವನಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ ಎಂದರು.

ಆನಂದ್ ಭವನಕ್ಕೆ ತೆರಿಗೆ ವಿಧಿಸುವುದು ತಪ್ಪು. ಈ ಕಟ್ಟಡ ಜವಾಹರಲಾಲ್ ನೆಹರು ಸ್ಮಾರಕ ಟ್ರಸ್ಟ್ ಅಡಿಯಲ್ಲಿ ಬರುತ್ತದೆ. ಇದಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಇದು ಸ್ವಾತಂತ್ರ್ಯ ಹೋರಾಟದ ಸ್ಮಾರಕ ಹಾಗೂ ಸ್ಮರಣಿಕೆಗಳ ವಸ್ತು ಸಂಗ್ರಹಾಲಯವಾಗಿದೆ. ಅಲ್ಲದೆ ಇದು ಶಿಕ್ಷಣದ ಕೇಂದ್ರವಾಗಿದೆ ಎಂದು ಸಿಂಗ್ ಅಭಿಪ್ರಾಯಪಟ್ಟರು.

ರಾಜಕೀಯದ ಭಾಗವಾಗಿ ಬಿಜೆಪಿ ಸರ್ಕಾರ ಆನಂದ ಭವನಕ್ಕೆ ತೆರಿಗೆ ವಿಧಿಸಿದೆ. ಆನಂದ್ ಭವನ ಸ್ವಾತಂತ್ರ್ಯ ಹೋರಾಟದ ದೇವಾಲಯವಾಗಿದೆ. ತೆರಿಗೆ ವಿಧಿಸುವುದು ಕಾಂಗ್ರೆಸ್ ಮುಕ್ತ ಭಾರತ ಹಾಗೂ ನೆಹರು ಮುಕ್ತ ಜಗತ್ತಿನ ಬಿಜೆಪಿಯ ಕಾರ್ಯಸೂಚಿಗೆ ಅನುಗುಣವಾಗಿದೆ. ಇದನ್ನು ಸರ್ಕಾರದ ಸೂಚನೆ ಮೇರೆಗೆ ಮಾಡಲಾಗಿದೆ ಎಂದು ನಗರದ ನಿವಾಸಿ ಅಭ್ಯ ಅವಸ್ಥಿ ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *