ಇಂದಿರಾ ಕ್ಯಾಂಟೀನ್ ಸಬ್ಸಿಡಿ ದುರುಪಯೋಗ – ತನಿಖೆಗೆ ಆದೇಶಿಸಿದ ಸಿಎಂ

Public TV
1 Min Read

ಬೆಂಗಳೂರು: ಇಂದಿರಾ ಕ್ಯಾಂಟೀನ್‍ಗಳ ಸಬ್ಸಿಡಿ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ.

ಇಂದಿರಾ ಕ್ಯಾಂಟೀನ್‍ಗಳ ಸಬ್ಸಿಡಿ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ‘ಪಬ್ಲಿಕ್ ಟಿವಿ’ ವಿಶೇಷ ವರದಿ ಮಾಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ತನಿಖೆ ನಡೆಸುವಂತೆ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ತನಿಖೆ ನಡೆಸಿ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಕಾರ್ಯದರ್ಶಿಗೆ ಸಿಎಂ ಸೂಚಿಸಿದ್ದಾರೆ.

ಗುತ್ತಿಗೆ ನೀಡಿರುವ ಸಂಸ್ಥೆಗಳ ಹಾಗೂ ಕ್ಯಾಂಟೀನ್ ನಿರ್ವಹಣೆ ಮಾಡುತ್ತಿರುವ ಸಂಸ್ಥೆಗಳ ವಿರುದ್ಧ ತನಿಖೆಗೆ ಆದೇಶಿಸಿದೆ. ಇದರ ಜೊತೆಯಲ್ಲೇ ಚೆಫ್ ಟಾಕ್ ಹಾಸ್ಪಿಟಾಲಿಟಿ ಸರ್ವೀಸ್ ಹಾಗೂ ರಿವಾಡ್ರ್ಸ್ ಸಂಸ್ಥೆಗಳ ವಿರುದ್ಧ ಸಿಎಂ ತನಿಖೆಗೆ ಆದೇಶ ನೀಡಿದ್ದಾರೆ.

ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣ ಹಾಗೂ ಗ್ರಾಹಕರ ಸಂಖ್ಯೆಯಲ್ಲಿ ಅವ್ಯವಹಾರ ನಡೆದಿರುವ ಕುರಿತು ‘ಪಬ್ಲಿಕ್ ಟಿವಿ’ ವಿಸ್ತøತ ವರದಿ ಮಾಡಿತ್ತು. 174 ಇಂದಿರಾ ಕ್ಯಾಂಟೀನ್, 15 ಮೊಬೈಲ್ ಕ್ಯಾಂಟಿನ್‍ಗಳಲ್ಲಿ ಪ್ರತಿ ತಿಂಗಳು ಸುಮಾರು 62.70 ಲಕ್ಷ ಜನರು ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟ ಮಾಡುತ್ತಿದ್ದಾರೆ ಎಂಬ ಮಹಿತಿಯನ್ನು ನೀಡಿ ಅಪಾರ ಮೊತ್ತದ ಸಬ್ಸಿಡಿಯನ್ನು ಪಡೆಯುತ್ತಿರುವ ಮಾಹಿತಿ ಲಭ್ಯವಾಗಿದೆ.

174 ಇಂದಿರಾ ಕ್ಯಾಂಟೀನ್, 15 ಮೊಬೈಲ್ ಕ್ಯಾಂಟೀನ್‍ಗಳಲ್ಲಿ ಪ್ರತಿ ತಿಂಗಳು 6.82 ಕೋಟಿ ರೂ. ಸಬ್ಸಿಡಿ ಹಣ ಪಡೆಯುತ್ತಿವೆ. ವಾಸ್ತವವಾಗಿ ಈ ಅಂಕಿಅಂಶಗಳು ತಪ್ಪು ಮಾಹಿತಿಯಿಂದ ಕೂಡಿದ್ದು, ಅಪಾರ ಪ್ರಮಾಣದ ಸಬ್ಸಿಡಿಯನ್ನು ವಂಚಿಸಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿದೆ. ಈ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಾಗಿ ಈ ಬಗ್ಗೆ ಕೂಡಲೇ ಪರಿಶೀಲಿಸಿ ತನಿಖಾ ವರದಿ ಸಲ್ಲಿಸುವಂತೆ ಸಿಎಂ ಯಡಿಯೂರಪ್ಪ ಆದೇಶಿಸಿದ್ದಾರೆ.

ಮೊದಲಿನಿಂದಲೂ ಇಂದಿರಾ ಕ್ಯಾಂಟೀನ್ ಕುರಿತು ಯಡಿಯೂರಪ್ಪನವರಿಗೆ ಅಸಮಾಧಾನವಿತ್ತು. ಅಲ್ಲದೆ, ಅಧಿಕಾರಕ್ಕೆ ಬಂದ ನಂತರವೂ ಸಹ ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಬೇಕು ಎಂಬ ಚಿಂತನೆ ನಡೆಸಿದ್ದರು. ಇದೀಗ ಅಕ್ರಮದ ಕುರಿತು ತನಿಖೆಗೆ ಆದೇಶಿಸಿದ್ದು, ಈ ಮೂಲಕ ಇಂದಿರಾ ಕ್ಯಾಂಟೀನ್ ಮುಚ್ಚುವ ಚಿಂತನೆ ನಡೆಸಿದ್ದಾರಾ ಎಂಬ ಅನುಮಾನ ಎದ್ದಿದೆ.

Share This Article
Leave a Comment

Leave a Reply

Your email address will not be published. Required fields are marked *