ಇಂಡಿಗೋ ಸಮಸ್ಯೆ – 9,55,591 ಟಿಕೆಟ್‌ ರದ್ದು, 827 ಕೋಟಿ ರೂ. ರೀ ಫಂಡ್

2 Min Read

ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದ (IndiGo) ಸಂಚಾರ ವ್ಯತ್ಯಯ, ವಿಮಾನ ವಿಳಂಬ ಸಮಸ್ಯೆ 7ನೇ ದಿನವೂ ಮುಂದುವರಿದಿದೆ. ಇದರಿಂದಾಗಿ ಒಂದೇ ವಾರದಲ್ಲಿ 5 ಲಕ್ಷಕ್ಕೂ ಅಧಿಕ ಟಿಕೆಟ್‌ಗಳನ್ನ (PNR) ರದ್ದುಗೊಳಿಸಲಾಗಿದ್ದು, 569.65 ಕೋಟಿ ರೂ.ಗಳನ್ನ ಮರುಪಾವತಿ ಮಾಡಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ (DGCA) ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

ಡಿಸೆಂಬರ್‌ 1 ರಿಂದ ಡಿ.7ರ ನಡುವೆ ಒಟ್ಟು 5,86,705 ಟಿಕೆಟ್‌ ರದ್ದುಗೊಳಿಸಿ 569.65 ಕೋಟಿ ರೂ.ಗಳನ್ನ ಮರು ಪಾವತಿ ಮಾಡಲಾಗಿದೆ. ಇನ್ನೂ ನವಂಬರ್‌ 21 ರಿಂದ ಡಿಸೆಂಬರ್‌ 7ರ ವರೆಗೆ ಒಟ್ಟು 9,55,591 ಟಿಕೆಟ್‌ ರದ್ದುಗೊಳಿಸಿದ್ದು, ಒಟ್ಟು 827 ಕೋಟಿ ರೂ.ಗಳನ್ನ ಮರುಪಾವತಿ (Refunded) ಮಾಡಿದೆ. ಅಲ್ಲದೇ ಒಟ್ಟು 9,000 ಲಗೇಜ್‌ ಬ್ಯಾಗ್‌ಗಳ ಪೈಕಿ 4,500 ಬ್ಯಾಗ್‌ಗಳನ್ನ ಗ್ರಾಹಕರಿಗೆ ಹಿಂದಿರುಗಿಸಲಾಗಿದೆ. ಮುಂದಿನ 36 ಗಂಟೆಗಳಲ್ಲಿ ಬಾಕಿ ಬ್ಯಾಗ್‌ಗಳನ್ನೂ ತಲುಪಿಸುವ ಗುರಿ ಹೊಂದಿದೆ ಎಂದು ಸಚಿವಾಲಯ ತಿಳಿಸಿದೆ.

1,800 ವಿಮಾನಗಳ ಕಾರ್ಯಾಚರಣೆ
ಇಂದು ಇಂಡಿಗೋ 138 ಸ್ಥಳಗಳ ಪೈಕಿ 137 ಸ್ಥಳಗಳಿಗೆ 1,802 ವಿಮಾನಗಳನ್ನ ನಿಯೋಜನೆ ಮಾಡಿದೆ. ಇದರ ಹೊರತಾಗಿಯೂ 500 ವಿಮಾನಗಳ ಹಾರಾಟ ರದ್ದಾಗಿದೆ ಎಂದು ವಿಮಾನಯಾನ ಸಚಿವಾಲಯ ಹೇಳಿದೆ. ಇದನ್ನೂ ಓದಿ: ದೇಶದಲ್ಲಿ ಹೊಸ ವಿಮಾನಯಾನ ಕಂಪನಿ ಆರಂಭಿಸಲು ಬೆಸ್ಟ್‌ ಟೈಂ : ರಾಮ್ ಮೋಹನ್ ನಾಯ್ಡು

ಬೆಂಗಳೂರಲ್ಲಿ 60ಕ್ಕೂ ಅಧಿಕ ವಿಮಾನ ಹಾರಾಟ ರದ್ದು
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (Bengaluru Kempegowda Airport) 6 ದಿನಗಳಿಂದ ಇಂಡಿಗೋ ವಿಮಾನಗಳ ಹಾರಾಟದಲ್ಲಿ ಅವ್ಯವಸ್ಥೆ ಉಂಟಾಗಿದ್ದು, ಇಂದಿಗೆ ಈ ಸಮಸ್ಯೆ 7ನೇ ದಿನಕ್ಕೆ ತಲುಪಿದೆ. ಡಿಸೆಂಬರ್ 5 ರ ಒಂದೇ ದಿನದಂದು 1,000 ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡಿದ್ದು, ಇದುವರೆಗೆ ಸಾವಿರಾರು ಪ್ರಯಾಣಿಕರು ಸಂಕಷ್ಟ ಎದುರಿಸಿದ್ದಾರೆ. ಇಂದೂ ಸಹ ಕೆಂಪೇಗೌಡ ಏರ್ಪೋರ್ಟ್‌ನಲ್ಲಿ 60ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದಾಗಿವೆ. ಬೆಂಗಳೂರು ಮಾತ್ರವಲ್ಲದೇ ದೇಶಾದ್ಯಂತ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಇಂಡಿಗೋ ವಿಮಾನಗಳ ವ್ಯಾಪಕ ರದ್ದತಿಯಿಂದಾಗಿ ಭಾರತದಾದ್ಯಂತ ವಿಮಾನ ಪ್ರಯಾಣ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಇದನ್ನೂ ಓದಿ: ಇಂಡಿಗೋ ವಿಮಾನ ಬಿಕ್ಕಟ್ಟು – ತುರ್ತು ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

ಬೆಳಗ್ಗೆಯಿಂದ ಮಧ್ಯರಾತ್ರಿಯ ಒಳಗಾಗಿ ಬೆಂಗಳೂರು ಏರ್ಪೋರ್ಟ್‌ನಿಂದ ನಿರ್ಗಮಿಸಬೇಕಿದ್ದ 64 ಮತ್ತು ಆಗಮಿಸಬೇಕಿದ್ದ 62 ವಿಮಾನಗಳು ಸೇರಿ ಒಟ್ಟೂ 126 ವಿಮಾನಗಳು ರದ್ದಾಗಿವೆ. ರದ್ದತಿ ಕುರಿತು ಇಂಡಿಗೋ ಏರ್‌ಲೈನ್ಸ್‌ ಸಿಬ್ಬಂದಿ 5 ಗಂಟೆ ಮುಂಚೆಯೇ ಪ್ರಯಾಣಿಕರಿಗೆ ಮುಂಚಿತವಾಗಿ ಸಂದೇಶ ಕಳುಹಿಸಿದ್ದ ಕಾರಣ ಪ್ರಯಾಣಿಕರು ಏರ್‌ಪೋರ್ಟ್‌ಗೆ ಬಂದಿಲ್ಲ ಎಂದು ತಿಳಿದುಬಂದಿದೆ. ದೆಹಲಿ, ಲಕ್ನೋ, ಮುಂಬೈ, ಹೈದರಾಬಾದ್, ಭುವನೇಶ್ವರ, ರಾಯಪುರ, ಪಾಟ್ನಾ, ಅಮೃತಸರ್ ವಿಮಾನಗಳು ಕ್ಯಾನ್ಸಲ್ ಆಗಿವೆ.. ಇನ್ನು ಕೆಲವರು ಏರ್‌ಪೋರ್ಟ್‌ಗೆ ಬಂದಿದ್ದು ಸಂಕಷ್ಟ ಎದುರಿಸಿದ್ದಾರೆ. ಇದನ್ನೂ ಓದಿ: ಮುಂದುವರಿದ `ಇಂಡಿಗೋ’ ಸಮಸ್ಯೆ: ಬೆಂಗಳೂರಲ್ಲಿ 127 ಸೇರಿ ದೇಶಾದ್ಯಂತ 450ಕ್ಕೂ ಹೆಚ್ಚು ವಿಮಾನಗಳು ರದ್ದು 

Share This Article