ಈಗಲೂ ಭಾರತದ ಈ ನಗರದಲ್ಲಿ ಆಟೋ, ಟ್ಯಾಕ್ಸಿ ಇಲ್ವೇ ಇಲ್ಲ – ಲಿಫ್ಟ್‌ನಲ್ಲೇ ಜೀವನ

By
4 Min Read

ಒಂದೆಡೆ ಭಾರತ (India) ಅಭಿವೃದ್ಧಿಯ ದಾಪುಗಾಲಿಡುತ್ತಾ ಸಾಗುತ್ತಿದೆ. ವಿಶ್ವದ ಬಲಿಷ್ಠ ರಾಷ್ಟ್ರಗಳನ್ನು ಹಿಂದಿಕ್ಕಿ 2038ರ ವೇಳೆಗೆ ವಿಶ್ವದ 2ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವ ನಿರೀಕ್ಷೆಯಿದೆ. ನಿರ್ಮಾಣಗೊಳ್ಳುತ್ತಿರುವ ಹೊಸ ಹೊಸ ಹೆದ್ದಾರಿಗಳು (National Highways) ದೇಶದ ಅಭಿವೃದ್ಧಿಯ ಪಥವನ್ನೇ ಬದಲಾಯಿಸುತ್ತಿವೆ. ಅತ್ಯಾಧುನಿಕ ರೈಲು, ಬಸ್‌ಗಳ ಸೇವೆಯನ್ನು (Train Bus Service) ನೀಡುತ್ತಾ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿವೆ. ಇದು ಒಂದು ಮುಖವಾದ್ರೆ ಇಂದಿಗೂ ಆಟೋ ಟ್ಯಾಕ್ಸಿಗಳೇ ಇಲ್ಲದ ಊರು, ಬ್ಲ್ಯಾಕ್‌ ಅಂಡ್‌ ವೈಟ್‌ ಟಿವಿ ನೋಡಿಕೊಂಡು, ಮೊಬೈಲ್‌ ನೆಟ್‌ವರ್ಕ್‌ ಸಂಪರ್ಕವೇ ಇಲ್ಲದ ಊರುಗಳೂ ಇವೆ ಅಂದ್ರೆ ನೀವು ನಂಬಲೇಬೆಕು.

ಹೌದು. ಭಾರತದ (India) ಈ ಹಳ್ಳಿಯಲ್ಲಿ ಇಂದಿಗೂ ಒಂದೇ ಒಂದು ಆಟೋ ಟ್ಯಾಕ್ಸಿ ಕೂಡ ಇಲ್ಲ. ಪರ್ವತ ದುರ್ಗಮ ಕಾಡು, ಪರ್ವತಗಳ ನಡುವೆ ನೆಲೆಗೊಂಡಿರುವ ಈ ಊರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಾಕಷ್ಟು ಪ್ರಯತ್ನ ನಡೆದ ಹೊರತಾಗಿಯೂ ಅವು ವಿಫಲವಾದವು. ಬಳಿಕ ಜನರು ಈ ನಗರದಲ್ಲಿ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಿಂದ ಲಿಫ್ಟ್‌ ತೆಗೆದುಕೊಳ್ಳಲು ಶುರು ಮಾಡಿದ್ರು. ಈಗ ಅದೇ ಒಂದು ಸಂಪ್ರದಾಯದ ಆಗಿಬಿಟ್ಟಿದೆ. ಅಷ್ಟಕ್ಕೂ ಆ ನಗರ ಯಾವುದು? ಭಾರತದ ಯಾವ ರಾಜ್ಯದಲ್ಲಿದೆ? ಅಲ್ಲಿನ ಚಿತ್ರಣ ಹೇಗಿದೆ? ಎಂಬುದನ್ನು ತಿಳಿಯೋಣ…

ಹೌದು.. ಈಗ ನಿಮಗೆ ಹೇಳ್ತಿರೋದು ದುರ್ಗಮ ಗುಡ್ಡಗಾಡು ಪ್ರದೇಶಗಳಲ್ಲಿರುವ ಛತ್ತಿಸ್‌ಗಢದ ಚಿರ್ಮಿರಿ ನಗರದ (Chhattisgarh’s Chirmiri City) ಬಗ್ಗೆ. ಕಲ್ಲಿದ್ದಲು ನಗರ, ಗಣಿನಾಡು ಎಂದೇ ಹೆಸರಾಗಿರುವ ಈ ನಗರ ಮತ್ತೊಂದು ವಿಶಿಷ್ಟ ಸಂಸ್ಕೃತಿಗೂ ಹೆಸರು ವಾಸಿಯಾಗಿದೆ. ಇಂದಿಗೂ ಕೂಡ ಈ ನಗರದಲ್ಲಿ ಒಂದೇ ಒಂದು ಆಟೋ, ಟಿಟಿ ಅಥವಾ ಟ್ಯಾಕ್ಸಿಯಾಗಲಿ ಹೊಂದಿಲ್ಲ. ಹಾಗಾಗಿ ಈ ಊರಿನ ಜನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಲಿಫ್ಟ್‌ ಪಡೆದೇ ಹೋಗಲು ಬಯಸುತ್ತಾರೆ.

ಚಿರ್ಮಿರಿ 85 ಸಾವಿರ ಜನಸಂಖ್ಯೆ, 29 ಕಿಮೀಗಿಂತಲೂ ಕಡಿಮೆ ವಿಸ್ತೀರ್ಣ ಹೊಂದಿದೆ. ನಗರವು ಪೋಡಿ, ಹಲ್ಡಿ ಬಾರಿ, ಬಡಾ ಬಜಾರ್, ಡೊಮ್ನ್ ಹಿಲ್, ಗೆಹ್ಲಾಪಾನಿ ಮತ್ತು ಕೊರಿಯಾ ಕೊಲಿಯರಿಯಂತಹ ಪ್ರದೇಶಗಳನ್ನ ಒಳಗೊಂಡಿದ್ದು, ಒಂದೊಂದು ಊರುಗಳಿಗೆ ಕನಿಷ್ಠ 1 ರಿಂದ 7 ಕಿ.ಮೀ. ಅಂತರವಿದೆ. ಇಲ್ಲಿನ ದುರ್ಗಮ ಹಾದಿ, ದಟ್ಟ ಅರಣ್ಯದಿಂದ ಕೂಡಿದ ಭೌಗೋಳಿಕ ವಾತಾವರಣದಿಂದಾಗಿಯೇ ಸಾರಿಗೆ ಸೌಲಭ್ಯದಿಂದ ವಂಚಿತವಾಗಿದೆ. ಆಗಾಗ್ಗೆ ಕೆಲವೊಂದು ಗೂಡ್ಸ್‌ ಜೀಪ್‌ಗಳು ಈ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಚಲಿಸುತ್ತವೆ. ಅದೇ ಇಲ್ಲಿನ ಜನರಿಗೆ ಆಧಾರ.

ಲಿಫ್ಟ್‌ ಪಡೆಯುವುದೇ ಅಭ್ಯಾಸ ಆಗೋಯ್ತು
ಈ ಮೊದಲು ಈ ನಗರ ಅವಿಭಜಿತ ಮಧ್ಯಪ್ರದೇಶಕ್ಕೆ ಸೇರಿತ್ತು. ಕಪ್ಪು ವಜ್ರದ ನಗರ ಎಂದೇ ಕರೆಸಿಕೊಳ್ಳುವ ಈ ಊರಿಗೆ ಒಡಿಶಾ, ಬಿಹಾರ, ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಿಂದಲೂ ಗಣಿ ಕೆಲಸಕ್ಕೆ ಬರುತ್ತಾರೆ. ಆರಂಭದಲ್ಲಿ ಬೆರಳೆಣಿಕೆ ಕಾರ್ಮಿಕರು ಸ್ಕೂಟರ್‌ಗಳನ್ನ ತರುತ್ತಿದ್ದರು. ಆದ್ರೆ ಇಲ್ಲಿನ ದುರ್ಗಮ ಹಾದಿಯಿಂದ ಸಂಚರಿಸೋದೂ ಕಷ್ಟವಾಗುತ್ತಿತ್ತು. ಕೆಲವು ಕೆಲವೇ ದಿನಗಳಲ್ಲಿ ಕೆಟ್ಟುಹೋಗುತ್ತಿದ್ದವು. ಹಾಗಾಗಿ ಅವರು ಈ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆವರೆಗೆ ಹಾದುಹೋಗುವವರಿಂದ ಲಿಫ್ಟ್‌ ತೆಗೆದುಕೊಳ್ಳಲು ಪ್ರಾರಂಭಿಸಿದರು. ಕಾಲಾನಂತರದಲ್ಲಿ ಇದೇ ಒಂದು ಸಂಪ್ರದಾಯವಾಗಿ ಮಾರ್ಪಟ್ಟಿತು. ಇಂದಿಗೂ ರಸ್ತೆ ಬದಿಯಲ್ಲಿ ಯಾರಾದ್ರೂ ಕಾಯುತ್ತಿರುವುದು ಕಂಡರೆ ಕಾರು ಚಾಲಕರು ಅಥವಾ ಬೈಕ್‌ ಸವಾರರು, ಅಪರಿಚಿತರಾಗಿದ್ದರೂ ಇಲ್ಲಿನ ಜನರಿಗೆ ತಾವಾಗಿಯೇ ಲಿಫ್ಟ್‌ ಕೊಡುತ್ತಾರೆ ಅನ್ನೋದು ವಿಶೇಷ.

ಪ್ರಯತ್ನಗಳೆಲ್ಲವೂ ಮಣ್ಣುಪಾಲು
ಚಿರ್ಮಿರಿಯ ಭೌಗೋಳಿಕ ಪರಿಸ್ಥಿತಿ ಅತ್ಯಂತ ಕಠಿಣವಾಗಿದೆ. ಅದರಲ್ಲೂ ಈ ನಗರಕ್ಕೆ ಸೇರಿದ ಅತ್ಯಂತ ದಟ್ಟಾರಣ್ಯದ ಪ್ರದೇಶವೆಂದ್ರೆ ಹಲ್ದಿಬರಿ, ಇದು ಚಿರ್ಮಿರಿಯ ಪೋಡಿಯಿಂದ 3 ಕಿಮೀ ದೂರದಲ್ಲಿದೆ. ಇಲ್ಲಿಗೆ ಯಾವುದೇ ದಿಕ್ಕಿನಲ್ಲಿ ಬರಬೇಕಾದ್ರೂ ಅರ್ಧಗಂಟೆ ಕಾಡು ರಸ್ತೆಯಲ್ಲಿ ನಡೆದುಕೊಂಡು ಬರಬೇಕು.

ಚಿರ್ಮಿತಿಯ ಮಾಜಿ ಮೇಯರ್‌ ದಮ್ರು ರೆಡ್ಡಿ ಈ ನಗರಕ್ಕೆ ಬಸ್‌ ಸೇವೆ ಕಲ್ಪಿಸಲು ಕೈಲಾದಷ್ಟು ಪ್ರಯತ್ನ ಮಾಡಿದ್ರು. ಆದ್ರೆ ಅದೂ ಕಾರ್ಯರೂಪಕ್ಕೆ ಬರಲಿಲ್ಲ. ಏಕೆಂದ್ರೆ ಇಲ್ಲಿನ ದುರ್ಗಮ ಹಾದಿ, ದಟ್ಟ ಕಾಡಿನ ರಸ್ತೆಯ ಕಾರಣದಿಂದಾಗಿ ಕೆಲ ಬಸ್‌ಗಳು ಕೆಟ್ಟು ಹೋಗುತ್ತಿದ್ದವು. ಅಷ್ಟೊತ್ತಿಗೆ ಸರ್ಕಾರ ಇಲ್ಲಿನ ಸಾರಿಗೆ ಸೌಲಭ್ಯಕ್ಕೆ ನೀಡಿದ್ದ 10 ವರ್ಷ ಟೆಂಡರ್‌ ಕೂಡ ಮುಗಿಯಿತು. ಇಳಿಜಾರು ಪ್ರದೇಶವಾದ್ದರಿಂದ ಇಲ್ಲಿಗೆ ಆಟೋ, ಟ್ಯಾಕ್ಸಿ ಸೌಲಭ್ಯಗಳೂ ಸಹ ಪ್ರಯೋಜನಕಾರಿಯಾಗಲಿಲ್ಲ. ಹೀಗಾಗಿ ಜನ ಇಲ್ಲಿ ಲಿಫ್ಟ್‌ ಸಂಸ್ಕೃತಿಗೆ ಹೊಂದಿಕೊಂಡಿದ್ದಾರೆ. ಇಂದಿಗೂ ಲಿಫ್ಟ್‌ ತೆಗೆದುಕೊಂಡು ಬಳಿಕ ಕಡಿದಾದದ ಹಾದಿಯಲ್ಲಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇಲ್ಲಿನ ಜನರದ್ದು. ಸರ್ಕಾರಕ್ಕೆ ಸದ್ಯ ಹೊಸ ಬಸ್‌ಗಳ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಲಾಗಿದೆ. ಇಂದಿಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ.

29 ಕಿಮೀ ವಿಸ್ತೀರ್ಣ, 8 ವಿಭಿನ್ನ ದ್ವೀಪಗಳ ನಡುವಿನ ನಗರ
ಕಪ್ಪುವಜ್ರದ ನಿಕ್ಷೇಪ ನಗರವಾದ ಚಿರ್ಮಿರಿ 29 ಕಿಮೀ ವಿಸ್ತೀರ್ಣ ಹೊಂದಿದ್ದು, 8 ವಿಭಿನ್ನ ದ್ವೀಪಗಳ ನಡುವೆ ನೆಲೆಗೊಂಡಿದೆ. ಈ ಊರಿಗೆ ಇನ್ನೂ ಆಟೋ, ಟ್ಯಾಕ್ಸಿ ತಲುಪದ ಕಾರಣ ಚಿರ್ಮಿರಿಯನ್ನು ಇಂದಿಗೂ ಆಟೋ, ಟ್ಯಾಕ್ಸಿಗಳಲ್ಲಿದ ʻಲಿಫ್ಟ್‌ʼ ಸಿಟಿ ಎಂದೇ ಕರೆಯುತ್ತಾರೆ. ಇನ್ಮುಂದಾದರೂ ಇಲ್ಲಿಗೆ ಸಾರಿಗೆ ಸೌಲಭ್ಯ ಸಿಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

Share This Article