1 ಕಾಲಿಲ್ಲದಿದ್ದರೂ ದೇಶಕ್ಕೆ ಕೀರ್ತಿ ತಂದ ಚಿನ್ನದ ಹುಡುಗಿ – ಸಾಹಸದ ಕಥೆ ಓದಿ

Public TV
3 Min Read

– ಮಾನಸಿ ಜೋಶಿ ಭಾರತದ ಮೊದಲ ಪ್ಯಾರಾ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್
– ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ

ನವದೆಹಲಿ: ಸ್ವಿಜರ್‌ಲ್ಯಾಂಡ್‌ನಲ್ಲಿ ನಡೆದ ಪ್ಯಾರಾ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ಮಾನಸಿ ಜೋಶಿ, ಭಾರತದ ಮೊಟ್ಟಮೊದಲ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿ ಇತಿಹಾಸ ಸೃಷ್ಟಿಸಿದ್ದಾರೆ.

ಮೂರು ಬಾರಿ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದ ಪಾರುಲ್ ಪರ್ಮರ್ ಅವರನ್ನು 21-12 ಹಾಗೂ 21-7 ನೇರ ಗೇಮಿನಿಂದ ಮಣಿಸಿ, ಮಾನಸಿ ಅವರು ಚಾಂಪಿಯನ್ ಆಗಿದ್ದಾರೆ. ಈ ಹಿಂದೆ ಪಿ.ವಿ.ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನು ಬರೆದಿದ್ದರು. ಈ ಸಿಹಿ ಸುದ್ದಿಯ ಬೆನ್ನಲ್ಲೇ ಈಗ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಪಟ್ಟ ಕೂಡ ಭಾರತೀಯ ಆಟಗಾರ್ತಿಯ ಮುಡಿಗೇರಿದೆ. ಇದನ್ನೂ ಓದಿ:ಸೋಲು, ಸೋಲು, ಸೋಲು – ಕುಗ್ಗದೇ ಸ್ವರ್ಣಕ್ಕೆ ಮುತ್ತಿಟ್ಟ ಸಿಂಧು ಕಥೆ

2011ರಲ್ಲಿ ರಸ್ತೆ ಅಪಘಾತದಲ್ಲಿ ಮಾನಸಿ ಜೋಶಿ ಒಂದು ಕಾಲನ್ನು ಕಳೆದುಕೊಂಡಿದ್ದರು. ಲಾರಿಯೊಂದು ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದ ಮಾನಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಅವರ ಕಾಲಿಗೆ ತೀವ್ರ ಪೆಟ್ಟಾಗಿದ್ದ ಕಾರಣಕ್ಕೆ ಗ್ಯಾಂಗ್ರಿನ್ ಆಗಿ ಅವರ ಒಂದು ಕಾಲನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಕತ್ತರಿಸಿದ್ದರು. ಬಳಿಕ ಪ್ರೋಸ್ಟೆಟಿಕ್ ಕಾಲನ್ನು ಅಳವಡಿಸಿಕೊಂಡು ಮಾನಸಿ ನಡೆಯಲು ಆರಂಭಿಸಿದರು.

2012ರಲ್ಲಿ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ತಮ್ಮ ಹೊಸ ಪಯಣ ಆರಂಭಿಸಿದರು. ಬಳಿಕ ಅಂತರ-ಕಂಪನಿ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದರು. ಆ ಚಿನ್ನದ ಪದಕವೇ ಅವರು ಒಂದೊಳ್ಳೆ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ್ತಿಯಾಗಲು ಸ್ಫೂರ್ತಿ ಆಯ್ತು. 2014ರಲ್ಲಿ ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಲು ಪ್ರಯತ್ನಿಸಿದ್ದರು, ಆದರೆ ಅವರ ಪ್ರಯತ್ನಕ್ಕೆ ಫಲ ಸಿಕ್ಕಿರಲಿಲ್ಲ. ಅದೇ ವರ್ಷ ಮಾನಸಿ ಅವರು ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕ ಗೆದ್ದಿದ್ದರು. 2015ರಲ್ಲಿ ಸ್ಪ್ಯಾನಿಶ್ ಪ್ಯಾರಾ ಇಂಟರ್‌ನ್ಯಾಷನಲ್‌ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ಅವರಿಗೆ ಆಟಗಾರ ರಾಕೇಶ್ ಪಾಂಡ್ಯ ಅವರು ಪಾರ್ಟ್‌ನರ್‌ ಆಗಿ ಸಿಕ್ಕರು. ಅಲ್ಲಿಂದ ಹಲವು ಅಂತರಾಷ್ಟ್ರೀಯ ಪಂದ್ಯದಲ್ಲಿ ಮಾನಸಿ ಹಾಗೂ ರಾಕೇಶ್ ಜೋಡಿ ಮೋಡಿ ಮಾಡಿತ್ತು.

ಪ್ಯಾರಾ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿರುವುದಕ್ಕೆ ಖುಷಿಯಾಗುತ್ತಿದೆ. ಇದು ನನ್ನ ವೃತ್ತಿ ಜೀವನದ ಚಿನ್ನದ ಕ್ಷಣ. ಚಾಂಪಿಯನ್ ಆಗುವುದು ಸುಲಭದ ಮಾತಲ್ಲ. ಅದಕ್ಕೆ ಸಾಕಷ್ಟು ಶ್ರಮಿಸಿದ್ದೇನೆ ಎಂದು ಮಾನಸಿ ಹೇಳಿದ್ದಾರೆ.

ಬಿಡಬ್ಲುಎಫ್ ಪ್ಯಾರಾ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ಗೆ ಎರಡು ತಿಂಗಳ ಮೊದಲು ನನಗೆ ತರಬೇತಿ ನೀಡಿದ ಪುಲ್ಲೆಲಾ ಗೋಪಿ ಚಂದ್ ಅಕಾಡೆಮಿ ಮತ್ತು ಅದರ ತರಬೇತಿದಾರರಾದ ಜೆ. ರಾಜೇಂದ್ರ ಕುಮಾರ್, ಎಲ್. ರಾಜು ಅವರಿಗೆ ಹೇಗೆ ಕೃತಜ್ಞತೆ ಸಲ್ಲಿಸಬೇಕು ಎಂದು ತಿಳಿಯುತ್ತಿಲ್ಲ. ಗೋಪಿ ಸರ್ ಅವರಿಗೂ ನಾನು ಸದಾ ಆಭಾರಿಯಾಗಿರುತ್ತೇನೆ ಎಂದು ಮಾನಸಿ ಅವರು ಖುಷಿಯನ್ನು ಹಂಚಿಕೊಂಡರು.

2020ರ ಪ್ಯಾರಾ ಒಲಿಂಪಿಕ್ಸ್ ಗೆ ಕೇವಲ ಒಂದು ವರ್ಷ ಬಾಕಿ ಇದೆ. ಹೀಗಾಗಿ ಪ್ಯಾರಾ ವಿಶ್ವ ಬ್ಯಾಡ್ಮಿಂಟನ್ ಚ್ಯಾಂಪಿಯನ್ ಮನಸಿ ತಮ್ಮ ಮುಂದಿನ ಗುರಿಯತ್ತ ಸಾಗಲು ಶ್ರಮಿಸುವುದಾಗಿ ಹೇಳಿದ್ದಾರೆ.

ಪ್ಯಾರಾ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಭಾರತೀಯ ತಂಡ ಒಟ್ಟು 12 ಪದಕಗಳನ್ನು ಗೆದ್ದಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಆಟಗಾರರಿಗೂ ಅಭಿನಂದನೆ ತಿಳಿಸಿದ್ದಾರೆ. ಜೊತೆಗೆ ಮಂಗಳವಾರದಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಪ್ಯಾರಾ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ವಿಜೇತರಿಗೆ 1.82 ಕೋಟಿ ರೂ. ಬಹುಮಾನದ ಚೆಕ್ ನೀಡಿ ಶುಭಕೋರಿದ್ದರು. ಅದರಲ್ಲಿ ಚಿನ್ನ ಗೆದ್ದ ಆಟಗಾರರಿಗೆ ತಲಾ 20 ಲಕ್ಷ ರೂ. ಬೆಳ್ಳಿ ಗೆದ್ದವರಿಗೆ ತಲಾ 14 ಲಕ್ಷ ಹಾಗೂ ಕಂಚು ಗೆದ್ದವರಿಗೆ ತಲಾ 8 ಲಕ್ಷ ರೂ. ಬಹುಮಾನ ಹಣ ವಿತರಿಸಲಾಗುತ್ತದೆ. ಇದರ ಜೊತೆಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ ಸಿಂಧು ಅವರಿಗೆ 10 ಲಕ್ಷ ರೂ. ಬಹುಮಾನ ನೀಡಿ ಕ್ರೀಡಾ ಸಚಿವರು ಅಭಿನಂದಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *