ಮೇಲ್ಸೇತುವೆ ಮೇಲೆ ವಾಹನ ಸಂಚಾರ- ಕೆಳಗೆ ಕಾಡು ಪ್ರಾಣಿಗಳ ಸ್ವಚ್ಛಂದ ಓಡಾಟ

Public TV
2 Min Read

– ದೇಶದ ಮೊದಲ ವನ್ಯಜೀವಿ ಕಾರಿಡಾರ್‌ಗೆ ಶಂಕು ಸ್ಥಾಪನೆ

ಡೆಹ್ರಾಡೂನ್: ಮೇಲ್ಸೇತುವೆ ಮೇಲೆ ವಾಹನ ಸಂಚಾರ ಮಾಡುತ್ತಿದ್ದರೆ, ಕೆಳಗೆ ಕಾಡು ಪ್ರಾಣಿಗಳ  ಸ್ವಚ್ಛಂದ ಓಡಾಟ ಮಾಡುವಂತೆ ಕಾರಿಡಾರ್  ಸ್ಥಾಪನೆ ಮಾಡಲು ಉತ್ತರಾಖಂಡದಲ್ಲಿ ಏಷ್ಯಾದ ಮೊದಲ ಎಲಿವೇಟೆಡ್ ವೈಲ್ಡ್ ಲೈಫ್ ಕಾರಿಡಾರ್ (Elevated Wildlife Corridor) ತಲೆಯೆತ್ತಲಿದೆ.

ವನ್ಯಜೀವಿಗಳು ಹಾಗೂ ವಾಹನಗಳ ಭಯವಿಲ್ಲದೆ ಮುಕ್ತವಾಗಿ ಸಂಚರಿಸುತ್ತಿದ್ದರೆ, ಅದರ ಮೇಲಿನ ಎಲಿವೇಟೇಡ್‌ ಹೆದ್ದಾರಿಯಲ್ಲಿ ಪ್ರವಾಸಿಗರು ಸಂಚರಿಸುತ್ತಾ ತಮ್ಮ ಕೆಳಗೆ ವನ್ಯಜೀವಿಗಳು ಕಾಡಿನಲ್ಲಿ ಸ್ವಚ್ಛಂದವಾಗಿ ವಿಹರಿಸುವುದನ್ನು ವೀಕ್ಷಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ  ಶಂಕುಸ್ಥಾಪನೆ ನೆರವೇರಿಸಿದ್ದಾರೆ. ದೆಹಲಿಯಿಂದ ಉತ್ತರಾಖಂಡದ ಡೆಹ್ರಾಡೂನ್ ಸಂಪರ್ಕಿಸುವ ಎಕನಾಮಿಕ್ ಕಾರಿಡಾರ್ ಯೋಜನೆಯ ಭಾಗವಾಗಿ ಈ ವಿಶಿಷ್ಟ ಪ್ರಾಣಿಗಳ ಹೆದ್ದಾರಿ ನಿರ್ಮಾಣವಾಗಲಿದೆ.

ದೆಹಲಿ, ಸಹಾರಣ್‍ಪುರ, ಡೆಹ್ರಾಡೂನ್ ಎಕನಾಮಿಕ್ ಕಾರಿಡಾರ್ ಯೋಜನೆಯನ್ನು  8300 ಕೋಟಿ ರು. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಅದು 2024ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಹೆದ್ದಾರಿಯು ದೆಹಲಿ ಮತ್ತು ಪ್ರವಾಸಿಗರ ಸ್ವರ್ಗವಾಗಿರುವ ಡೆಹ್ರಾಡೂನ್ ನಡುವಿನ ಪ್ರಯಾಣದ ಅವಧಿಯನ್ನು 6 ಗಂಟೆಯಿಂದ 2.5 ಗಂಟೆಗೆ ಇಳಿಸಲಿದೆ.

ಎಲಿವೇಟೆಡ್ ಹೆದ್ದಾರಿಯು ಶಿವಾಲಿಕ್ ಪರ್ವತ ಶ್ರೇಣಿಯಲ್ಲಿರುವ ರಾಜಾಜಿ ಹುಲಿ ರಕ್ಷಿತಾರಣ್ಯದ ಪಕ್ಕ ಹಾದುಹೋಗುತ್ತದೆ. ಇದರ ಕೆಳಗಿನ 16 ಕಿ.ಮೀ. ಉದ್ದದ ಉದ್ದೇಶಿತ ವೈಲ್ಡ್‍ಲೈಫ್ ಕಾರಿಡಾರ್ ಜನರ ಕಣ್ಣಿಗೊಂದು ಹಬ್ಬವಾಗಲಿದೆ ಎಂದು ಉತ್ತರಾಖಂಡ ಸರ್ಕಾರ ಹೇಳಿದೆ. ದೆಹಲಿ-ಡೆಹ್ರಾಡೂನ್ ಎಕನಾಮಿಕ್ ಕಾರಿಡಾರ್‍ಗೆ 12 ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗುತ್ತಿದೆ. ಇದನ್ನು ಪ್ರಶ್ನಿಸಿ ಪರಿಸರವಾದಿಗಳು ಸುಪ್ರೀಂಕೋರ್ಟ್‍ಗೆ ಹೋಗಿದ್ದಾರೆ. ಪ್ರಕರಣದ ವಿಚಾರಣೆ ನ್ಯಾಯಾಧಿಕರಣದಲ್ಲಿ ನಡೆಯುತ್ತಿದೆ.

ಹೆದ್ದಾರಿಯ ವಿಶೇಷತೆ ಏನು ಗೊತ್ತಾ?:
* ಉತ್ತರಾಖಂಡದ ರಾಜಾಜಿ ಹುಲಿ ರಕ್ಷಿತಾರಣ್ಯದಲ್ಲಿ ಎನ್‍ಎಚ್ 72ಎ ಇದೆ, ಇದು ಆನೆ ಸೇರಿದಂತೆ ನಾನಾ ತರಹದ ವನ್ಯಜೀವಿಗಳು ಸದಾ ಸಂಚರಿಸುವ ಸ್ಥಳವಾಗಿದೆ.
* ಈಗ ಈ ಹೆದ್ದಾರಿಯ ಮೇಲೆ 16 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣ
* ಮೇಲ್ಸೇತುವೆ ನಿರ್ಮಾಣ ನಂತರ ಹಳೆಯ 16 ಕಿ.ಮೀ. ರಸ್ತೆ ಪ್ರಾಣಿಗಳ ಸಂಚಾರಕ್ಕೆ
* ಮೇಲ್ಸೇತುವೆ ಮೇಲೆ ಹೋಗುವವರು ಪ್ರಾಣಿಗಳ ಸಂಚಾರ ಕಣ್ತುಂಬಿಕೊಳ್ಳಬಹುದು
* ಈ ವಿಶಿಷ್ಟ ಹೆದ್ದಾರಿ ನಿರ್ಮಾಣವಾಗುತ್ತಿರುವುದು ಏಷ್ಯಾದಲ್ಲೇ ಮೊದಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *