ಪ್ರತಿಭಟನಾಕಾರರಿಂದ ಹೋಟೆಲ್‌ಗೆ ಬೆಂಕಿ – ನೇಪಾಳದಲ್ಲಿ ಭಾರತದ ಮಹಿಳೆ ದುರ್ಮರಣ

Public TV
1 Min Read

ಕಠ್ಮಂಡು: ನೇಪಾಳದ (Nepal) ರಾಜಧಾನಿ ಕಠ್ಮಂಡುವಿನಲ್ಲಿ (Kathmandu) ಪ್ರತಿಭಟನಾಕಾರರು ಹೋಟೆಲ್‌ಗೆ ಬೆಂಕಿ ಹಚ್ಚಿದ್ದರಿಂದ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ ಮೂಲದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

ಮೃತ ಮಹಿಖೆಯನ್ನು ರಾಜೇಶ್ ಗೋಲಾ (57) ಎಂದು ಗುರುತಿಸಲಾಗಿದೆ. ಅವರು ತಮ್ಮ ಪತಿ ರಾಮ್‌ವೀರ್ ಸಿಂಗ್ ಗೋಲಾ ಜೊತೆ ಸೆ.7 ರಂದು ನೇಪಾಳಕ್ಕೆ ತೆರಳಿದ್ದರು. ಈ ಸಮಯದಲ್ಲಿ ನೇಪಾಳದಲ್ಲಿ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಪ್ರತಿಭಟನಾಕಾರರು ಮನಸ್ಸಿಗೆ ಬಂದಂತೆ ಸಿಕ್ಕಸಿಕ್ಕ ಕಟ್ಟಡಗಳಿಗೆ ಹಾನಿ ಮಾಡಿದ್ದರು. ಅದೇ ರೀತಿ ರಾಮ್‌ವೀರ್‌ ಸಿಂಗ್‌ ಕುಟುಂಬ ತಂಗಿದ್ದ ಹೋಟೆಲ್‌ಗೆ ಸೆ.9 ರಂದು ಬೆಂಕಿ ಹಚ್ಚಿದ್ದರು. ಇದನ್ನೂ ಓದಿ: ರಾಮನನ್ನು ವಿರೋಧಿಸಿದ್ದಕ್ಕೆ ಅಧಿಕಾರ ಹೋಯ್ತು: ಭಾರತದ ಮೇಲೆ ಗೂಬೆ ಕೂರಿಸಿದ ನೇಪಾಳದ ಮಾಜಿ ಪ್ರಧಾನಿ

ಹೊತ್ತಿ ಉರಿಯುತ್ತಿದ್ದ ಹೋಟೆಲ್‌ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಗೋಲಾ ದಂಪತಿ ಪರದಾಡಿದ್ದರು. ಈ ವೇಳೆ ರಾಜೇಶ್‌ ಗೋಲಾ ಪತಿಯಿಂದ ಬೇರ್ಪಟ್ಟು, ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದಿದ್ದರು. ದುರಾದೃಷ್ಟವಶಾತ್‌ ಅವರು ಸಾವನ್ನಪ್ಪಿದ್ದಾರೆ.

ನೇಪಾಳದಲ್ಲಿ ನಡೆಯುತ್ತಿರುವ ಯುವಜನರ ದಂಗೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 31ಕ್ಕೆ ಏರಿದೆ. ಶವಗಳನ್ನು ಇರಿಸಲಾಗಿರುವ ತ್ರಿಭುವನ್ ವಿಶ್ವವಿದ್ಯಾಲಯ ಬೋಧನಾ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಪ್ರಕಾರ ಮೃತಪಟ್ಟ 5 ಪುರುಷರು ಮತ್ತು ಒಬ್ಬ ಮಹಿಳೆಯ ಗುರುತುಗಳು ಇನ್ನೂ ಪತ್ತೆಯಾಗಿಲ್ಲ. ಇದಲ್ಲದೇ ನೇಪಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಂಗಳವಾರ ಮುಚ್ಚಲಾಗಿತ್ತು.

ದೇಶದಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವ ಕಾರಣ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ನೇಪಾಳದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದರಿಂದ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಸಿಕ್ಕಿಕೊಳ್ಳುವಂತಾಗಿತ್ತು. ಸದ್ಯ ತ್ರಿಭುವನ್ ವಿಮಾನ ನಿಲ್ದಾಣ ಪನರಾರಂಭಗೊಂಡಿದ್ದು, ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಕಂಪನಿಗಳು ನೇಪಾಳದಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಕರೆತರಲು ಹೆಚ್ಚುವರಿ ವಿಮಾನಗಳನ್ನ ವ್ಯವಸ್ಥೆ ಮಾಡಿವೆ. ಇದನ್ನೂ ಓದಿ: ನೇಪಾಳ ದಂಗೆ | Gen-Z ನಲ್ಲಿ ಬಿರುಕು – ಮಧ್ಯಂತರ ಪ್ರಧಾನಿ ಹುದ್ದೆಗೆ ಸುಶೀಲಾ ಕರ್ಕಿ Vs ಕುಲ್ಮನ್ ನಡ್ವೆ ಫೈಟ್‌

Share This Article