ಅಮೆರಿಕದಲ್ಲಿ ಚಾಕು ಇರಿತ; 11 ದಿನ ಸಾವು-ಬದುಕಿನ ನಡುವೆ ಹೋರಾಡಿದ್ದ ಭಾರತೀಯ ವಿದ್ಯಾರ್ಥಿ ಕೊನೆಯುಸಿರು

Public TV
1 Min Read

ವಾಷಿಂಗ್ಟನ್: ಅಮೆರಿಕದ (America) ಇಂಡಿಯಾನಾದಲ್ಲಿ ಫಿಟ್‌ನೆಸ್ ಸೆಂಟರ್‌ನಲ್ಲಿ (Fitness Center) ಚಾಕು ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಭಾರತ ಮೂಲದ ವಿದ್ಯಾರ್ಥಿ (Indian Student) ವರುಣ್ ರಾಜ್ ಪುಚಾ (24) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಆತ ವ್ಯಾಸಂಗ ಮಾಡುತ್ತಿದ್ದ ವಿಶ್ವವಿದ್ಯಾಲಯ ತಿಳಿಸಿದೆ.

ವಾಲ್ಪಾರೈಸೊ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ವರುಣ್ (Varun Raj Pucha) ಅಕ್ಟೋಬರ್ 29 ರಂದು ಸಾರ್ವಜನಿಕ ಜಿಮ್‌ನಲ್ಲಿದ್ದಾಗ ದುಷ್ಕರ್ಮಿ ಜೋರ್ಡಾನ್ ಆಂಡ್ರೇಡ್ (24) ಎಂಬಾತ ಆತನ ತಲೆಗೆ ಚಾಕುವಿನಿಂದ ಇರಿದಿದ್ದ. ಘಟನೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.

ವಿದ್ಯಾರ್ಥಿ ಅಗಲಿಕೆ ಬಳಿಕ ಮಾಹಿತಿ ನೀಡಿರುವ ವಾಲ್ಪರೈಸೊ ವಿಶ್ವವಿದ್ಯಾಲಯ, ವರುಣ್ ರಾಜ್ ಪುಚ್ಚಾ ಅಗಲಿಕೆ ಸುದ್ದಿಯನ್ನು ನಾವು ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತಿದ್ದೇವೆ. ನಮ್ಮ ಕ್ಯಾಂಪಸ್ ಸಮುದಾಯದ ಭಾಗವಾಗಿದ್ದ ವಿದ್ಯಾರ್ಥಿಯನ್ನು ಕಳೆದುಕೊಂಡಿದ್ದೇವೆ. ಈ ನಷ್ಟಕ್ಕೆ ನಾವು ತೀವ್ರವಾಗಿ ವಿಷಾದಿಸುತ್ತೇವೆ. ನಾವು ಅಗಲಿದ ವಿದ್ಯಾರ್ಥಿ ವರುಣ್‌ನ ಕುಟುಂಬ ಮತ್ತು ಸ್ನೇಹಿತರೊಂದಿಗಿದ್ದೇವೆ ಎಂದು ಹೇಳಿದೆ. ಇದನ್ನೂ ಓದಿ: ಜಮ್ಮುವಿನಲ್ಲಿ ಉಗ್ರನ ಬೇಟೆಯಾಡಿದ ಭಾರತೀಯ ಸೇನೆ

ತೆಲಂಗಾಣದ ಖಮ್ಮಂ ಮೂಲದ ವರುಣ್ 2022ರ ಆಗಸ್ಟ್‌ನಲ್ಲಿ ಅಮೆರಿಕಗೆ ತೆರಳಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿದ್ದ. ಮುಂದಿನ ವರ್ಷ ತಮ್ಮ ಕೋರ್ಸ್ ಮುಗಿದ ಬಳಿಕ ಸ್ವದೇಶಕ್ಕೆ ಮರಳುವ ನಿರೀಕ್ಷೆಯಲ್ಲಿದ್ದ. ಆದರೆ ಅನಿರೀಕ್ಷಿತ ಘಟನೆಯಿಂದ ವಿದ್ಯಾರ್ಥಿಯ ಕುಟುಂಬ ಹಾಗೂ ವಿಶ್ವವಿದ್ಯಾಲಯ ಆಘಾತಕ್ಕೊಳಗಾಗಿದೆ. ಇದನ್ನೂ ಓದಿ: ಜೇಡ ಕಚ್ಚಿ ಖ್ಯಾತ ಗಾಯಕ ಸಾವು

Share This Article