– ಟಿಕೆಟ್‌ಗೆ ಅನುಸಾರವಾಗಿ ಲಗೇಜ್ ಪ್ರಮಾಣ ನಿಗದಿ
– ಆದಾಯ ಹೆಚ್ಚಳಕ್ಕೆ ರೈಲ್ವೆ ಇಲಾಖೆ ಪ್ಲ್ಯಾನ್
ಬೆಂಗಳೂರು: ಬೇರೊಂದು ಊರಿಗೆ ಪ್ರಯಾಣ ಮಾಡಬೇಕು ಅಂದುಕೊಂಡಿರುವವರು ಹೆಚ್ಚಾಗಿ ಅಗ್ಗದ ಮತ್ತು ಆರಾಮದಾಯಕವಾದ ರೈಲು ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ರೈಲಿನಲ್ಲಿ ಪ್ರಯಾಣ ಮಾಡುವಾಗ ಹಲವಾರು ವಸ್ತುಗಳನ್ನು, ಲಗೇಜ್‌ಗಳನ್ನು ಹೊತ್ತೊಯ್ಯಬಹುದಾಗಿತ್ತು. ಆದ್ರೆ ಈಗ ಅದಕ್ಕೆ ಭಾರತೀಯ ರೈಲ್ವೆ (Indian Railways) ಇಲಾಖೆ ಬ್ರೇಕ್ ನೀಡಲು ಮುಂದಾಗಿದೆ.
ಯೆಸ್. ಆದಾಯ ಹೆಚ್ಚಳಕ್ಕೆ ಮುಂದಾಗಿರುವ ಭಾರತೀಯ ರೈಲ್ವೆ ಇಲಾಖೆ ಶೀಘ್ಯದಲ್ಲೇ ಹೊಸ ರೂಲ್ಸ್ ಜಾರಿಗೊಳಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಅದರಂತೆ ಇನ್ಮುಂದೆ ರೈಲಿನಲ್ಲಿ ಪ್ರಯಾಣಿಸುವಾಗ ಹೆಚ್ಚುವರಿ ಲಗೇಜ್‌ಗೆ ಹೆಚ್ಚುವರಿ ಮೊತ್ತವನ್ನ ಪಾವತಿಸಬೇಕಾಗುತ್ತದೆ. ವಿಮಾನಗಳ ಮಾದರಿಯಲ್ಲಿಯೇ ರೈಲಿನಲ್ಲೂ ಲಗೇಜ್ ಸಾಗಿಸುವಂತೆ ಮಾಡಲು ರೈಲ್ವೆ ಇಲಾಖೆ ಈ ನಿಮಯ ಜಾರಿಗೆ ತರಲು ಮುಂದಾಗಿದೆ. ಕೋಚ್ ಶ್ರೇಣಿಗಳ ಆಧಾರದ ಮೇಲೆ ಹೆಚ್ಚುವರಿ ಲಗೇಜ್‌ಗೆ ಹೆಚ್ಚುವರ ದರ ನಿಗಡಿ ಮಾಡಲಿದೆ. ಹಾಗಾದರೆ ಎಷ್ಟು ಕೆ.ಜಿ ಲಗೇಜ್‌ಗೆ ಎಷ್ಟು ಹಣ ಪಾವತಿ ಮಾಡಬೇಕು ಗೊತ್ತಾ? ಮುಂದೆ ಓದಿ…
ಹೊಸ ನಿಯಮಗಳ ಪ್ರಕಾರ, ಎಸಿ ಮೊದಲನೇ ದರ್ಜೆಯಲ್ಲಿ 70 ಕೆ.ಜಿ, ಎಸಿ ಎರಡನೇ ದರ್ಜೆಯಲ್ಲಿ 50 ಕೆ.ಜಿ, ಎಸಿ ಮೂರನೇ ದರ್ಜೆ ಹಾಗೂ ಸ್ಲೀಪರ್ ಕೋಚ್‌ನಲ್ಲಿ 40 ಕೆ.ಜಿಗೆ ಅವಕಾಶವಿರುತ್ತದೆ. ಟಿಕೆಟ್‌ಗೆ ಅನುಗುಣವಾಗಿ ಲಗೇಜ್‌ಗೆ ದರ ನಿಗದಿ ಮಾಡಲಾಗುತ್ತದೆ. ನಿಯಮಿತಕ್ಕಿಂತಲೂ ಹೆಚ್ಚಿನ ತೂಕದ ಲಗೇಜ್ ಇದ್ದರೆ, ಉಳಿದ ಲಗೇಜ್‌ಗೆ ಹೆಚ್ಚುವರು ಹಣ ಪಾವತಿ ಮಾಡಬೇಕಾಗುತ್ತದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಇದಕ್ಕಾಗಿ ನಿಲ್ದಾಣದಲ್ಲಿ ಎಲೆಕ್ಟ್ರಾನಿಕ್ ವೇಯ್ಟ್ ಚೆಕಿಂಗ್ ಮಿಷಿನ್ ಕೂಡ ಇರಿಸಲಾಗುತ್ತದೆ. ಇದರಲ್ಲಿ ಲಗೇಜ್ ತೂಕ ಪರಿಶೀಲಿಸಿದ ಬಳಿಕವೇ ರೈಲು ಪ್ರಯಾಣಕ್ಕೆ ಅವಕಾಶ ಇರಲಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ರೈಲ್ವೆ ನಿಲ್ದಾಣದಲ್ಲಿ ಜಾರಿಗೆ ತರಲು ಚಿಂತನೆ ನಡೆಸಲಾಗಿದ್ದು, ಬಳಿಕ ದೇಶಾದ್ಯಂತ ರೈಲು ನಿಲ್ದಾಣದಲ್ಲಿ ಈ ನಿಯಮವನ್ನು ಜಾರಿಗೊಳಿಸಲಾಗುತ್ತದೆ.