35 ವರ್ಷಗಳಲ್ಲೇ 2017-18ರಲ್ಲಿ ರೈಲ್ವೇಯಲ್ಲಿ ಅತೀ ಕಡಿಮೆ ಅಪಘಾತ!

Public TV
2 Min Read

ನವದೆಹಲಿ: ಪ್ರಯಾಣಿಕರ ಸುರಕ್ಷತೆಯಲ್ಲಿ ಭಾರತೀಯ ರೈಲ್ವೆ ದೊಡ್ಡ ಸಾಧನೆ ಮಾಡಿದೆ. 2017-18 ರ ಆರ್ಥಿಕ ವರ್ಷದಲ್ಲಿ ಅತಿ ಕಡಿಮೆ ಅಪಘಾತಗಳು ಸಂಭವಿಸಿವೆ ಎಂದು ರೈಲ್ವೇ ಖಾತೆಯ ರಾಜ್ಯ ಸಚಿವ ರಾಜೆನ್ ಗೋಹೈನ್ ಲೋಕಸಭೆಗೆ ತಿಳಿಸಿದ್ದಾರೆ.

ಏಪ್ರಿಲ್ 1, 2017 ರಿಂದ ಮಾರ್ಚ್ 30, 2018 ರ ನಡುವೆ 73 ಅಪಘಾತಗಳು ಸಂಭವಿಸಿವೆ. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದಲ್ಲಿ 29% ರಷ್ಟು ಕಡಿಮೆಯಾಗಿದೆ. 2016-17 ರಲ್ಲಿ 104 ಅಪಘಾತಗಳು ಸಂಭವಿಸಿದ್ದವು. ಬಹಳ ಹಿಂದೆ 1968-69ರ ಆರ್ಥಿಕ ವರ್ಷ ಹೊರತುಪಡಿಸಿ ಪ್ರತೀ ವರ್ಷ 1000 ಅಪಘಾತಗಳು ಸಂಭವಿಸುತ್ತಿದ್ದವು. 1968-69 ರಲ್ಲಿ 908 ಅಪಘಾತಗಳು ಸಂಭವಿಸಿದ್ದವು ಎಂದು ತಿಳಿಸಿದ್ದಾರೆ.

ಕಳೆದ ಮೂರು ವರ್ಷದಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. 2014-15 ರಲ್ಲಿ 135, 2015-16 ರಲ್ಲಿ 107 ಮತ್ತು 2016-17 ರಲ್ಲಿ 104 ಅಪಘಾತಗಳಾಗಿವೆ. 2017-18 ರಲ್ಲಿ ಈ ಸಂಖ್ಯೆ 73ಕ್ಕೆ ಇಳಿದಿದೆ ಎಂದು ತಿಳಿಸಿದ್ದಾರೆ.

ರೈಲ್ವೇ ಬೋರ್ಡ್ ಅಧ್ಯಕ್ಷ ಅಶ್ವನಿ ಲೊಹಾನಿ ಪ್ರತಿಕ್ರಿಯಿಸಿ, ರೈಲ್ವೇ ಸುರಕ್ಷತೆಗೆ ಹೆಚ್ಚು ಒತ್ತು ಕೊಟ್ಟಿದ್ದರಿಂದ ರೈಲ್ವೆ ಅಪಘಾತಗಳು ಕಡಿಮೆಯಾಗಿವೆ ಎಂದು ಹೇಳಿದ್ದಾರೆ. ರೈಲ್ವೆ ಸುರಕ್ಷತಾ ವ್ಯವಸ್ಥೆಯನ್ನು ಉನ್ನತೀಕರಿಸಲಾಗಿದೆ. ಹೊಸ ವ್ಯವಸ್ಥೆ ಪ್ರತಿಯೊಬ್ಬ ರೈಲ್ವೆ ಕಾರ್ಮಿಕ ಕೂಡ ರೈಲಿನ ನ್ಯೂನತೆಯನ್ನು ಗುರುತಿಸುವಂತಿದೆ. 2016-17ರ ಸಾಲಿನಲ್ಲಿ 68 ಬಾರಿ ರೈಲುಗಳು ಹಳಿತಪ್ಪಿದ್ದವು. 2017-18 ರ ಸಾಲಿನಲ್ಲಿ 39 ಬಾರಿ ರೈಲುಗಳು ಹಳಿತಪ್ಪಿದ್ದವು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೈಲ್ವೇಗೆ ಇಸ್ರೋ ನೆರವು: ಮಾನವರಹಿತ ಲೆವೆಲ್ ಕ್ರಾಸಿಂಗ್‍ನಲ್ಲಿ ಅಪಘಾತ ತಪ್ಪಿಸಲು ಬಂದಿದೆ ವಿಶೇಷ ಚಿಪ್!

ರೈಲು ಸುರಕ್ಷತೆ ಹೆಚ್ಚಿಸಲು 2018-19ರ ಕೇಂದ್ರ ಬಜೆಟ್ ನಲ್ಲಿ 7,267 ಕೋಟಿ ರೂ.ಗಳನ್ನು ಭಾರತೀಯ ರೈಲ್ವೆಗೆ ಹಂಚಿಕೆ ಮಾಡಲಾಗಿತ್ತು. ದುರಸ್ತಿ ಕಾರ್ಯ, ಹಳಿ ತಪಾಸಣೆ, ನಿರ್ವಹಣೆ ಕಾರ್ಯಗಳಿಗೆ ಹಣವನ್ನು ವ್ಯಯಿಸಲಾಗುತ್ತದೆ. 2017-18ರ ಆಯವ್ಯಯದಲ್ಲಿ 5,334 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಪ್ರಯಾಣಿಕರ ಸುರಕ್ಷತೆಯೇ ಭಾರತೀಯ ರೈಲ್ವೆ ಇಲಾಖೆಯ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.

ರೈಲ್ವೆ ಹಳಿಗಳ ಉನ್ನತೀಕರಣ, ಮಾನವ ರಹಿತ ಲೆವೆಲ್ ಕ್ರಾಸಿಂಗ್‍ಗಳನ್ನು ತೆಗೆಯುವುದು, ಹಳೆಯ ಐಸಿಎಫ್ ಕೋಚ್‍ಗಳನ್ನು ಎಲ್‍ಎಚ್‍ಬಿ ಕೋಚ್‍ಗಳಿಗೆ ಬದಲಾಯಿಸುವುದು, ಹೊಸ ಸಿಗ್ನಲಿಂಗ್ ಪದ್ಧತಿಯನ್ನು ಅಳವಡಿಸುವುದು ಇವೇ ಮೊದಲಾದ ಕಾರ್ಯಗಳನ್ನು ರೈಲ್ವೆ ಇಲಾಖೆ ಮಾಡಲು ಮುಂದಾಗಿದೆ. ಅಪಘಾತಗಳನ್ನು ಕಡಿಮೆ ಮಾಡಲು ಹಳಿಗಳ ನಿರ್ವಹಣೆಗೆ ಹೊಸ ಹಳಿ ತಂತ್ರಜ್ಞಾನವನ್ನು ಬಳಸಲು ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ ಎಂದು ಅಶ್ವನಿ ಲೋಹಾನಿ ತಿಳಿಸಿದರು. ಇದನ್ನೂ ಓದಿ: 36 ವರ್ಷದ ಹಿಂದಿನ ವಿಐಪಿ ಸಂಸ್ಕೃತಿಗೆ ರೈಲ್ವೇ ಇಲಾಖೆಯಲ್ಲಿ ಬ್ರೇಕ್

Share This Article
Leave a Comment

Leave a Reply

Your email address will not be published. Required fields are marked *