IPL 2023: ಶುಭಮನ್‌ ಗಿಲ್‌ ಶತಕದಾಟ, ಗುಜರಾತ್‌ ಟೈಟಾನ್ಸ್‌ಗೆ ಜಯ – RCB ಮನೆಗೆ, ಮುಂಬೈ ಪ್ಲೇ ಆಫ್‌ಗೆ

Public TV
2 Min Read

ಬೆಂಗಳೂರು: ಶುಭಮನ್‌ ಗಿಲ್‌ (Shubman Gill) ಭರ್ಜರಿ ಶತಕ, ಆರ್‌ಸಿಬಿ (RCB) ಕಳಪೆ ಬೌಲಿಂಗ್‌ ಹಾಗೂ ಫೀಲ್ಡಿಂಗ್‌ನಿಂದಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಗುಜರಾತ್‌ ಟೈಟಾನ್ಸ್‌ (GT) ವಿರುದ್ಧ ಹೀನಾಯ ಸೋಲನುಭವಿಸಿದೆ. ಈ ಮೂಲಕ 2023ರ ಐಪಿಎಲ್‌ (IPL 2023) ಆವೃತ್ತಿಗೆ ಸೋಲಿನೊಂದಿಗೆ ವಿದಾಯ ಹೇಳಿದೆ.

ಅಂತಿಮವಾಗಿ ಗುಜರಾತ್‌ ಟೈಟಾನ್ಸ್‌, ಚೆನ್ನೈ ಸೂಪರ್‌ ಕಿಂಗ್ಸ್‌ (CSK), ಲಕ್ನೋ ಸೂಪರ್‌ ಜೈಂಟ್ಸ್‌ (LSG) ಹಾಗೂ ಮುಂಬೈ ಇಂಡಿಯನ್ಸ್‌ (MI) ಪ್ಲೇ ಆಫ್‌ ಪ್ರವೇಶಿಸಿದೆ. 2022ರ ಆವೃತ್ತಿಯಲ್ಲಿ ಐಪಿಎಲ್‌ ಪ್ರವೇಶಿಸಿದ ಗುಜರಾತ್‌ ಟೈಟಾನ್ಸ್‌ ತಂಡ ಸತತ 2ನೇ ಬಾರಿಯೂ ಪ್ಲೇ ಆಫ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 197 ರನ್‌ ಚಚ್ಚಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಗುಜರಾತ್‌ ಟೈಟಾನ್ಸ್‌ 19.1 ಓವರ್‌ನಲ್ಲಿ 198 ರನ್‌ ಗಳಿಸಿ ಭರ್ಜರಿ ಜಯ ಸಾಧಿಸಿತು.

ಆರಂಭಿಕರಾಗಿ ಕಣಕ್ಕಿಳಿದ ವೃದ್ಧಿಮಾನ್‌ ಸಾಹಾ 14 ಎಸೆತಗಳಲ್ಲಿ 12 ರನ್‌ ಗಳಿಸಿ ಔಟಾದರು. ಬಳಿಕ 2ನೇ ವಿಕೆಟ್‌ಗೆ ಜೊತೆಯಾದ ವಿಜಯ್‌ ಶಂಕರ್‌ ಹಾಗೂ ಶುಭಮನ್‌ ಗಿಲ್‌ ಜೋಡಿ ಆರ್‌ಸಿಬಿ ಬೌಲರ್‌ಗಳನ್ನ ಚೆಂಡಾಡಿತು. 2ನೇ ವಿಕೆಟ್‌ ಪತನಕ್ಕೆ ಈ ಜೋಡಿ 71 ಎಸೆತಗಳಲ್ಲಿ ಬರೋಬ್ಬರಿ 123 ರನ್‌ ಜೊತೆಯಾಟವಾಡಿತು.

ಟೈಟಾನ್ಸ್‌ ಪರ ವಿಜಯ್‌ ಶಂಕರ್‌ 53 ರನ್‌ (35 ಎಸತೆ, 2 ಸಿಕ್ಸರ್‌, 7 ಬೌಂಡರಿ), ವೃದ್ಧಿಮಾನ್‌ ಸಾಹಾ 12 ರನ್‌, ಡೇವಿಡ್‌ ಮಿಲ್ಲರ್‌ 6 ರನ್‌ ಗಳಿಸಿದರೆ ಧಸುನ್‌ ಶನಾಕ ಶೂನ್ಯಕ್ಕೆ ಔಟಾಗಿ ಪೆವಿಲಿಯನ್‌ ಸೇರಿದರು. ಕೊನೆಯವರೆಗೂ ಹೋರಾಡಿದ ಶುಭಮನ್‌ ಗಿಲ್‌ 52 ಎಸೆತಗಳಲ್ಲಿ 104 ರನ್‌ (8 ಸಿಕ್ಸ್‌, 5 ಬೌಂಡರಿ) ಚಚ್ಚಿ ಅಜೇಯರಾಗುಳಿದರು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಆರಂಭದಿಂದಲೇ ವಿಕೆಟ್‌ ಕಳೆದುಕೊಂಡರೂ ರನ್‌ ಕಲೆಹಾಕುತ್ತಾ ಸಾಗಿತು. ಆರಂಭಿಕರಾಗಿ ಕಣಕ್ಕಿಳಿದ ಫಾಫ್‌ ಡು ಪ್ಲೆಸಿಸ್‌ ಹಾಗೂ ವಿರಾಟ್‌ ಕೊಹ್ಲಿ ಜೋಡಿ ಮುರಿಯುತ್ತಿದ್ದಂತೆ ರನ್‌ ವೇಗವೂ ಕಡಿಮೆಯಾಯಿತು. ಮೊದಲ ವಿಕೆಟ್‌ಗೆ ಡುಪ್ಲೆಸಿಸ್‌ ಹಾಗೂ ಕೊಹ್ಲಿ 7.1 ಓವರ್‌ಗಳಲ್ಲಿ 67 ರನ್‌ ಜೊತೆಯಾಟವಾಡಿದ್ದರು. ಡುಪ್ಲೆಸಿಸ್‌ ಔಟಾಗುತ್ತಿದ್ದಂತೆ ಕೊಹ್ಲಿ ಏಕಾಂಗಿ ಹೋರಾಟ ನಡೆಸಿದರು. ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವೈಫಲ್ಯದ ಹೊರತಾಗಿಯೂ ಆರ್‌ಸಿಬಿ ಬೃಹತ್‌ ಮೊತ್ತ ಪೇರಿಸಿತ್ತು.

ಕೊನೆಯವರೆಗೂ ಅಜೇನಾಗಿ ಹೋರಾಡಿದ ಕಿಂಗ್‌ ಕೊಹ್ಲಿ 61 ಎಸೆತಗಳಲ್ಲಿ 101 ರನ್‌ (13 ಬೌಂಡರಿ, 1 ಸಿಕ್ಸರ್‌), ಡುಪ್ಲೆಸಿಸ್‌ 28 ರನ್‌ (19 ಎಸೆತ, 5 ಬೌಂಡರಿ), ಮ್ಯಾಕ್ಸ್‌ವೆಲ್‌ 11 ರನ್‌ (5 ಎಸೆತ, 1 ಬೌಂಡರಿ, 1 ಸಿಕ್ಸರ್)‌, ಮೈಕೆಲ್‌ ಬ್ರೇಸ್‌ವೆಲ್‌ 26 ರನ್‌ (16 ಎಸೆತ, 5 ಬೌಂಡರಿ), ಅನುಜ್‌ ರಾವತ್‌ 23 ರನ್‌ (15 ಎಸೆತ, 1 ಬೌಂಡರಿ, 1 ಸಿಕ್ಸರ್‌) ಗಳಿಸಿದರೆ, ದಿನೇಶ್‌ ಕಾರ್ತಿಕ್‌ ಮತ್ತೊಮ್ಮೆ ಡಕೌಟ್‌ ಆಗಿ ನಿರಾಸೆ ಮೂಡಿಸಿದರು. ಈ ಮೂಲಕ ಐಪಿಎಲ್‌ನಲ್ಲಿ 17 ಬಾರಿ ಡಕೌಟ್‌ ಆದ ಕೆಟ್ಟ ದಾಖಲೆಯನ್ನೂ ಬರೆದರು.

ಗುಜರಾತ್‌ ಟೈಟಾನ್ಸ್‌ ಪರ ನೂರ್‌ ಅಹ್ಮದ್‌ 2 ವಿಕೆಟ್‌ ಹಾಗೂ ಮೊಹಮ್ಮದ್‌ ಶಮಿ, ಯಶ್‌ ದಯಾಳ್‌, ರಶೀದ್‌ ಖಾನ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

Share This Article