IPL 2023: ಪಂಜಾಬ್‌ಗೆ ಪಂಚ್‌ ಕೊಟ್ಟ ಸನ್‌ ರೈಸರ್ಸ್‌ – ಹೈದರಾಬಾದ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ

Public TV
2 Min Read

ಹೈದರಾಬಾದ್‌: ರಾಹುಲ್‌ ತ್ರಿಪಾಠಿ ಭರ್ಜರಿ ಅರ್ಧ ಶತಕದ ಬ್ಯಾಟಿಂಗ್‌ ಹಾಗೂ ಶಿಸ್ತುಬದ್ಧ ಬೌಲಿಂಗ್‌ ದಾಳಿ ನೆರವಿನಿಂದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು ಕಿಂಗ್ಸ್‌ ಪಂಜಾಬ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ಪಂಜಾಬ್‌ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 143 ರನ್‌ ಗಳಿಸಿತು. 144 ರನ್‌ಗಳ ಗುರಿ ಬೆನ್ನತ್ತಿದ್ದ ಹೈದರಾಬಾದ್‌ ತಂಡ 17.1 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 145 ರನ್‌ ಗಳಿಸಿ ಗೆಲುವು ಸಾಧಿಸಿತು. ಇದನ್ನೂ ಓದಿ: IPL 2023: ಮೋದಿ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ ರಶೀದ್‌ ಖಾನ್‌

ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಹೈದರಾಬಾದ್‌ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಆರಂಭಿಕರಾದ ಹ್ಯಾರಿ ಬ್ರೂಕ್‌ 13 ರನ್‌, ಮಯಾಂಕ್‌ ಅಗರ್ವಾಲ್‌ 21 ರನ್‌ ಗಳಿಸಿ ಔಟಾಗಿದ್ದರು. ಮೊದಲ 6 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು ಕೇವಲ 34 ರನ್‌ ಗಳಿಸಿತ್ತು. ನಂತರ 3ನೇ ವಿಕೆಟ್‌ಗೆ ಜೊತೆಯಾದ ರಾಹುಲ್‌ ತ್ರಿಪಾಠಿ ಹಾಗೂ ನಾಯಕ ಏಡನ್‌ ಮಾರ್ಕಮ್ ಮುರಿಯದ 3ನೇ ವಿಕೆಟ್‌ಗೆ 52 ಎಸೆತಗಳಲ್ಲಿ 100 ರನ್‌ಗಳ ಜೊತೆಯಾಟವಾಡಿದರು.

ರಾಹುಲ್‌ ತ್ರಿಪಾಠಿ 48 ಎಸೆತಗಳಲ್ಲಿ 74 ರನ್‌ (10 ಬೌಂಡರಿ, 3 ಸಿಕ್ಸರ್‌) ಸಿಡಿಸಿದರೆ, ಮಾರ್ಕಮ್‌ 37 ರನ್‌ (21 ಎಸೆತ, 6 ರನ್‌) ಗಳಿಸಿ ತಂಡದ ಗೆಲುವಿಗೆ ಆಸರೆಯಾದರು. ಕಿಂಗ್ಸ್‌ ಪಂಜಾಬ್‌ ಪರ ಅರ್ಷ್‌ದೀಪ್‌ ಸಿಂಗ್‌ ಹಾಗೂ ರಾಹುಲ್‌ ಚಹಾರ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: IPL 2023: ಕೊನೆಯ ಓವರ್‌ನಲ್ಲಿ 6, 6, 6, 6, 6 -‌ KKRಗೆ 3 ವಿಕೆಟ್‌ಗಳ ರೋಚಕ ಜಯ

ಇನ್ನೂ ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ಪಂಜಾಬ್‌ ಪರ ಏಕಾಂಗಿ ಹೋರಾಟ ನಡೆಸಿದ ಶಿಖರ್ ಧವನ್ 1 ರನ್‌ನಿಂದ ಶತಕವಂಚಿತರಾದರು. 66 ಎಸೆತಗಳಲ್ಲಿ ಅಜೇಯ 99 ರನ್ ಗಳಿಸಿದ ಶಿಖರ್ ತಂಡ ಮೊತ್ತ 140ರ ಗಡಿದಾಟಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಸ್ಯಾಮ್‌ ಕರ್ರನ್‌ 22 ರನ್‌ ಗಳಿಸಿದ್ದು ಬಿಟ್ಟರೆ, ಉಳಿದ ಯಾರೊಬ್ಬರೂ ಎರಡಂಕಿಯ ಮೊತ್ತ ಗಳಿಸದ ಕಾರಣ ಪಂಜಾಬ್‌ ಅಲ್ಪಮೊತ್ತಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಹೈದರಾಬಾದ್‌ ಪರ ಮಿಂಚಿನ ಬೌಲಿಂಗ್‌ ದಾಳಿ ನಡೆಸಿದ ಮಯಾಂಕ್‌ ಮಾರ್ಕಂಡೆ, 4 ವಿಕೆಟ್‌ ಕಿತ್ತರೆ, ಉಮ್ರಾನ್‌ ಮಲಿಕ್‌, ಮಾರ್ಕೊ ಜಾನ್ಸೆನ್‌ ತಲಾ 2 ವಿಕೆಟ್‌ ಹಾಗೂ ಭುವನೇಶ್ವರ್‌ ಕುಮಾರ್‌ ಒಂದು ವಿಕೆಟ್‌ ಕಿತ್ತರು.

Share This Article