ಕೊಹ್ಲಿ, ಡುಪ್ಲೆಸಿಸ್‌ ಹೊಡೆತಕ್ಕೆ ರೈಸ್‌ ಆಗದ ಸನ್‌ – ಹೈದರಾಬಾದ್‌ ವಿರುದ್ಧ 8 ವಿಕೆಟ್‌ಗಳ ಜಯ; 4ನೇ ಸ್ಥಾನಕ್ಕೆ ಜಿಗಿದ RCB

Public TV
3 Min Read

ಹೈದರಾಬಾದ್‌: ಕೊಹ್ಲಿ (Virat Kohli) ಭರ್ಜರಿ ಶತಕ ಹಾಗೂ ಫಾಫ್‌ ಡು ಪ್ಲೆಸಿಸ್‌ (Faf du Plessis) ಸ್ಫೋಟಕ ಅರ್ಧ ಶತಕದ ಬ್ಯಾಟಿಂಗ್‌ ನೆರವಿನಿಂದ ಆರ್‌ಸಿಬಿ (RCB) ತಂಡವು ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಹೈದರಾಬಾದ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ 14 ಅಂಕ ಪಡೆದು +0.180 ರನ್‌ ರೇಟ್‌ನೊಂದಿಗೆ 4ನೇ ಸ್ಥಾನಕ್ಕೆ ಜಿಗಿದಿದೆ. ಇದರಿಂದ ಪ್ಲೇ ಆಫ್‌ ಹಾದಿ ಮತ್ತಷ್ಟು ಸುಗಮವಾಗಿಸಿಕೊಂಡಿದೆ. ಲಕ್ನೋ ಸೂಪರ್‌ ಜೈಂಟ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ಉತ್ತಮ ರನ್‌ರೇಟ್‌ನೊಂದಿಗೆ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದು, 4ನೇ ಸ್ಥಾನಕ್ಕಾಗಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್‌ ನಡುವೆ ಪೈಪೋಟಿ ನಡೆದಿದೆ. ಇತ್ತಂಡಗಳಿಗೂ ತಲಾ ಒಂದೊಂದು ಪಂದ್ಯ ಬಾಕಿಯಿದೆ. 13 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿರುವ ಮುಂಬೈ ಇಂಡಿಯನ್ಸ್‌ 14 ಅಂಕ ಪಡೆದು -0.128 ರನ್‌ರೇಟ್‌ನೊಂದಿಗೆ 5ನೇ ಸ್ಥಾನದಲ್ಲಿದೆ. ಒಂದು ವೇಳೆ ಮುಂದಿನ ಪಂದ್ಯದಲ್ಲಿ ಆರ್‌ಸಿಬಿ ಸೋತು ಮುಂಬೈ ಗೆದ್ದರೆ, ಆರ್‌ಸಿಬಿ ಪ್ಲೇ ಆಫ್‌ನಿಂದ ಹೊರಬೀಳಲಿದೆ. ಗೆದ್ದರಷ್ಟೇ ಪ್ಲೇ ಆಫ್‌ ತಲುಪಲಿದೆ.

ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಹೈದರಾಬಾದ್‌ ಹೆನ್ರಿಚ್‌ ಕ್ಲಾಸೆನ್‌ (Heinrich Klaasen) ಭರ್ಜರಿ ಶತಕದೊಂದಿಗೆ 20 ಓವರ್‌ಗಳಲ್ಲಿ 186 ರನ್‌ ಗಳಿಸಿತ್ತು. 187 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಆರ್‌ಸಿಬಿ 19.2 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 187 ರನ್‌ ಗಳಿಸಿ ಗೆದ್ದು ಬೀಗಿತು.

ಚೇಸಿಂಗ್‌ ಆರಂಭಿಸಿದ ಆರ್‌ಸಿಬಿ (RCB) ಪರ ನಾಯಕ ಫಾಫ್‌ ಡು ಪ್ಲೆಸಿಸ್‌ ಹಾಗೂ ವಿರಾಟ್‌ ಕೊಹ್ಲಿ ಹೈದರಾಬಾದ್‌ ಬೌಲರ್‌ಗಳನ್ನು ಚೆಂಡಾಡಿದರು. ಇವರಿಬ್ಬರ ಹೊಡೆತಕ್ಕೆ ಹೈದರಾಬಾದ್‌ ತಂಡ ಮಕಾಡೆ ಮಲಗಿತು.

ಭರ್ಜರಿ ಸಿಕ್ಸರ್‌, ಬೌಂಡರಿ ಚಚ್ಚಿದ ವಿರಾಟ್‌, ಡುಪ್ಲೆಸಿಸ್‌ 108 ಎಸೆತಗಳಲ್ಲಿ 172 ರನ್‌ಗಳ ಜೊತೆಯಾಟವಾಡಿದರು. ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ಕಿಂಗ್‌ ಕೊಹ್ಲಿ 63 ಎಸೆತಗಳಲ್ಲಿ 100 ರನ್‌ (12 ಬೌಂಡರಿ, 4 ಸಿಕ್ಸರ್‌) ಚಚ್ಚಿದರೆ, ಫಾಫ್‌ ಡು ಪ್ಲೆಸಿಸ್‌ 47 ಎಸೆತಗಳಲ್ಲಿ ಸ್ಫೋಟಕ 71 ರನ್‌ (7 ಬೌಂಡರಿ, 2 ಸಿಕ್ಸರ್‌) ಬಾರಿಸಿ ಮಿಂಚಿದರು. ಕೊನೆಯಲ್ಲಿ ಗ್ಲೇನ್‌ ಮ್ಯಾಕ್ಸ್‌ವೆಲ್‌ 5 ರನ್‌ ಹಾಗೂ ಮೈಕಲ್‌ ಬ್ರೇಸ್‌ವೆಲ್‌ 4 ರನ್‌ ಗಳಿಸಿ ಅಜೇಯರಾಗುಳಿದರು.

2016ರ ಐಪಿಎಲ್‌ ಆವೃತ್ತಿಯಲ್ಲಿ 4 ಶತಕಗಳನ್ನು ಸಿಡಿಸಿದ್ದ ಚೇಸ್‌ ಮಾಸ್ಟರ್‌ ಕೊಹ್ಲಿ ‌ಒಂದೇ ಸೀಸನ್‌ನಲ್ಲಿ 973 ರನ್‌ ಗಳಿಸಿ ಯಾರೂ ಮುರಿಯದ ದಾಖಲೆ ಮಾಡಿದ್ದಾರೆ. ಆ ಬಳಿಕ 2019ರ ಐಪಿಎಲ್‌ನಲ್ಲಿ ಒಂದು ಶತಕ ಗಳಿಸಿದ್ದರು. 2023ರ ಐಪಿಎಲ್‌ ಆವೃತ್ತಿಯಲ್ಲಿ ಮತ್ತೊಮ್ಮೆ ಶತಕ ಸಿಡಿಸಿ ಮಿಂಚಿದರು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಹೈದರಾಬಾದ್‌ ಒಂದೆಡೆ ವಿಕೆಟ್‌ ಕಳೆದುಕೊಂಡರೆ, ಮತ್ತೊಂದೆಡೆ ರನ್‌ ಕಲೆಹಾಕುತ್ತಾ ಸಾಗಿತು. ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್‌ ಶರ್ಮಾ 11 ರನ್‌, ರಾಹುಲ್‌ ತ್ರಿಪಾಠಿ 15 ರನ್‌, ಏಡನ್‌ ಮಾರ್ಕ್ರಮ್‌ 18 ರನ್‌ ಗಳಿಸಿ ಕೈಕೊಟ್ಟರು.‌ ಬಳಿಕ ಕಣಕ್ಕಿಳಿದ ಹೆನ್ರಿಚ್‌ ಕ್ಲಾಸೆನ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದರು.

ಕ್ಲಾಸೆನ್‌ 51 ಎಸೆತಗಳಲ್ಲಿ 104 ರನ್‌ (6 ಸಿಕ್ಸರ್‌, 8 ಬೌಂಡರಿ) ಚಚ್ಚಿದರು. ಕೊನೆಯಲ್ಲಿ ಗ್ಲೇನ್‌ ಫಿಲಿಪ್ಸ್‌ 5 ರನ್‌ ಗಳಿಸಿ ಔಟಾದರೆ, ಹ್ಯಾರಿ ಬ್ರೂಕ್‌ 27 ರನ್‌ ಗಳಿಸಿ ಅಜೇಯರಾಗುಳಿದರು.

ಆರ್‌ಸಿಬಿ ಪರ ಮೈಕೆಲ್‌ ಬ್ಲೇಸ್‌ವೆಲ್‌ 2 ಓವರ್‌ಗಳಲ್ಲಿ 13 ರನ್‌ ನೀಡಿ 2 ವಿಕೆಟ್‌ ಕಿತ್ತರೆ, ಶಹಬಾಜ್‌ ಅಹ್ಮದ್‌, ಹರ್ಷಲ್‌ ಪಟೇಲ್‌, ಮೊಹಮ್ಮದ್‌ ಸಿರಾಜ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

Share This Article