ಕ್ಯಾಪ್ಟನ್‌ ಕೊಹ್ಲಿ, ಡುಪ್ಲೆಸಿಸ್‌ ಶತಕದಾಟಕ್ಕೆ ಪಂಜಾಬ್‌ ಪಂಚರ್‌ – RCBಗೆ 24 ರನ್‌ಗಳ ಭರ್ಜರಿ ಜಯ

Public TV
3 Min Read

ಮೊಹಾಲಿ: ನಾಯಕ ವಿರಾಟ್‌ ಕೊಹ್ಲಿ ಹಾಗೂ ಫಾಫ್‌ ಡು ಪ್ಲೆಸಿಸ್‌ ಶತಕದ ಜೊತೆಯಾಟ ಹಾಗೂ ಮೊಹಮ್ಮದ್‌ ಸಿರಾಜ್‌ ಮಾರಕ ಬೌಲಿಂಗ್‌ ದಾಳಿ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಕಿಂಗ್ಸ್‌ ಪಂಜಾಬ್‌ ವಿರುದ್ಧ 24 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ನಾಯಕತ್ವ ವಹಿಸಿಕೊಂಡಿದ್ದು ಮತ್ತೊಂದು ವಿಶೇಷ.

ಮೊಹಾಲಿಯ ಐಎಸ್‌ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ವಿರಾಟ್‌ ಕೊಹ್ಲಿ ನಾಯಕತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ್ದ ಪಂಜಾಬ್‌ ಕಿಂಗ್ಸ್‌ 18.2 ಓವರ್‌ಗಳಲ್ಲೇ 150 ರನ್‌ಗಳಿಗೆ ಸರ್ವಪತನ ಕಂಡು, ಆರ್‌ಸಿಬಿ ಎದುರು ಮಂಡಿಯೂರಿತು.

ಆರ್‌ಸಿಬಿ ನೀಡಿದ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಕಿಂಗ್ಸ್‌ ಪಂಜಾಬ್‌ ತಂಡದ ಆಟಗಾರರು ಆರ್‌ಸಿಬಿ ಬೌಲರ್‌ಗಳ ದಾಳಿಗೆ ತತ್ತರಿಸಿದರು. ಆರಂಭಿಕರಾಗಿ ಕಣಕ್ಕಿಳಿದ ಅಥರ್ವ ತೈದೆ 4 ರನ್‌, ಮ್ಯಾಥಿವ್‌ ಶಾರ್ಟ್‌ 8 ರನ್‌, ಲಿಯಾಮ್‌ ಲಿವಿಂಗ್ಸ್ಟನ್‌ 2 ರನ್‌ ಹಾಗೂ ಹರ್ಪ್ರೀತ್‌ ಸಿಂಗ್‌ 13 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಈ ನಡುವೆ ಮತ್ತೋರ್ವ ಆರಂಭಿಕ ಪ್ರಭ್‌ಸಿಮ್ರಾನ್‌ ಸಿಂಗ್‌ ಹಾಗೂ ಸ್ಯಾಮ್‌ ಕರ್ರನ್‌ ಉತ್ತಮ ಜೊತೆಯಾಟವಾಡಲು ಪ್ರಯತ್ನಿಸಿದರು. ಆದ್ರೆ ಆರ್‌ಸಿಬಿ ಬೌಲರ್‌ಗಳು ಇವರಿಬ್ಬರ ಆಟಕ್ಕೆ ಬ್ರೇಕ್‌ ಹಾಕಿದರು. ಸ್ಯಾಮ್‌ ಕರ್ರನ್‌ ಕೇವಲ 10 ರನ್‌ ಗಳಿಸಿ ರನೌಟ್‌ಗೆ ತುತ್ತಾದ ಬೆನ್ನಲ್ಲೇ 46 ರನ್‌ (30 ಎಸೆತ, 3 ಬೌಂಡರಿ, 4 ಸಿಕ್ಸರ್‌) ಗಳಿಸಿದ್ದ ಪ್ರಭ್‌ಸಿಮ್ರಾನ್‌ ಸಹ ಕ್ಲೀನ್‌ ಬೌಲ್ಡ್‌ ಆದರು.

ಮಧ್ಯಮ ಕ್ರಮಾಂಕದಲ್ಲಿ ಬಂದ ಎಂ.ಶಾರೂಖ್‌ ಖಾನ್‌ 7 ರನ್‌ ಗಳಿಸಿದ್ರೆ, ಹರ್ಪ್ರೀತ್‌ ಬ್ರಾರ್‌ 13 ರನ್‌, ನಾಥನ್‌ ಎಲ್ಲಿಸ್‌ ಕೇವಲ 1 ರನ್‌ ಗಳಿಸಿದರು. ಇತ್ತ ತಂಡ ವಿಕೆಟ್‌ ಕಳೆದುಕೊಳ್ಳುತ್ತಿದ್ದರ ಹೊರತಾಗಿಯೂ ಸ್ಫೋಟಕ ಬ್ಯಾಟಿಂಗ್‌ ನಡೆಸುತ್ತಿದ್ದ ಜಿತೇಶ್‌ ಶರ್ಮಾ 27 ಎಸೆತಗಳಲ್ಲಿ 41 ರನ್‌ (3 ಸಿಕ್ಸರ್‌, 2 ಬೌಂಡರಿ) ಸಿಡಿಸಿದ್ದರು. ಕೊನೆಯ 11 ಎಸೆತಗಳಲ್ಲಿ 25 ರನ್‌ ಬೇಕಿದ್ದಾಗಲೇ ಶರ್ಮಾ ಸಿಕ್ಸರ್‌ ಸಿಡಿಸಲು ಮುಂದಾಗಿ ಕ್ಯಾಚ್‌ ನೀಡಿದರು. ಇದರಿಂದ ತಂಡ ನಿರಾಸೆಗೊಂಡಿತು. ಅಂತಿಮವಾಗಿ ಅರ್ಷ್‌ದೀಪ್‌ ಸಿಂಗ್‌ ಅಜೇಯರಾಗುಳಿದರು.

ಆರ್‌ಸಿಬಿ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಮೊಹಮ್ಮದ್‌ ಸಿರಾಜ್‌ 4 ಓವರ್‌ಗಳಲ್ಲಿ ಕೇವಲ 21 ರನ್‌ ನೀಡಿ 4 ವಿಕೆಟ್‌ ಕಿತ್ತರು. ಇನ್ನುಳಿದಂತೆ ವಾನಿಂದು ಹಸರಂಗ 2 ವಿಕೆಟ್‌ ಪಡೆದರೆ, ವೇಯ್ನ್ ಪಾರ್ನೆಲ್ ಹಾಗೂ ಹರ್ಷಲ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

ಆರ್‌ಸಿಬಿ ತಂಡದಿಂದ ಆರಂಭಿಕರಾಗಿ ಕಣಕ್ಕಿಳಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಫಾಫ್‌ ಡುಪ್ಲೆಸಿಸ್‌ ಸಿಕ್ಸರ್‌, ಬೌಂಡರಿಗಳ ಆಟದಿಂದ ಉತ್ತಮ ಶುಭಾರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 16.1 ಓವರ್‌ಗಳಲ್ಲಿ 137 ರನ್‌ಗಳ ಜೊತೆಯಾಟವಾಡಿತು. ಕೊಹ್ಲಿ 47 ಎಸೆತಗಳಲ್ಲಿ 59 ರನ್ (4 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾದರು. ಈ ಬೆನ್ನಲ್ಲೇ ಫಾಫ್‌ ಡುಪ್ಲೆಸಿಸ್‌ 56 ಎಸೆತಗಳಲ್ಲಿ 84 ರನ್ (5 ಬೌಂಡರಿ, 5 ಸಿಕ್ಸರ್ ) ಸಿಡಿಸಿ ಶತಕವಂಚಿತರಾದರು.

ಕೊನೆಯಲ್ಲಿ ದಿನೇಶ್ ಕಾರ್ತಿಕ್ 7 ರನ್‌ ಗಳಿಸಿ ಔಟಾದರೆ, ಮಹಿಪಾಲ್ ಲೋಮ್ರೋರ್ 6 ರನ್‌, ಶಹಬಾಜ್ ಅಹ್ಮದ್ 5 ರನ್ ಗಳಿಸಿ ಅಜೇಯರಾಗುಳಿದರು. ಇನ್ನೂ ಕಳೆದ ಪಂದ್ಯದಲ್ಲಿ ಸಿಎಸ್‌ಕೆ ಬೌಲರ್‌ಗಳನ್ನು ಚೆಂಡಾಡಿದ್ದ ಗ್ಲೇನ್‌ ಮ್ಯಾಕ್ಸ್‌ವೆಲ್‌ ಮೊದಲ ಎಸೆತದಲ್ಲೇ ಡಕೌಟ್‌ ಆಗಿ ನಿರಾಸೆ ಮೂಡಿಸಿದರು.

ಪಂಜಾಬ್ ಪರ ಹರ್ಪ್ರೀತ್‌ ಬ್ರಾರ್ 2 ವಿಕೆಟ್‌ ಪಡೆದರೆ, ನಾಥನ್ ಎಲ್ಲಿಸ್, ಅರ್ಷ್‌ದೀಪ್‌ ಸಿಂಗ್‌ ತಲಾ ಒಂದೊಂದು ವಿಕೆಟ್ ಕಬಳಿಸಿದರು.

ಮತ್ತೆ ಕ್ಯಾಪ್ಟನ್‌ ಆಗಿ ಕಣಕ್ಕಿಳಿದ ಕೊಹ್ಲಿ: ಪಂಜಾಬ್‌ ಕಿಂಗ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ವಿರಾಟ್ ಕೊಹ್ಲಿ ಅಭಿಮಾನಿಗಳು ನಿರೀಕ್ಷಿಸದ ಅಚ್ಚರಿಯೊಂದು ಕಾದಿತ್ತು. ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡಿದ್ದರು. ವಿರಾಟ್ ಕೊಹ್ಲಿ 2022ರ ಐಪಿಎಲ್ ಟೂರ್ನಿಯ ಆರಂಭಕ್ಕೂ ಮುನ್ನ ನಾಯಕತ್ವ ತ್ಯಜಿಸಿದ್ದರು. ಹೀಗಾಗಿ ಫಾಫ್ ಡು ಪ್ಲೆಸಿಸ್ ಕಳೆದ ವರ್ಷದ ಆವೃತ್ತಿಯಿಂದ ಆರ್‌ಸಿಬಿ ತಂಡವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ವಿರಾಟ್ ಕೊಹ್ಲಿ ಅನುಭವಿ ಆಟಗಾರನಾಗಿ ನಾಯಕನಿಗೆ ಸಾಥ್ ನೀಡುತ್ತಿದ್ದಾರೆ. ಆದರೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮತ್ತೆ ನಾಯಕನಾಗಿ ಕಣಕ್ಕಿಳಿಯುವ ಮೂಲಕ ಅಭಿಮಾನಿಗಳನ್ನ ರಂಜಿಸಿದರು.

Share This Article