ಸಿಕ್ಸರ್‌ ಬೌಂಡರಿ ಆಟದಲ್ಲಿ ಪಂಜಾಬ್‌ಗೆ 3 ವಿಕೆಟ್‌ಗಳ ರೋಚಕ ಜಯ – ತವರಿನಲ್ಲೇ ಟೈಟಾನ್ಸ್‌ಗೆ ಸೋಲು!

Public TV
2 Min Read

– ಕೊನೇ 17 ಎಸೆತಗಳಲ್ಲಿ 41 ರನ್‌ ಚಚ್ಚಿದ ಪಂಜಾಬ್‌ – ಗಿಲ್‌ ನಾಯಕನ ಆಟ ವ್ಯರ್ಥ,

ಅಹಮದಾಬಾದ್‌: ಡೆತ್‌ ಓವರ್‌ನಲ್ಲಿ ಅಶುತೋಷ್ ಶರ್ಮಾ ಹಾಗೂ ಶಶಾಂಕ್‌ ಸಿಂಗ್‌ ಅವರ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನದಿಂದ ಪಂಜಾಬ್‌ ಕಿಂಗ್ಸ್‌ ತಂಡವು ಗುಜರಾತ್‌ ಟೈಟಾನ್ಸ್‌ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಶುಭಮನ್‌ ಗಿಲ್‌ ನಾಯಕತ್ವದ ಗುಜರಾತ್‌ ಟೈಟಾನ್ಸ್‌ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 199 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಪಂಜಾಬ್‌ ಕಿಂಗ್ಸ್‌ ತಂಡವು 19.5 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 200 ರನ್‌ ಪೂರೈಸಿ ಗೆಲುವು ಸಾಧಿಸಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ ಪಂಜಾಬ್‌, ಐಪಿಎಲ್‌ನಲ್ಲಿ ಹೆಚ್ಚುಬಾರಿ 200 ರನ್‌ ಗುರಿ ಬೆನ್ನಟ್ಟಿದ ಯಶಸ್ವಿ ತಂಡ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿತು.

ಕೊನೇ ಓವರ್‌ ರೋಚಕತೆ ಹೇಗಿತ್ತು?
ಕೊನೇ ಓವರ್‌ನಲ್ಲಿ ಪಂಜಾಬ್‌ ಗೆಲುವಿಗೆ 7 ರನ್‌ಗಳ ಅಗತ್ಯವಿತ್ತು. ದರ್ಶನ್‌ ನಾಲ್ಕಂಡೆ ಬೌಲಿಂಗ್‌ನಲ್ಲಿದ್ದರು. ನಾಲ್ಕಂಡೆ ಬೌಲಿಂಗ್‌ನ ಮೊದಲ ಎಸೆತದಲ್ಲೇ ಸಿಕ್ಸರ್‌ ಪ್ರಯತ್ನಿಸಿದ ಅಶುತೋಷ್‌ ಬೌಂಡರಿ ಲಾಂಗ್‌ಆನ್‌ನಲ್ಲಿ ಕ್ಯಾಚ್‌ ನೀಡಿ ಔಟಾದರು. 2ನೇ ಎಸೆತದಲ್ಲಿ ವೈಡ್‌ ಎಸೆದ ನಾಲ್ಕಂಡೆ 3ನೇ ಎಸೆತವನ್ನು ಬೀಟ್‌ ಮಾಡಿದ್ದರು. ಇದರಿಂದ ಪಂದ್ಯ ರೋಚಕತೆಗೆ ತಿರುಗಿತ್ತು. ಆದ್ರೆ ಕ್ರೀಸ್‌ನಲ್ಲಿದ್ದ ಹರ್ಪ್ರೀತ್‌ ಬ್ರಾರ್‌ 4ನೇ ಎಸೆತದಲ್ಲಿ 1 ರನ್‌ ತಂದುಕೊಡುತ್ತಿದ್ದಂತೆ ಬೌಂಡರಿ ಚಚ್ಚಿದ ಶಶಾಂಕ್‌ ಸಿಂಗ್‌ ಗೆಲುವನ್ನು ಪಂಜಾಬ್‌ ತಂಡದತ್ತ ವಾಲಿಸಿದರು. 5ನೇ ಎಸೆತ ಎದುರಿಸುವಲ್ಲಿ ಶಶಾಂಕ್‌ ವಿಫಲವಾದರೂ ಲೆಗ್‌ಬೈಸ್‌ ರನ್‌ ಕದಿಯುವಲ್ಲಿ ಯಶಸ್ವಿಯಾದರು. ಪರಿಣಾಮ ಪಂಜಾಬ್‌ ಕಿಂಗ್ಸ್‌ 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.

ಡೆತ್‌ ಓವರ್‌ನಲ್ಲಿ ರನ್‌ ಹೊಳೆ:
200 ರನ್‌ಗಳ ಗುರಿ ಬೆನ್ನಟ್ಟಿದ್ದ ಪಂಜಾಬ್‌ ಕಿಂಗ್ಸ್‌ 15 ಓವರ್‌ಗಳಲ್ಲಿ 153 ರನ್‌ಗಳಿಗೆ ಪ್ರಮುಖ 6 ವಿಕೆಟ್‌ ಕಳೆದುಕೊಂಡಿತ್ತು. ಆದ್ರೆ ಡೆತ್‌ ಓವರ್‌ನಲ್ಲಿ ಜೊತೆಗೂಡಿದ ಅಶುತೋಷ್‌ ಶರ್ಮಾ ಹಾಗೂ ಶಶಾಂಕ್‌ ಸಿಂಗ್‌ ಜೋಡಿ ರನ್‌ ಹೊಳೆ ಹರಿಸಿತು. ಕೊನೇ 5 ಓವರ್‌ಗಳಲ್ಲಿ ಕ್ರಮವಾಗಿ 15, 6, 16, 18, 7 ರನ್‌ ತಂಡಕ್ಕೆ ಸೇರ್ಪಡೆಯಾದ ಪರಿಣಾಮ ಪಂಜಾಬ್‌ ಗೆಲುವು ಸಾಧಿಸಿತು.

ಪಂಜಾಬ್‌ ಕಿಂಗ್ಸ್‌ ಪರ ಶಶಾಂಕ್‌ ಸಿಂಗ್‌ ಅಜೇಯ 61 ರನ್‌ (29 ಎಸೆತ, 4 ಸಿಕ್ಸರ್‌, 6 ಬೌಂಡರಿ), ಅಶುತೋಷ್‌ ಶರ್ಮಾ 31 ರನ್‌ (17 ಎಸೆತ, 1 ಸಿಕ್ಸರ್‌, 3 ಬೌಂಡರಿ), ಪ್ರಭ್‌ಸಿಮ್ರಾನ್‌ ಸಿಂಗ್‌ 35 ರನ್‌, ಶಿಖರ್‌ ಧವನ್‌ 1, ಜಾನಿ ಬೈರ್‌ಸ್ಟೋವ್‌ 22 ರನ್‌, ಸ್ಯಾಮ್‌ ಕರ್ರನ್‌ 5 ರನ್‌, ಸಿಖಂದರ್‌ ರಾಜಾ 15 ರನ್‌, ಜಿತೇಶ್‌ ಶರ್ಮಾ 16 ರನ್‌ ಗಳಿಸಿದ್ರೆ, ಹರ್ಪ್ರೀತ್‌ ಬ್ರಾರ್‌ 1 ರನ್‌ ಕದ್ದರು.

ಗುಜರಾತ್‌ ಟೈಟಾನ್ಸ್‌ ಪರ ವೃದ್ಧಿಮಾನ್‌ ಸಾಹಾ 11 ರನ್‌, ಶುಭಮನ್‌ ಗಿಲ್‌ 89 ರನ್‌ (48 ಎಸೆತ, 6 ಬೌಂಡರಿ, 4 ಸಿಕ್ಸರ್‌, ಕೇನ್‌ ವಿಲಿಯಮ್ಸನ್‌ 26 ರನ್‌, ಸಾಯಿ ಸುದರ್ಶನ್‌ 33 ರನ್‌, ವಿಜಯ್‌ ಶಂಕರ್‌ 8 ರನ್‌, ರಾವುಲ್‌ ತೆವಾಟಿಯಾ 23 ರನ್‌ (8 ಎಸೆತ, 3 ಬೌಂಡರಿ, 1 ಸಿಕ್ಸರ್‌) ಗಳಿಸಿದರು.

Share This Article