ಕ್ರಿಕೆಟ್‍ನಿಂದ ನಿವೃತ್ತಿ ಪಡೆದ ಓಜಾ -ಸಚಿನ್ ನಿವೃತ್ತಿಯ ಪಂದ್ಯದಲ್ಲಿ 5 ವಿಕೆಟ್ ಕಿತ್ತಿದ್ದ ಪ್ರಗ್ಯಾನ್

Public TV
2 Min Read

ಮುಂಬೈ: ಟೀಂ ಇಂಡಿಯಾ ಮಾಜಿ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ನಿವೃತ್ತ ಘೋಷಿಸಿದ್ದಾರೆ.

ಪ್ರಗ್ಯಾನ್ ಓಜಾ ಅವರು ಈ ವಿಚಾರವನ್ನು ಟ್ವಿಟರ್‍ನಲ್ಲಿ ಶುಕ್ರವಾರ ಪ್ರಕಟಿಸಿದ್ದಾರೆ. ‘ಜೀವನದ ಮುಂದಿನ ಹಂತಕ್ಕೆ ಸಾಗಲು ಇದು ಸೂಕ್ತ ಸಮಯ. ನನ್ನ ವೃತ್ತಿ ಬದುಕಿನುದ್ದಕ್ಕೂ ಪ್ರೀತಿ ನೀಡಿ ಬೆಂಬಲಿಸಿ, ಪ್ರೇರೇಪಿಸಿದ ಪ್ರತಿಯೊಬ್ಬರೂ ನನ್ನಲ್ಲಿ ಶಾಶ್ವತವಾಗಿ ಉಳಿಯಲಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ಓಜಾ 2013ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮುಂಬೈಯಲ್ಲಿ ಕೊನೆಯ ಟೆಸ್ಟ್ ಆಡಿದ್ದರು. ಇದು ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರ ಕೊನೆಯ ಟೆಸ್ಟ್ ಪಂದ್ಯವೂ ಆಗಿತ್ತು. ಈ ಪಂದ್ಯದಲ್ಲಿ ಓಜಾ ಎರಡೂ ಇನ್ನಿಂಗ್ಸ್ ಗಳಲ್ಲಿ ಐದು ವಿಕೆಟ್‍ಗಳನ್ನು ಪಡೆದು ಮಿಂಚಿದ್ದರು.

33 ವರ್ಷದ ಓಜಾ ಪ್ರಸ್ತುತ ಕ್ರಿಕೆಟ್ ಸಂಬಂಧಿತ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಪ್ರಗ್ಯಾನ್ ಓಜಾ 2009ರಲ್ಲಿ ಚೊಚ್ಚಲ ಟೆಸ್ಟ್ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದರು. ಒಟ್ಟು 24 ಟೆಸ್ಟ್, 18 ಏಕದಿನ ಮತ್ತು 6 ಟಿ20 ಪಂದ್ಯಗಳನ್ನು ಓಜಾ ಆಡಿದ್ದಾರೆ. ಅವರನ್ನು ಭಾರತದ ಅತ್ಯುತ್ತಮ ಎಡಗೈ ಸ್ಪಿನ್ನರ್ ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.

2009ರಲ್ಲಿ ಹರ್ಭಜನ್ ಸಿಂಗ್ ಫಾರ್ಮ್ ಕಳೆದುಕೊಳ್ಳುತ್ತಿದ್ದಾಗ ಓಜಾ ಟೀಂ ಇಂಡಿಯಾದ ಭಾಗವಾದರು. ಭಾರತ ಕ್ರಿಕೆಟ್ ತಂಡದ ಸ್ಪಿನ್ ದಾಳಿಗೆ ಓಜಾ ಮತ್ತು ರವಿಚಂದ್ರನ್ ಅಶ್ವಿನ್ ಹೊಸ ನಿರ್ದೇಶನ ನೀಡಿದ್ದರು. 2012ರಲ್ಲಿ ಭಾರತ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು 2-1ರಲ್ಲಿ ಕಳೆದುಕೊಂಡಿತ್ತು. ಆ ಸರಣಿಯಲ್ಲೂ ಓಜಾ 20 ವಿಕೆಟ್ ಪಡೆದಿದ್ದರು. ಆದರೆ, ನಂತರದ ವರ್ಷ 2013ರಲ್ಲಿ ರವೀಂದ್ರ ಜಡೇಜಾ ಆಲ್‍ರೌಂಡರ್ ಆಗಿ ಟೀಂ ಇಂಡಿಯಾಗೆ ಸೇರಿದ ಬಳಿಕ ಓಜಾ ತಂಡದಿಂದ ಹೊರ ಬಿದ್ದರು. ಮುಂದೆ ಎಂದಿಗೂ ಟೆಸ್ಟ್ ತಂಡದ ಭಾಗವಾಗಲಿಲ್ಲ.

ವೃತ್ತಿಜೀವನದ ದಾಖಲೆ:
ಓಜಾ 24 ಟೆಸ್ಟ್ ಪಂದ್ಯಗಳಲ್ಲಿ 113 ವಿಕೆಟ್, 18 ಏಕದಿನ ಪಂದ್ಯಗಳಲ್ಲಿ 21 ವಿಕೆಟ್ ಹಾಗೂ 6 ಟಿ20 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದರು. ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಒಟ್ಟು 424 ವಿಕೆಟ್‍ಗಳನ್ನು ಓಜಾ ಹೊಂದಿದ್ದಾರೆ. ಇದಕ್ಕಾಗಿ ಅವರು 108 ಪಂದ್ಯಗಳನ್ನು ಆಡಿದ್ದಾರೆ. 2018ರಲ್ಲಿ ಅವರು ಬಿಹಾರಕ್ಕಾಗಿ ಉತ್ತರಾಖಂಡ್ ವಿರುದ್ಧ ತಮ್ಮ ಕೊನೆಯ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದರು.

ಐಪಿಎಲ್‍ನಲ್ಲಿ ಓಜಾ ಡೆಕ್ಕನ್ ಚಾರ್ಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಆದರೆ 2015ರಿಂದ ಯಾವುದೇ ಐಪಿಎಲ್ ತಂಡದ ಭಾಗವಾಗಲಿಲ್ಲ. ಐಪಿಎಲ್‍ನಲ್ಲಿ ಒಟ್ಟು 92 ಪಂದ್ಯಗಳನ್ನು ಆಡಿದ ಅವರು 89 ವಿಕೆಟ್‍ಗಳನ್ನು ಪಡೆದಿದ್ದರು.

ಪ್ರಗ್ಯಾನ್ ಓಜಾ ಮತ್ತು ಸಚಿನ್ ತೆಂಡೂಲ್ಕರ್ ಒಟ್ಟಿಗೆ ಅಂತಿಮ ಟೆಸ್ಟ್ ಆಡಿದ್ದು ಕಾಕತಾಳೀಯ. ಸಚಿನ್ 2017ರಲ್ಲೇ ನಿವೃತ್ತಿ ಘೋಷಿಸಿದ್ದರು. ಆದರೆ ಓಜಾ ಆನಂತರ ಟೀಂ ಇಂಡಿಯಾ ಪರ ಟೆಸ್ಟ್ ಆಡಲಿಲ್ಲ. ಪ್ರಜ್ಞಾನ್ 2013ರಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ‘ಮ್ಯಾನ್ ಆಫ್ ದಿ ಮ್ಯಾಚ್’ ಆಗಿದ್ದರು. ಎರಡೂ ಇನ್ನಿಂಗ್ಸ್ ಗಳಲ್ಲಿ 5-5 ವಿಕೆಟ್‍ಗಳನ್ನು ಪಡೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *