ದುಬೈ: ಕೆಲಸ ಅರಸಿ ಯುಎಇಗೆ ತೆರಳಿದ್ದ ಭಾರತೀಯ ಬಡ ರೈತರೊಬ್ಬರು ಕೆಲಸಕ್ಕಾಗಿ ಅಲೆದು ಕೊನೆಗೆ ಉದ್ಯೋಗ ಸಿಗದೇ ವಾಪಸ್ ಭಾರತಕ್ಕೆ ಮರಳಿದ್ದರು. ಆದರೆ ಭಾರತಕ್ಕೆ ಹಿಂತಿರುಗಿದ ಬಳಿಕ ದುಬೈನಲ್ಲಿ ಅವರು ಖರೀದಿಸಿದ್ದ ಲಾಟರಿ ಹೊಡೆದಿದ್ದು, ಬರೋಬ್ಬರಿ 28 ಕೋಟಿ ರೂ. ಹಣವನ್ನು ತನ್ನದಾಗಿಸಿಕೊಂಡಿದ್ದಾರೆ.
ಹೌದು. ಯಾವಾಗ? ಯಾರಿಗೆ? ಹೇಗೆ ಅದೃಷ್ಟ ಬರುತ್ತೋ ಎನ್ನುವ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ. ಹೈದರಾಬಾದಿನ ನಿಜಾಮಾಬಾದ್ ಜಿಲ್ಲೆಯ ಜಕ್ರನ್ಪಲ್ಲಿಯ ವಿಲಾಸ್ ರಿಕ್ಕಲಾ ಕೆಲಸ ಸಿಗದೇ ಭಾರತಕ್ಕೆ ವಾಪಸ್ ಬಂದಮೇಲೆ ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ ಕೋಟ್ಯಧಿಪತಿ ಆಗಿದ್ದಾರೆ.
ಜಕ್ರನ್ಪಲ್ಲಿಯಲ್ಲಿ ಹೊಲವನ್ನು ನೋಡಿಕೊಂಡು ಜೀವನ ಸಾಗಿಸುವುದು ಕಷ್ಟವೆಂದು ರೈತ ಕೆಲಸಕ್ಕಾಗಿ ದುಬೈಗೆ ತೆರಳಿದ್ದರು. ಆದರೆ ಅಲ್ಲಿ ಕೆಲಸ ಸಿಕ್ಕದಿದ್ದರೂ ಕೋಟಿಗಟ್ಟಲೆ ಹಣ ಪಡೆದಿದ್ದಾರೆ.
ವಿಲಾಸ್ ಅವರು ದುಬೈನಿಂದ ವಾಪಸ್ ಬರುವ ಮೊದಲು ಪತ್ನಿ ಪದ್ಮಾ ಅವರಿಂದ 20 ಸಾವಿರ ರೂ. ಸಾಲ ಪಡೆದು ಸ್ನೇಹಿತನ ಸಹಾಯದಿಂದ ಬಿಗ್ ಟಿಕೆಟ್ ರಫೇಲ್ ಡಿಎಚ್15 ಮಿಲಿಯನ್ ಲಾಟರಿ ಖರೀದಿಸಿದ್ದರು. ಆದರೆ ಅಲ್ಲಿ ತವರಿಗೆ ಮರಳಿದ ಬಳಿಕ ಅವರಿಗೆ ಜಾಕ್‍ಪಾಟ್ ಹೊಡೆದಿದೆ.
ಭತ್ತದ ಗದ್ದೆಗಳನ್ನು ಗುತ್ತಿಗೆ ಪಡೆದು ವಿಲಾಸ್ ಅವರು ಪತ್ನಿಯ ಜೊತೆಗೂಡಿ ಕೆಲಸ ಮಾಡಿ ವಾರ್ಷಿಕವಾಗಿ 2ರಿಂದ 3 ಲಕ್ಷ ರೂ. ದುಡಿಯುತ್ತಿದ್ದರು. ಹಿಂದೊಮ್ಮೆ ದುಬೈಗೆ ಹೋಗಿ 2 ವರ್ಷ ಕಾರು ಚಾಲಕನಾಗಿ ಚೆನ್ನಾಗಿ ಸಂಪಾದಿಸಿಕೊಂಡು ಬಂದಿದ್ದರು. ಆಗ ಕೂಡ ರಫೇಲ್ ಲಾಟರಿ ಟಿಕೆಟ್‍ಗಳನ್ನು ಖರೀದಿಸುತ್ತಿದ್ದರು. ಆದರೆ ಆಗ ಅವರಿಗೆ ಹೆಚ್ಚು ಲಾಭವೇನೂ ಆಗಿರಲಿಲ್ಲ. ಆದರೆ ಈ ಬಾರಿ ಅವರಿಗೆ ಬಂಪರ್ ಹೊಡೆದಿದೆ.