ದುಷ್ಕರ್ಮಿಯಿಂದ ಅಮೆರಿಕ ಬಿಟ್ಟು ತೊಲಗಿ ಘೋಷಣೆ- ಗುಂಡಿಟ್ಟು ಭಾರತೀಯ ಟೆಕ್ಕಿಯ ಹತ್ಯೆ

Public TV
1 Min Read

ವಾಷಿಂಗ್ಟನ್: ಹೈದರಾಬಾದ್ ಮೂಲದ ಭಾರತೀಯರೊಬ್ಬರು ಅಮೆರಿಕದಲ್ಲಿ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

ಬುಧವಾರ ಸಂಜೆ ಹೈದರಾಬಾದ್ ಮೂಲದ ಎಂಜಿನಿಯರ್ ಶ್ರೀನಿವಾಸ್ ಕೂಚಿಬೊಟ್ಲ, ಗೆಳೆಯನ ಜೊತೆ ಕಾನ್ಸಾಸ್‍ನ ಬಾರ್‍ನಲ್ಲಿದ್ದರು. ಈ ವೇಳೆ 51 ವರ್ಷದ ಆಡಂ ಪುರಿಂಟನ್ ಎಂಬ ದುಷ್ಕರ್ಮಿ ಶ್ರೀನಿವಾಸ್ ಮತ್ತು ಅವರ ಗೆಳೆಯನನ್ನು ಮಿಡಲ್ ಈಸ್ಟರ್ನ್(ಮಧ್ಯಪ್ರಾಚ್ಯ ದೇಶದವರು) ಎಂದು ಕರೆದು ನನ್ನ ದೇಶವನ್ನು ಬಿಟ್ಟು ತೊಲಗಿ ಎಂದು ಕೂಗುತ್ತಾ ಗುಂಡಿನ ದಾಳಿ ನಡೆಸಿದ್ದಾನೆ.

ದಾಳಿಯಲ್ಲಿ ಶ್ರೀನಿವಾಸ್ ಸಾವನ್ನಪ್ಪಿದ್ದು, ಅಲೋಕ್ ಮದಾಸಿನಿ ಎಂಬ ಮತ್ತೊಬ್ಬ ಭಾರತೀಯ ಗಾಯಗೊಂಡು ಸದ್ಯ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಲು ಯತ್ನಿಸಿದ ಪ್ರತ್ಯಕ್ಷದರ್ಶಿ ಐಯಾನ್ ಗ್ರಿಲ್ಲೊಟ್ ಎಂಬವರ ಮೇಲೂ ಗುಂಡಿನ ದಾಳಿ ನಡೆದಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ನಂತರ ಪರಾರಿಯಾಗಿದ್ದ ದಾಳಿಕೋರ ಆಡಂ ಪುರಿಂಟನ್, ಮಿಸ್ಸೌರಿಯ ಸ್ಥಳೀಯ ಬಾರ್‍ವೊಂದರಲ್ಲಿ ನಾನು ಇಬ್ಬರು ಮಧ್ಯಪ್ರಾಚ್ಯ ವ್ಯಕ್ತಿಗಳನ್ನು ಕೊಂದಿದ್ದೇನೆ ಎಂದು ಹೇಳಿದ್ದಾನೆ. ಇದನ್ನು ಕೇಳಿ ಅಲ್ಲಿನ ಸಿಬ್ಬಂದಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಘಟನೆ ನಡೆದ 5 ಗಂಟೆಗಳ ಒಳಗೆ ಆಡಂನನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರೋ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ನನಗೆ ಆಘಾತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಶ್ರೀನಿವಾಸ್ ಅವರ ಕುಟುಂಬಕ್ಕೆ ಅಗತ್ಯವಾದ ನೆರವು ನೀಡುವ ಬಗ್ಗೆ ಭರವಸೆ ನೀಡಿದ್ದಾರೆ. ಶ್ರೀನಿವಾಸ್ ಅವರ ಮೃತದೇಹವನ್ನು ಹೈದರಾಬಾದ್‍ಗೆ ತರಲು ಎಲ್ಲಾ ನೆರವು ನೀಡುವುದಾಗಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಶ್ರೀನಿವಾಸ್ ಅವರು ಜಿಪಿಎಸ್ ಸಿಸ್ಟಮ್ ತಯಾರು ಮಾಡುವ ಅಮೆರಿಕದ ಎಂಎನ್‍ಸಿ ಯಲ್ಲಿ ಕೆಲಸ ಮಾಡುತ್ತಿದ್ದರು. 2014ರಲ್ಲಿ ಸಂಸ್ಥೆಯನ್ನು ಸೇರಿದ್ದರು. ಇವರ ಪತ್ನಿ ಸುನಯನ ಕೂಡ ಇದೇ ಪ್ರದೇಶದಲ್ಲಿ ಮತ್ತೊಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *