ಪಿಎಸ್‍ಎಲ್‍ಗಾಗಿ ಪಾಕ್ ತೆರಳಿ ಸಮಸ್ಯೆಗೆ ಸಿಲುಕಿದ ಭಾರತೀಯರು

Public TV
2 Min Read

ಇಸ್ಲಾಮಾಬಾದ್: ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‍ಎಲ್) ಪ್ರಸಾರ ಮಾಡುವ ಸಲುವಾಗಿ ಪಾಕ್‍ಗೆ ತೆರಳಿದ್ದ ಭಾರತೀಯರ ತಂಡ ಸಮಸ್ಯೆಗೆ ಸಿಲುಕಿದ್ದು, ಕೊರೊನಾ ಎಫೆಕ್ಟ್ ನಿಂದ ಟೂರ್ನಿ ಮುಂದೂಡುತ್ತಿದಂತೆ ಭಾರತಕ್ಕೆ ಹಿಂದಿರುಗಿ ಬರಲು ಯತ್ನಿಸಿದ್ದಾರೆ.

ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಹಾಗೂ ಭಾರತ ನಡುವಿನ ಗಡಿಯನ್ನು ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಾಘಾ ಗಡಿಗೆ ಆಗಮಿಸಿದ್ದ ಬ್ರಾಡ್‍ಕಾಸ್ಟಿಂಕ್ ಸಂಸ್ಥೆಯ ಸಿಬ್ಬಂದಿಯನ್ನು ಗಡಿ ಭದ್ರತಾ ಸಿಬ್ಬಂದಿಗಳು ಪರಿಶೀಲನೆ ನಡೆಸಿ ಮತ್ತೆ ವಾಪಸ್ ಕಳುಹಿಸಿದ್ದಾರೆ. ಪರಿಣಾಮ ಪಾಕ್ ತೆರಳಿದ್ದ 29 ಮಂದಿ ಭಾರತಕ್ಕೆ ವಾಪಸ್ ಬರಲು ಸಮಸ್ಯೆ ಎದುರಿಸಿದ್ದಾರೆ. ಇತ್ತ ಪಾಕಿಸ್ತಾನ ಅವರನ್ನು ವಿಮಾನದಲ್ಲಿ ಭಾರತಕ್ಕೆ ಕಳುಹಿಸಲು ತಯಾರಿ ನಡೆಸಿದೆ.

ಪಿಎಸ್‍ಎಲ್ ಪ್ರಸಾರ ಮಾಡುವ ಹಿನ್ನೆಲೆಯಲ್ಲಿ ಬ್ರಾಡ್‍ಕಾಸ್ಟಿಂಗ್ ಸಂಸ್ಥೆ ಭಾರತದ 29 ಮಂದಿಯನ್ನು ಪಾಕ್‍ಗೆ ಕಳುಹಿಸಿತ್ತು. ಕೇಂದ್ರ ಸರ್ಕಾರ ಕೂಡ ಅವರಿಗೆ ವಿಮಾನ ಮೂಲಕ ಪಾಕ್ ತೆರಳಲು ಅನುಮತಿ ನೀಡಿತ್ತು. ಆದರೆ ಸದ್ಯ ಸಿಬ್ಬಂದಿ ಭೂ ಮಾರ್ಗದ ಮೂಲಕ ಭಾರತಕ್ಕೆ ಆಗಮಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿದೆ. ಕೇಂದ್ರ ಸರ್ಕಾರ ವಿಮಾನದಲ್ಲಿ ಭಾರತಕ್ಕೆ ಆಗಮಿಸಲು ಅನುಮತಿ ನೀಡಿದೆ ವಿನಾಃ ಭೂ ಮಾರ್ಗದ ಮೂಲಕ ಅಲ್ಲ ಎಂದು ಗಡಿ ಭದ್ರತಾ ಸಿಬ್ಬಂದಿ ಬ್ರಾಡ್‍ಕಾಸ್ಟಿಂಗ್ ಸಂಸ್ಥೆಗೆ ತಿಳಿಸಿ ವಾಪಸ್ ಕಳುಹಿಸಿದ್ದಾರೆ.

ಅಂದಹಾಗೇ ವಿಶ್ವದ ಹಲವರು ಭಾಗಗಳಲ್ಲಿ ಕೊರೊನಾ ಎಫೆಕ್ಟ್ ಹೆಚ್ಚಾಗಿದೆ. ಆದರೆ ಪಾಕಿಸ್ತಾನ ಮಾತ್ರ ತನ್ನ ನೆಲದಲ್ಲಿ ಕೊರೊನಾ ಪ್ರಭಾವ ಇಲ್ಲ ಎಂದು ವಾದ ಮಂಡಿಸುತ್ತಿದೆ. ತೀವ್ರ ಒತ್ತಡ ಹಿನ್ನೆಲೆಯಲ್ಲಿ ಅಂತಿಮವಾಗಿ ಪಾಕ್ ಕ್ರಿಕೆಟ್ ಮಂಡಳಿ ಪಿಎಸ್‍ಎಲ್ ಟೂರ್ನಿಯನ್ನು ಮುಂದೂಡಿದೆ. ಅಲ್ಲದೇ ಇಂಗ್ಲೆಂಡ್ ಆಟಗಾರ ಅಲೆಕ್ಸ್ ಹೇಲ್ಸ್ ಅವರಿಗೆ ಕೊರೊನಾ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಪಿಸಿಬಿ ಕೂಡಲೇ ಅವರನ್ನು ತವರಿಗೆ ವಾಪಸ್ ಕಳುಹಿಸಿಕೊಟ್ಟಿತ್ತು. ಈ ವಿಚಾರವನ್ನು ರಹಸ್ಯವಾಗಿಟ್ಟು ಟೂರ್ನಿ ಮುಂದುವರಿಸುವ ಚಿಂತನೆಯಲ್ಲಿದ್ದ ಸಮಯದಲ್ಲಿ ಕ್ರಿಕೆಟ್ ವಿಶ್ಲೇಷಣೆಗಾರ ರಮೀಜ್ ರಾಜಾ ಘಟನೆಯನ್ನು ಬಹಿರಂಗ ಪಡಿಸಿದ್ದರು. ಇದರೊಂದಿಗೆ ತೀವ್ರ ಮುಖಭಂಗಕ್ಕೆ ಒಳಗಾದ ಪಿಸಿಬಿ ಟೂರ್ನಿಯನ್ನು ತಾತ್ಕಾಲಿಕವಾಗಿ ರದ್ದು ಮಾಡಿತ್ತು. ಇಂಗ್ಲೆಂಡ್‍ಗೆ ವಾಪಸ್ ಆಗಿರುವ ಅಲೆಕ್ಸ್ ಹೇಲ್ಸ್ ಜ್ವರದಿಂದ ಬಳುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಸದ್ಯ ಅವರು ಆರೋಗ್ಯದ ಇಲಾಖೆಯ ಸೂಚನೆಗಳ ಅನ್ವಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *