ಕುತಂತ್ರಿ ಪಾಕಿಗೆ ಭಾರತ ಸೇನೆಯ ಉತ್ತರ – 15 ಪಾಕ್ ಸೈನಿಕರು, 8 ಭಯೋತ್ಪಾದಕರು ಮಟಾಶ್

Public TV
2 Min Read

ಶ್ರೀನಗರ: ಪಾಕಿಸ್ತಾನ ಕೆಲವು ದಿನಗಳಿಂದ ಗಡಿಯಲ್ಲಿ ನಿರಂತರವಾಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿತ್ತು. ಇದಕ್ಕೆ ಭಾರತೀಯ ಸೇನಾ ಪಡೆ ಪ್ರತ್ಯುತ್ತರ ನೀಡಿದೆ. ಜಮ್ಮು-ಕಾಶ್ಮೀರದ ಕೇರನ್ ವಲಯದ ದುಧ್ನಿಯಲ್ ಪ್ರದೇಶದಲ್ಲಿ ಭಯೋತ್ಪಾದಕರ ಉಡಾವಣಾ ಪ್ಯಾಡ್‍ಗಳ ಮೇಲೆ ಭಾರತೀಯ ಸೇನೆ ಫಿರಂಗಿದಳದ ಮೂಲಕ ಏಪ್ರಿಲ್ 10 ರಂದು ದಾಳಿ ನಡೆಸಿದೆ. ಈ ದಾಳಿಯಲ್ಲಿ ಎಂಟು ಭಯೋತ್ಪಾದಕರು ಮತ್ತು 15 ಪಾಕಿಸ್ತಾನ ಸೇನಾ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸೇನೆ ತಿಳಿಸಿದೆ.

ದೇಶದಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಅನೇಕ ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಕಿಶನ್‍ಗಂಗಾ ನದಿಯ ದಡದಲ್ಲಿ ದುಧ್ನಿಯಲ್ ಪ್ರದೇಶವನ್ನು ಭಾರತೀಯ ಸೇನೆ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.

ಕೇರನ್ ವಲಯದಲ್ಲಿ ಏಪ್ರಿಲ್ 5 ರಂದು ಭಯೋತ್ಪಾದಕರು ಒಳನುಸುಳಲು ಯತ್ನಿಸುತ್ತಿದ್ದಾಗ ಭಾರತೀಯ ಸೇನೆಯ ವಿಶೇಷ ಪಡೆಗಳು ಐದು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದರು. ಇವರಲ್ಲಿ ಮೂವರು ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದವರು ಮತ್ತು ಉಳಿದ ಇಬ್ಬರು ಜೈಶ್ ಎ ಮೊಹಮ್ಮದ್ (ಜೆಎಂ) ಅವರೊಂದಿಗೆ ತರಬೇತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಶಾರ್ದಾ, ದುಧ್ನಿಯಲ್ ಮತ್ತು ಶಾಹಕೋಟ್ ಪ್ರದೇಶಗಳಲ್ಲಿ ಭಾರತೀಯ ಸೇನೆಯು ಗುಂಡಿನ ದಾಳಿ ನಡೆಸಿದೆ ಎಂದು ಪಾಕಿಸ್ತಾನ ಸೇನೆ ಖಚಿತಪಡಿಸಿದೆ. ಆದರೆ ದಾಳಿಯಲ್ಲಿ 15 ವರ್ಷದ ಬಾಲಕಿ ಸೇರಿದಂತೆ ನಾಲ್ಕು ನಾಗರಿಕರಿಗೆ ಮಾತ್ರ ಗಂಭೀರ ಗಾಯಗಳಾಗಿವೆ ಎಂದು ಹೇಳಿಕೊಂಡಿತ್ತು.

ಏಪ್ರಿಲ್ 10 ರಂದು ಸೈನ್ಯವು ಕೇರನ್ ವಲಯದಲ್ಲಿ ದಾಳಿ ಮಾಡಿ 8 ಭಯೋತ್ಪಾದಕರೊಂದಿಗೆ 15 ಪಾಕಿಸ್ತಾನ ಸೇನಾ ಸೈನಿಕರು ಸಾವನ್ನಪ್ಪಿದ್ದರು. ಅಷ್ಟೇ ಅಲ್ಲದೇ ದುಧ್ನಿಯಲ್ ಪ್ರದೇಶದಲ್ಲಿ ಕೆಲ ಆಹಾರ ಮತ್ತು ಸರಕುಗಳನ್ನು ಸಂಗ್ರಹಿಸಿದ್ದ ಅಂಗಡಿಗಳಿಗೂ ಸಹ ಹಾನಿಯಾಗಿದೆ ಎಂದು ಗುಪ್ತಚರ ವರದಿ ತಿಳಿದಿದೆ.

ಈ ವಲಯದಲ್ಲಿ ಪಾಕಿಸ್ತಾನದ ಲಾಚ್‍ಪ್ಯಾಡ್‍ಗಳಲ್ಲಿ ಲಷ್ಕರ್ ಎ ತೊಯ್ಬಾ, ಜೈಶ್ ಇ ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್‍ನ ಸುಮಾರು 160 ಭಯೋತ್ಪಾದಕರು ಭಾರತ ಪ್ರದೇಶ ಮಾಡಲು ಹೊಂಚು ಹಾಕುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಭಾರತೀಯ ಸೈನ್ಯಕ್ಕೆ ಉಡಾವಣಾ ಪ್ಯಾಡ್‍ಗಳನ್ನು ಗುರಿಯಾಗಿ ದಾಳಿ ಮಾಡುವುದು ಅನಿವಾರ್ಯವಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 242 ಭಯೋತ್ಪಾದಕರು ಇದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಅಂದಾಜಿಸಿವೆ.

Share This Article
Leave a Comment

Leave a Reply

Your email address will not be published. Required fields are marked *