ದೇಶದ ಪ್ರಥಮ ಸ್ವದೇಶಿ ಬೋಫೋರ್ಸ್ ಸೇನೆಗೆ ಸೇರ್ಪಡೆ: ಧನುಷ್ ವಿಶೇಷತೆ ಏನು? ವಿಡಿಯೋ ನೋಡಿ

Public TV
1 Min Read

ನವದೆಹಲಿ: ದೇಶೀಯ ಬೋಫೋರ್ಸ್ ಎಂದೇ ಖ್ಯಾತಿ ಪಡೆದಿರುವ ಅತ್ಯಾಧುನಿಕ ಫಿರಂಗಿ ಗನ್ ‘ಧನುಷ್’ ಸೋಮವಾರ ಸೇನೆಗೆ ಸೇರ್ಪಡೆಯಾಗಿದೆ.

ಮಧ್ಯಪ್ರದೇಶದ ಜಬ್ಬಲ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ 6 ಧನುಷ್ ಫಿರಂಗಿಗಳು ಸೇನೆಗೆ ಸೇರ್ಪಡೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಮೇಕ್ ಇನ್ ಇಂಡಿಯಾ ಯೋಜನೆಯಡಿ ಶೇ.81ರಷ್ಟು ಭಾಗಗಳನ್ನು ದೇಶದಲ್ಲಿ ಉತ್ಪಾದಿಸಲಾಗಿದೆ. ‘ಧನುಷ್’, ವಿದೇಶಿ ಬೋಫೋರ್ಸ್ ಫಿರಂಗಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ. 2019ರ ವೇಳೆಗೆ ಶೇ.91 ರಷ್ಟು ಭಾಗಗಳು ಭಾರತದಲ್ಲೇ ಉತ್ಪಾದನೆಯಾಗಲಿದೆ.

ವಿಶೇಷತೆ ಏನು?
ಸ್ವೀಡನ್ನಿನ ಬೋಫೋರ್ಸ್ 27 ಕಿ.ಮೀ. ದೂರದವರೆಗೆ ಗುಂಡು ಹಾರಿಸುವ ಸಾಮರ್ಥ್ಯ ಹೊಂದಿದ್ದರೆ ಧನುಷ್ 38 ಕಿ.ಮೀ ದೂರದ ಗುರಿಯನ್ನು ಧ್ವಂಸ ಮಾಡುವ ಸಾಮಥ್ರ್ಯವನ್ನು ಹೊಂದಿದೆ. ದೇಶದ ಪ್ರಥಮ ಸ್ವದೇಶಿ ಗನ್ ಇದಾಗಿದ್ದು ಶಸ್ತ್ರಾಸ್ತ್ರ ಕಾರ್ಖಾನೆಗಳ ಮಂಡಳಿ ಫಿರಂಗಿಯನ್ನು ಸೇನೆಗೆ ಹಸ್ತಾಂತರಿಸಿದೆ.

155ಎಂಎಂ/45 ಕ್ಯಾಲಿಬರ್ ಟೋವ್ಡ್ ಗನ್ ಯಾವುದೇ ಭೂಪ್ರದೇಶದಲ್ಲಿ ಬಳಸಬಹುದಾಗಿದೆ. ಹಗಲು, ರಾತ್ರಿ ಸೇರಿದಂತೆ ಪರ್ವತ, ಗುಡ್ಡಗಾಡು ಪ್ರದೇಶಗಳಲ್ಲೂ ಇದನ್ನು ಸುಲಭವಾಗಿ ಬಳಕೆ ಮಾಡಬಹುದು. ಅತ್ಯಂತ ಹೆಚ್ಚು ಸೆಕೆ ಇರುವ ಝಾನ್ಸಿ, ಪೋಖ್ರಾನ್ ಅತ್ಯಂತ ಚಳಿ ಇರುವ ಸಿಕ್ಕಿಂ ಮತ್ತು ಲೇಹ್ ನಲ್ಲೂ ಈ ಫಿರಂಗಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.

ಡಿಆರ್‌ಡಿಒ, ಬಿಜಿಕ್ಯುಎ, ಬಿಇಎಲ್ ಸೇರಿದಂತೆ ಹಲವು ಸಂಸ್ಥೆಗಳು ಈ ಫಿರಂಗಿ ನಿರ್ಮಾಣಕ್ಕೆ ಸಹಕಾರ ನೀಡಿವೆ. ನ್ಯಾವಿಗೇಷನ್ ಬೇಸ್ಡ್ ಸೈಟಿಂಗ್ ಸಿಸ್ಟಮ್ ಅಟೋ ಲೇಯಿಂಗ್ ಫೆಸಿಲಿಟಿ, ಆನ್ ಬೋರ್ಡ್ ಬ್ಯಾಲಿಸ್ಟಿಕ್ ಕಂಪ್ಯೂಟೇಷನ್, ಡೇ ಆಂಡ್ ನೈಟ್ ಡೈರೆಕ್ಟ್ ಫೈರಿಂಗ್ ಸಿಸ್ಟಮ್ ಸೆಲ್ಪ್ ಪ್ರೊಪಲ್ಶನ್ ಯೂನಿಟ್ ಮುಂತಾದ ವ್ಯವಸ್ಥೆ ಫಿರಂಗಿಯಲ್ಲಿದೆ.

ಒಂದು ಧನುಷ್ ನಿರ್ಮಾಣಕ್ಕೆ 14.50 ಕೋಟಿ ರೂ. ವೆಚ್ಚವಾಗಲಿದ್ದು, ಒಟ್ಟು 114 ‘ಧನುಷ್’ ಫಿರಂಗಿಗಳು ಭಾರತೀಯ ಸೇನೆಗೆ ಸೇರ್ಪಡೆಯಾಗಲಿದೆ. 7 ಸಾವಿರ ಕೆಜಿ ತೂಕದ ಈ ಫಿರಂಗಿಯನ್ನು 6 ರಿಂದ 8 ಮಂದಿ ಸೈನಿಕರು ನಿಯಂತ್ರಿಸಬಹುದು.

2017ರಲ್ಲಿ ಇದರ ಪ್ರಯೋಗಿಕ ಪರೀಕ್ಷೆಗಳು ಆರಂಭಗೊಂಡು 2018ರ ಮಧ್ಯ ಭಾಗದಲ್ಲಿ ವೇಳೆ ಇದರ ಅಂತಿಮ ಪರೀಕ್ಷೆ ಮುಕ್ತಾಯಗೊಂಡಿತ್ತು. 2019ರ ವೇಳೆಗೆ ಈ ಗನ್ ಉತ್ಪಾದನೆಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿತ್ತು.

Share This Article
Leave a Comment

Leave a Reply

Your email address will not be published. Required fields are marked *