ಏಷ್ಯಾಕಪ್‌ನಲ್ಲಿ ಭಾರತಕ್ಕೆ ಸಿಂಧೂರ ʼತಿಲಕʼ!

Public TV
0 Min Read

ದುಬೈ: ಆರಂಭದಲ್ಲಿ ವಿಕೆಟ್‌ ಕಳೆದುಕೊಂಡಿದ್ದರೂ ತಿಲಕ್‌ ವರ್ಮಾ ಅವರ ಸ್ಫೋಟಕ ಅರ್ಧಶತಕದ ಆಟದಿಂದ ಏಷ್ಯಾಕಪ್‌ ಫೈನಲ್‌ನಲ್ಲಿ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿ 9ನೇ ಬಾರಿ ಭಾರತ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ.

ಭಾನುವಾರದ ಏಷ್ಯಾ ಕಪ್‌ ಫೈನಲ್‌ ಹೈವೋಲ್ಟೇಜ್‌ ಪಂದ್ಯ ರೋಚಕತೆಯಿಂದ ಕೂಡಿತ್ತು. ಕೊನೆ 7 ಬಾಲ್‌ಗೆ 10 ರನ್‌ ಬೇಕಾಗಿತ್ತು. ಫಹೀಮ್ ಅಶ್ರಫ್‌ ಕೊನೆ ಎಸೆತಕ್ಕೆ ಸಿಕ್ಸರ್‌ ಹೊಡೆಯಲು ಮುಂದಾಗಿ ಶಿವಂ ದುಬೆ ಬೌಂಡರಿ ಲೈನ್‌ನಲ್ಲಿ ಕ್ಯಾಚ್‌ ನೀಡಿ ನಿರ್ಗಮಿಸಿದ್ದು, ಭಾರತೀಯರಿಗೆ ಅರೆಕ್ಷಣ ಶಾಕ್‌ ನೀಡಿತು. ಕೊನೆ ಓವರ್‌ನಲ್ಲಿ 10 ರನ್‌ ಬೇಕಿತ್ತು. ಆಗ ತಿಲಕ್‌ ವರ್ಮಾಗೆ ರಿಂಕು ಸಿಂಗ್‌ ಜೊತೆಯಾದರು. ಲಾಸ್ಟ್‌ ಓವರ್‌ನ ಮೊದಲ ಬಾಲ್‌ಗೆ ತಿಲಕ್‌ 2 ರನ್‌ ಗಳಿಸಿದರು. ಮತ್ತೆ ಸಿಕ್ಸರ್‌ ಬಾರಿಸಿದರು. 3ನೇ ಬಾಲ್‌ಗೆ ಸಿಂಗಲ್‌ ಬಂದರು. 4ನೇ ಬಾಲ್‌ಗೆ ರಿಂಗ್‌ ಸಿಂಗ್‌ ಫೋರ್‌ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ‘ಆಪರೇಷನ್‌ ಸಿಂಧೂರ’ದಂತಿದ್ದ ಮೈದಾನದಲ್ಲಿ ಟೀಂ ಇಂಡಿಯಾ ಕೊನೆಗೂ ಗೆದ್ದು ಬೀಗಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ 19.1 ಓವರ್‌ಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 146 ರನ್‌ ಗಳಿಸಿತು. ನಂತರ ಬ್ಯಾಟಿಂಗ್‌ ಮಾಡಿದ ಭಾರತ 19.4 ಬಾಲ್‌ಗೆ ಗುರಿ ತಲುಪಿ ಗೆದ್ದು ಬೀಗಿತು.

ಟೀಂ ಇಂಡಿಯಾ ಬ್ಯಾಟಿಂಗ್‌ ವೇಳೆ ಆರಂಭಿಕ ಆಘಾತಗಳನ್ನು ನೀಡಿತು. ಟೂರ್ನಿಯ ಕಳೆದ ಪಂದ್ಯಗಳಲ್ಲಿ ಅಬ್ಬರಿಸಿದ್ದ ಅಭಿಷೇಕ್‌ ವರ್ಮಾ ಹೈವೋಲ್ಟೇಜ್‌ ಪಂದ್ಯದಲ್ಲೇ ಕೇವಲ 5 ರನ್‌ ಗಳಿಸಿ ಕ್ಯಾಚ್‌ ನೀಡಿ ನಿರ್ಗಮಿಸಿದ್ದು, ಆಘಾತ ನೀಡಿತು. ಹೀಗಿರುವಾಗಲೇ ಕೇವಲ 1 ರನ್‌ಗೆ ಕ್ಯಾಪ್ಟನ್‌ ಸೂರ್ಯಕುಮಾರ್‌ ಯಾದವ್‌ ಔಟಾಗಿದ್ದು ತಂಡಕ್ಕೆ ಬರಸಿಡಿಲು ಬಡಿದಂತಾಯಿತು. ಶುಭಮನ್‌ ಗಿಲ್‌ ಕೂಡ ದೊಡ್ಡ ಹೊಡೆತಕ್ಕೆ ಮುಂದಾಗಿ 12 ರನ್‌ ಗಳಿಸಿ ನಿರ್ಗಮಿಸಿದರು. ತಂಡವು ಕೇವಲ 20 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಆಘಾತ ಅನುಭವಿಸಿತ್ತು.

ಆಗ ತಂಡಕ್ಕೆ ತಿಲಕ್‌ ವರ್ಮಾ ನೆರವಾದರು. ಜವಾಬ್ದಾರಿಯುತ ಆಟವಾಡಿದರು. ಅವರಿಗೆ ಸಂಜು ಸ್ಯಾಮ್ಸನ್‌ ಸಾಥ್‌ ನೀಡಿದರು. ನಿಧಾನಗತಿಯ ಆಟದ ಮೂಲಕ ಈ ಜೋಡಿ ಅರ್ಧಶತಕದ ಜೊತೆಯಾಟವಾಡಿದರು. ಗೆಲುವಿನತ್ತ ತಂಡವನ್ನು ಮುನ್ನಡೆಸಿದರು. ಈ ಮಧ್ಯೆ 24 ರನ್‌ಗಳಿಸಿ ಸ್ಯಾಮ್ಸನ್‌ ಔಟಾದರು. ಆಗ ತಿಲಕ್‌ಗೆ ಶಿವಂ ದುಬೆ ಜೊತೆಯಾದರು. ಈ ಜೋಡಿ 64 ರನ್‌ಗಳ ಜೊತೆಯಾಟವಾಡಿತು. ತಿಲಕ್ ಅರ್ಧಶತಕ ಸಿಡಿಸಿದರು. ಸಿಕ್ಸರ್‌, ಫೋರ್‌ಗಳ ಸುರಿಮಳೆ ಹರಿದುಬಂತು. ಇವರಿಬ್ಬರ ಜವಾಬ್ದಾರಿಯುತ ಆಟ ತಂಡದ ಗೆಲುವಿಗೆ ಕೊಡುಗೆ ನೀಡಿತು. ತಿಲಕ್‌ ವರ್ಮಾ ಔಟಾಗದೇ 69 ರನ್‌ ಸಿಡಿಸಿ ಆಪದ್ಬಾಂಧವನಂತೆ ಕಂಡರು. ಕೊನೆಗೆ ಭಾರತ ತಂಡ ಪಾಕ್‌ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿ ಏಷ್ಯಾ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಮೊದಲು ಬ್ಯಾಟಿಂಗ್‌ ಮಾಡಿದ್ದ ಪಾಕಿಸ್ತಾನ 146 ರನ್‌ ಗಳಿಸಿತ್ತು. ಆರಂಭಿಕರಾಗಿ ಕಣಕ್ಕಿಳಿದ ಸಾಹಿಬ್‌ಜಾದಾ ಫರ್ಹಾನ್, ಫಖರ್ ಜಮಾನ್ ಜೋಡಿ ಉತ್ತಮ ಆರಂಭ ನೀಡಿತು. ಮೊದಲ ವಿಕೆಟ್‌ಗೆ 84 ರನ್‌ಗಳ ಜೊತೆಯಾಟವಾಡಿ ಗಮನ ಸೆಳೆದರು. ಫರ್ಹಾನ್‌ 38 ಬಾಲ್‌ಗೆ ಅರ್ಧಶತಕ (57 ರನ್) ಗಳಿಸಿದರು. ವರುಣ್‌ ಚಕ್ರವರ್ತಿ 9ನೇ ಓವರ್‌ನಲ್ಲಿ ಮೊದಲ ವಿಕೆಟ್‌ ಪಡೆಯುವ ಮೂಲಕ ಜೊತೆಯಾಟಕ್ಕೆ ಬ್ರೇಕ್‌ ಹಾಕಿದರು.

ತಂಡದ ಮೊತ್ತ 113 ಇದ್ದಾಗ ಸೈಮ್ ಅಯೂಬ್ ಔಟಾದರು. ಈ ಮಧ್ಯೆ ಜಮಾನ್‌ಗೆ ಯಾವೊಬ್ಬ ಬ್ಯಾಟರ್‌ ಕೂಡ ಸಾಥ್‌ ನೀಡಲಿಲ್ಲ. ನಂತರ ಬಂದ ಮೊಹಮ್ಮದ್ ಹ್ಯಾರಿಸ್ ಶೂನ್ಯ ಸುತ್ತಿ ಪೆವಿಲಿಯನ್‌ ಸೇರಿದರು. 46 ರನ್‌ ಗಳಿಸಿದ್ದ ಜಮಾನ್‌ ಕ್ಯಾಚ್‌ ನೀಡಿ ಔಟಾದರು.

ಆರಂಭದಲ್ಲಿ ರನ್‌ ಬಿಟ್ಟುಕೊಟ್ಟಿದ್ದ ಟೀಂ ಇಂಡಿಯಾ ಬೌಲರ್‌ಗಳು ನಂತರ ಪಾಕ್‌ ವಿರುದ್ಧ ಆರ್ಭಟಿಸಿದರು. ಬ್ಯಾಟರ್‌ಗಳ ಬೆವರಿಳಿಸಿದರು. ವಿಕೆಟ್‌ಗಳು ತರಗೆಲೆಯಂತೆ ಉರುಳಿದವು. ಯಾರೊಬ್ಬರು ಕೂಡ ಒಂದಂಕಿ ರನ್‌ ದಾಟಲು ಅವಕಾಶ ನೀಡಲಿಲ್ಲ. ಅಂತಿಮವಾಗಿ ಪಾಕಿಸ್ತಾನ 19.1 ಓವರ್‌ಗೆ ಆಲೌಟ್‌ ಆಗಿ 146 ರನ್‌ ಗಳಿಸಿತು.

ಟೀಂ ಇಂಡಿಯಾ ಪರ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಜಾದು ಮಾಡಿದರು. ಪಂದ್ಯದಲ್ಲಿ ನಾಲ್ಕು ವಿಕೆಟ್‌ ಕಿತ್ತು ಮಿಂಚಿದರು. ಜಸ್ಪ್ರಿತ್‌ ಬುಮ್ರಾ, ವರುಣ್‌ ಚಕ್ರವರ್ತಿ, ಅಕ್ಷರ್‌ ಪಟೇಲ್‌ ತಲಾ 2 ವಿಕೆಟ್‌ ಕಿತ್ತರು.

Share This Article