ದಾಳಿ ಎಸಗಿದ ಉಗ್ರರಿಗೆ, ಸಂಚು ರೂಪಿಸಿದವರಿಗೆ ಕಲ್ಪನೆಗೂ ಮೀರಿದ ರೀತಿ ಶಿಕ್ಷೆ ಕೊಡುತ್ತೇವೆ: ಘರ್ಜಿಸಿದ ಮೋದಿ

Public TV
1 Min Read

ಪಾಟ್ನಾ: ಪಹಲ್ಗಾಮ್‌ನಲ್ಲಿ ದಾಳಿ ಮಾಡಿದವರು ಮತ್ತು ಸಂಚು ರೂಪಿಸಿದವರ ಕಲ್ಪನೆಗೂ ಮೀರಿದ ರೀತಿಯಲ್ಲಿ ಶಿಕ್ಷೆ ಸಿಗಲಿದೆ ಎಂದು ಮೋದಿ ಗುಡುಗಿದ್ದಾರೆ.

ಬಿಹಾರದ ಮಧುಬನಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ದೀನ್ ದಯಾಳ್ ಉಪಾಧ್ಯಾಯ ಅಂತ್ಯೋದಯ ಯೋಜನೆ–ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (DAY–NRLM) ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಉಗ್ರರಿಗೆ ಎಚ್ಚರಿಕೆ ನೀಡಿದರು.

ಪಹಲ್ಗಾಮ್ ದಾಳಿಯಲ್ಲಿ ಮೃತರಿಗೆ ಗೌರವ ಸಲ್ಲಿಸಲು 1 ನಿಮಿಷ ಮೌನ ಪ್ರಾರ್ಥನೆ ಮಾಡಿ ಮೋದಿ ಭಾಷಣ ಆರಂಭಿಸಿದರು.

 

ಇಂದು ಬಿಹಾರದ ನೆಲದಲ್ಲಿ ನಿಂತು ನಾನು ಇಡೀ ಜಗತ್ತಿಗೆ ಹೇಳುತ್ತೇನೆ. ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು ಗುರುತಿಸುತ್ತದೆ ಪತ್ತೆಹಚ್ಚುತ್ತದೆ ಮತ್ತು ಶಿಕ್ಷಿಸುತ್ತದೆ ಎಂದು ಹೇಳಿದರು.

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಅಮಾಯಕ ನಾಗರಿಕರನ್ನು ಹತ್ಯೆ ಮಾಡಿದ್ದರಿಂದ ಇಡೀ ರಾಷ್ಟ್ರವು ದುಃಖಿತವಾಗಿದೆ. ಈ ಭಯೋತ್ಪಾದಕರು ಮತ್ತು ಈ ದಾಳಿಗೆ ಸಂಚು ರೂಪಿಸಿದವರಿಗೆ ಅವರು ಊಹಿಸಲು ಸಾಧ್ಯವಾಗದಷ್ಟು ದೊಡ್ಡ ಶಿಕ್ಷೆ ಸಿಗುತ್ತದೆ ಎಂದು ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. 140 ಕೋಟಿ ಭಾರತೀಯರ ಇಚ್ಛಾಶಕ್ತಿ ಈಗ ಭಯೋತ್ಪಾದನೆಯ ಮಾಸ್ಟರ್‌ಗಳ ಬೆನ್ನು ಮುರಿಯಲಿದೆ ಎಂದು ಗುಡುಗಿದರು.

ಈ ಸಂಕಲ್ಪದಲ್ಲಿ ಇಡೀ ರಾಷ್ಟ್ರವು ಒಂದಾಗಿದೆ. ಮಾನವೀಯತೆಯನ್ನು ನಂಬುವ ಪ್ರತಿಯೊಬ್ಬರೂ ನಮ್ಮೊಂದಿಗಿದ್ದಾರೆ. ವಿವಿಧ ದೇಶಗಳ ಜನರಿಗೆ ಮತ್ತು ಅವರ ನಾಯಕರು ನಮ್ಮೊಂದಿಗೆ ನಿಂತಿದ್ದಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ ಎಂದರು.

ಮೋದಿಯವರ ದೇಶದ ಒಳಗಡೆಯ ಭಾಷಣ ಹಿಂದಿಯಲ್ಲಿರುತ್ತದೆ. ಆದರೆ ಉಗ್ರರಿಗೆ ಎಚ್ಚರಿಕೆ ನೀಡುವಾಗ ಮೋದಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಕಟು ಸಂದೇಶ ರವಾನಿಸಿದ್ದು ವಿಶೇಷವಾಗಿತ್ತು.

Share This Article