ಹಿಂದೂ, ಸಿಖ್ ಅಲ್ಪಸಂಖ್ಯಾತರಿಗೆ ಖಾಸಗಿ ಭೂಮಿ ಹಕ್ಕು – ಅಫ್ಘಾನ್ ನಿರ್ಧಾರವನ್ನು ಸ್ವಾಗತಿಸಿದ ಭಾರತ

Public TV
1 Min Read

ನವದೆಹಲಿ: ಅಫ್ಘಾನಿಸ್ತಾನದ (Afghanistan) ಹಿಂದೂಗಳು ಮತ್ತು ಸಿಖ್ (Hindus and Sikhs) ಅಲ್ಪಸಂಖ್ಯಾತರಿಗೆ ಖಾಸಗಿ ಭೂಮಿ ಹಕ್ಕುಗಳನ್ನು ಮರುಸ್ಥಾಪಿಸುವ ತಾಲಿಬಾನ್ (Taliban) ಸರ್ಕಾರದ ಕ್ರಮವನ್ನು ಭಾರತ (India) ಸಕಾರಾತ್ಮಕ ನಡೆ ಎಂದು ಬಣ್ಣಿಸಿದೆ.

ತಾಲಿಬಾನ್ ಆಡಳಿತವು ಹಿಂದೂ ಮತ್ತು ಸಿಖ್ ಸಮುದಾಯಗಳ ಆಸ್ತಿ ಹಕ್ಕುಗಳನ್ನು ಮರುಸ್ಥಾಪಿಸಲು ಕ್ರಮಗಳನ್ನು ಕೈಗೊಂಡಿದೆ. ನಾವು ಈ ಬಗ್ಗೆ ವರದಿಗಳನ್ನು ನೋಡಿದ್ದೇವೆ. ತಾಲಿಬಾನ್ ಸರ್ಕಾರ ಅಫ್ಘಾನ್ ಹಿಂದೂ ಮತ್ತು ಸಿಖ್ ಸಮುದಾಯಕ್ಕೆ ಸೇರಿದ ತಮ್ಮ ನಾಗರಿಕರಿಗೆ ಆಸ್ತಿ ಹಕ್ಕುಗಳನ್ನು ಮರುಸ್ಥಾಪಿಸಲು ನಿರ್ಧರಿಸಿದ್ದರೆ ಇದನ್ನು ಸಕಾರಾತ್ಮಕ ಬೆಳವಣಿಗೆ ಎಂದು ನಾವು ಪರಿಗಣಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಹಿಂದಿನ ಅವಧಿಯಲ್ಲಿ ಸೇನಾಧಿಕಾರಿಗಳು ವಶಪಡಿಸಿಕೊಂಡ ಖಾಸಗಿ ಭೂಮಿಯನ್ನು ಮಾಲೀಕರಿಗೆ ಹಿಂದಿರುಗಿಸುವುದನ್ನು ಖಚಿತಪಡಿಸಿಕೊಳ್ಳಲು ಆಯೋಗವನ್ನು ಸ್ಥಾಪಿಸಿದೆ ಎಂದು ವರದಿಯಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇರಾನ್‍ನ ವಿಭಾಗದ ಮುಖ್ಯಸ್ಥರಾಗಿರುವ ಜೆ.ಪಿ ಸಿಂಗ್, ಕಳೆದ ತಿಂಗಳು ತಾಲಿಬಾನ್‍ನ ವಿದೇಶಾಂಗ ಸಚಿವ ಅಮೀರ್ ಖಾನ್ ಮುಟ್ಟಾಕಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಅವರ ಭೇಟಿಯ ಬಳಿಕ ಈ ಬೆಳವಣಿಗೆ ನಡೆದಿದೆ.

ಭಾರತವು ಅಫ್ಘಾನ್ ಮಣ್ಣನ್ನು ಯಾವುದೇ ದೇಶದ ವಿರುದ್ಧ, ಯಾವುದೇ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಬಾರದು ಎಂದು ಒತ್ತಾಯಿಸುತ್ತಿದೆ. ದೇಶದಲ್ಲಿ ತೆರೆದುಕೊಳ್ಳುತ್ತಿರುವ ಮಾನವೀಯ ಬಿಕ್ಕಟ್ಟನ್ನು ಪರಿಹರಿಸಲು ಅಫ್ಘಾನಿಸ್ತಾನಕ್ಕೆ ಅಡೆತಡೆಯಿಲ್ಲದ ಮಾನವೀಯ ನೆರವು ನೀಡಲು ಭಾರತವು ಸಹಾಯ ಮಾಡುತ್ತಿದೆ.

ಜೂನ್ 2022 ರಲ್ಲಿ ಅಫ್ಘಾನ್ ರಾಜಧಾನಿಯಲ್ಲಿರುವ ತನ್ನ ರಾಯಭಾರ ಕಚೇರಿಯಲ್ಲಿ ಅಧಿಕಾರಿಗಳ ತಂಡವನ್ನು ನಿಯೋಜಿಸುವ ಮೂಲಕ ಭಾರತವು ಕಾಬೂಲ್‍ನಲ್ಲಿ (Kabul) ತನ್ನ ರಾಜತಾಂತ್ರಿಕ ಉಪಸ್ಥಿತಿಯನ್ನು ಮರುಸ್ಥಾಪಿಸಿತು. ಇದಕ್ಕೂ ಮೊದಲು 2021ರ ಆಗಸ್ಟ್‌ನಲ್ಲಿ ತಾಲಿಬಾನ್ ಅಧಿಕಾರವನ್ನು ವಹಿಸಿಕೊಂಡ ನಂತರ ಅವರ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಭಾರತ, ತನ್ನ ಅಧಿಕಾರಿಗಳನ್ನು ರಾಯಭಾರ ಕಚೇರಿಯಿಂದ ಹಿಂಪಡೆದಿತ್ತು.

Share This Article