ನೀವು ರಷ್ಯಾದಿಂದ ಆಮದು ಮಾಡಬಹುದು, ನಾವು ಮಾಡಿದ್ರೆ ಯುದ್ಧಕ್ಕೆ ಫಂಡಿಂಗ್‌ ಹೇಗೆ: ಟ್ರಂಪ್‌ಗೆ ಭಾರತದ ಗುದ್ದು

Public TV
3 Min Read

– ಟ್ರಂಪ್ ದ್ವಿಮುಖ ನೀತಿಯ ಬುಟಾಟಿಕೆ ಅನಾವರಣ
– ಅಂಕಿ ಸಂಖ್ಯೆಯನ್ನು ಮುಂದಿಟ್ಟು ಖಡಕ್‌ ತಿರುಗೇಟು

ನವದೆಹಲಿ: ರಷ್ಯಾದಿಂದ (Russia) ಕಚ್ಚಾ ತೈಲ ಆಮದು ಮಾಡಿ ಉಕ್ರೇನ್‌ (Ukraine) ಯುದ್ಧಕ್ಕೆ ಸಹಕಾರ ನೀಡುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ದೂರಿದ್ದಕ್ಕೆ ಭಾರತ (India) ಮೊದಲ ಬಾರಿಗೆ ಅಂಕಿಸಂಖ್ಯೆಯನ್ನು ನೀಡುವ ಮೂಲಕ ಖಡಕ್‌ ತಿರುಗೇಟು ನೀಡಿದೆ.

ವಿದೇಶಾಂಗ ಸಚಿವಾಲಯ ಯುರೋಪಿಯನ್‌ ಒಕ್ಕೂಟಗಳು (European Union) ಮತ್ತು ಅಮೆರಿಕ ಈಗಲೂ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ನೀವು ಆಮದು ಮಾಡಿಕೊಳ್ಳಬಹುದು. ಆದರೆ ನಾವು ರಷ್ಯಾದಿಂದ ಆಮದು ಮಾಡಿದರೆ ಉಕ್ರೇನ್‌ ಯುದ್ಧಕ್ಕೆ ಫಂಡಿಂಗ್‌ ಹೇಗಾಗುತ್ತದೆ? ಭಾರತವನ್ನು ಗುರಿಯಾಗಿಸಿ ತೆರಿಗೆ ಹಾಕುವುದು ನ್ಯಾಯಸಮ್ಮತವಲ್ಲ ಮತ್ತು ಅಸಮಂಜಸವಾಗಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ರಷ್ಯಾದ ತೈಲ ಖರೀದಿ ಮೂಲಕ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಭಾರತ ಫಂಡಿಂಗ್‌ – ಅಮೆರಿಕ

ಟ್ರಂಪ್‌ ಹೇಳಿದ್ದೇನು?
ಭಾರತವು ಬೃಹತ್ ಪ್ರಮಾಣದಲ್ಲಿ ರಷ್ಯಾದ ತೈಲವನ್ನು ಖರೀದಿಸುವುದಲ್ಲದೆ, ಖರೀದಿಸಿದ ಹೆಚ್ಚಿನ ತೈಲವನ್ನು ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ಲಾಭಕ್ಕಾಗಿ ಮಾರಾಟ ಮಾಡುತ್ತಿದೆ. ರಷ್ಯಾದ ಯುದ್ದದಿಂದಾಗಿ ಉಕ್ರೇನ್‌ನಲ್ಲಿ ಎಷ್ಟು ಜನರು ಕೊಲ್ಲಲ್ಪಡುತ್ತಿದ್ದಾರೆ ಎಂಬುದು ಅವರಿಗೆ ಮುಖ್ಯವಲ್ಲ. ಈ ಕಾರಣಕ್ಕೆ ಭಾರತವು ಅಮೆರಿಕಕ್ಕೆ ಪಾವತಿಸುವ ಸುಂಕವನ್ನು ನಾನು ಗಣನೀಯವಾಗಿ ಹೆಚ್ಚಿಸುತ್ತೇನೆ.

ಭಾರತದ ಹೇಳಿಕೆಯಲ್ಲಿ ಏನಿದೆ?
ಉಕ್ರೇನ್ ಸಂಘರ್ಷ ಆರಂಭವಾದ ನಂತರ ರಷ್ಯಾದಿಂದ ತೈಲ ಆಮದು ಮಾಡಿಕೊಂಡಿದ್ದಕ್ಕಾಗಿ ಭಾರತವನ್ನು ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಗುರಿಯಾಗಿಸಿಕೊಂಡಿವೆ. ನಿಜವಾಗಿ ಸಂಘರ್ಷ ಪ್ರಾರಂಭವಾದ ನಂತರ ಸಾಂಪ್ರದಾಯಿಕವಾಗಿ ಬರುತ್ತಿದ್ದ ತೈಲಗಳು ಯುರೋಪ್‌ ಕಡೆ ತಿರುಗಿತ್ತು. ಈ ಕಾರಣಕ್ಕೆ ಭಾರತ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳಲು ಪ್ರಾರಂಭಿಸಿತ್ತು. ಜಾಗತಿಕ ತೈಲ ಮಾರುಕಟ್ಟೆಗಳ ಬೆಲೆ ಸ್ಥಿರವಾಗಿರಲು ಆ ಸಮಯದಲ್ಲಿ ಅಮೆರಿಕ ಭಾರತದ ಆಮದುಗಳಿಗೆ ಪ್ರೋತ್ಸಾಹ ನೀಡಿತ್ತು.

ಭಾರತೀಯ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ತೈಲ ನೀಡಲು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ಭಾರತವನ್ನು ಟೀಕಿಸುವ ರಾಷ್ಟ್ರಗಳೇ ರಷ್ಯಾದೊಂದಿಗೆ ವ್ಯಾಪಾರದಲ್ಲಿ ತೊಡಗಿಕೊಂಡಿವೆ.

2024 ರಲ್ಲಿ ಯುರೋಪಿಯನ್ ಒಕ್ಕೂಟವು ರಷ್ಯಾದೊಂದಿಗೆ 67.5 ಬಿಲಿಯನ್ ಯುರೋಗಳಷ್ಟು ದ್ವಿಪಕ್ಷೀಯ ಸರಕು ವ್ಯಾಪಾರವನ್ನು ಹೊಂದಿತ್ತು. ಇದಲ್ಲದೆ 2023 ರಲ್ಲಿ 17.2 ಬಿಲಿಯನ್ ಯುರೋಗಳಷ್ಟು ಸೇವೆಗಳ ವ್ಯಾಪಾರವನ್ನು ಅದು ಹೊಂದಿತ್ತು. ಇದು ಆ ವರ್ಷ ಅಥವಾ ನಂತರ ರಷ್ಯಾದೊಂದಿಗೆ ಭಾರತ ನಡೆಸಿದ ಒಟ್ಟು ವ್ಯಾಪಾರಕ್ಕಿಂತ ಗಮನಾರ್ಹವಾಗಿ ಹೆಚ್ಚಿದೆ. 2024 ರಲ್ಲಿ ಯುರೋಪಿಯನ್ ದೇಶಗಳು ದಾಖಲೆಯ 16.5 ಮಿಲಿಯನ್ ಟನ್‌ ಎಲ್‌ಎನ್‌ಜಿಯನ್ನು ಆಮದು ಮಾಡಿಕೊಂಡಿದೆ. 2022 ರಲ್ಲಿ15.21 ಮಿಲಿಯನ್ ಟನ್‌ ಎಲ್‌ಎನ್‌ಜಿಯನ್ನು ಆಮದು ಮಾಡಿಕೊಂಡಿದ್ದು ಇದುವರೆಗಿನ ದಾಖಲೆಯಾಗಿತ್ತು.

ಯುರೋಪ್-ರಷ್ಯಾ ವ್ಯಾಪಾರವು ಕೇವಲ ಇಂಧನವನ್ನು ಮಾತ್ರವಲ್ಲ ರಸಗೊಬ್ಬರ, ಗಣಿಗಾರಿಕೆ ಉತ್ಪನ್ನಗಳು, ರಾಸಾಯನಿಕಗಳು, ಕಬ್ಬಿಣ ಮತ್ತು ಉಕ್ಕು ಮತ್ತು ಯಂತ್ರೋಪಕರಣಗಳು ಮತ್ತು ಸಾರಿಗೆ ಉಪಕರಣಗಳನ್ನು ಒಳಗೊಂಡಿದೆ.

ಅಮೆರಿಕ ತನ್ನ ಪರಮಾಣು ಉದ್ಯಮಕ್ಕೆ ರಷ್ಯಾದಿಂದ ಯುರೇನಿಯಂ ಹೆಕ್ಸಾಫ್ಲೋರೈಡ್, ತನ್ನ ಇವಿ ಉದ್ಯಮಕ್ಕೆ ಪಲ್ಲಾಡಿಯಮ್, ರಸಗೊಬ್ಬರಗಳು ಮತ್ತು ರಾಸಾಯನಿಕಗಳನ್ನು ಈಗಲೂ ಆಮದು ಮಾಡಿಕೊಳ್ಳುತ್ತಿದೆ.

ಈ ಹಿನ್ನೆಲೆಯಲ್ಲಿ ಕೇವಲ ಭಾರತವನ್ನು ಗುರಿಯಾಗಿಸಿಕೊಂಡು ಮಾತನಾಡುವುದು ನ್ಯಾಯಸಮ್ಮತವಲ್ಲ ಮತ್ತು ಅಸಮಂಜಸವಾಗಿದೆ. ಯಾವುದೇ ಪ್ರಮುಖ ಆರ್ಥಿಕತೆಯಂತೆ ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಆರ್ಥಿಕ ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.

Share This Article