ಜಡೇಜಾ ಆಲ್‍ರೌಂಡರ್ ಆಟಕ್ಕೆ ಮಂಕಾದ ಲಂಕಾ – ಭಾರತಕ್ಕೆ ಭರ್ಜರಿ ಇನ್ನಿಂಗ್ಸ್ ಜಯ

Public TV
2 Min Read

ಮೊಹಾಲಿ: ರವೀಂದ್ರ ಜಡೇಜಾ ಮತ್ತು ಆರ್.ಅಶ್ವಿನ್ ಸ್ಪಿನ್ ಜೋಡಿಯ ಮೋಡಿಗೆ ಮಂಕಾದ ಶ್ರೀಲಂಕಾ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲೊಪ್ಪಿಕೊಂಡಿದೆ. ಭಾರತ ಇನ್ನಿಂಗ್ಸ್ ಹಾಗೂ 222 ರನ್‍ಗಳ ಭರ್ಜರಿ ಜಯ ಸಾಧಿಸಿದೆ.

ಭಾರತದ ಪರ ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಆಲ್‍ರೌಂಡರ್ ಆಟ ಪ್ರದರ್ಶಿಸಿದ ರವೀಂದ್ರ ಜಡೇಜಾ ಬ್ಯಾಟಿಂಗ್‍ನಲ್ಲಿ ಅಜೇಯ 175 ರನ್ ಮತ್ತು ಬೌಲಿಂಗ್‍ನಲ್ಲಿ 9 ವಿಕೆಟ್ ಕಿತ್ತು ಶ್ರೀಲಂಕಾಗೆ ಕಾಡಿದರು. ಈ ಜಯದೊಂದಿಗೆ ಭಾರತ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಇದನ್ನೂ ಓದಿ: ರವೀಂದ್ರ ಜಡೇಜಾ ಅದ್ವಿತೀಯ ಸಾಧನೆ

ಈ ಮೊದಲು 2ನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 43 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 108 ರನ್‍ಗಳಿಸಿದ್ದ ಲಂಕಾ 3ನೇ ದಿನದಾಟ ಮುಂದುವರಿಸಿತು. ದಿನದಾಟದ ಆರಂಭದಿಂದಲೂ ವಿಕೆಟ್ ಕಳೆದುಕೊಂಡು ಸಾಗಿದ ಲಂಕಾ ಅಂತಿಮವಾಗಿ 65 ಓವರ್‌ಗಳಲ್ಲಿ 174 ರನ್‍ಗಳಿಗೆ ಸರ್ವಪತನ ಕಂಡಿತು. ಭಾರತದ ಪರ ರವೀಂದ್ರ ಜಡೇಜಾ ಲಂಕಾ ಬ್ಯಾಟ್ಸ್‌ಮ್ಯಾನ್‌ಗಳಿಗೆ ಕಂಟಕವಾದರು. ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‍ಗಳ ಗೊಂಚಲು ಪಡೆದು ಮಿಂಚಿದರು. ಇದನ್ನೂ ಓದಿ: ಮಹಿಳಾ ವಿಶ್ವಕಪ್ 2022- ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ನಂತರ 400 ರನ್‍ಗಳ ಹಿನ್ನಡೆಯೊಂದಿಗೆ ಫಾಲೋ ಆನ್ ಏರಿದ ಲಂಕಾ ಎರಡನೇ ಇನ್ನಿಂಗ್ಸ್‌ನಲ್ಲೂ ತನ್ನ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿತು. ಆರಂಭಿಕ ಆಟಗಾರ ಲಹಿರು ತಿರಿಮನ್ನೆ ಶೂನ್ಯ ಸುತ್ತಿದರೆ, ನಾಯಕ ದಿಮುತ್ ಕರುಣಾರತ್ನೆ 27 ರನ್ (46 ಎಸೆತ, 6 ಬೌಂಡರಿ)ಗೆ ಸುಸ್ತಾದರು. ಬಳಿಕ ಬಂದ ಪಾತುಂ ನಿಸ್ಸಾಂಕ 6 ರನ್ (19 ಎಸೆತ, 1 ಬೌಂಡರಿ) ಸಿಡಿಸಿ ಔಟ್ ಆದರು. 94 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಶ್ರೀಲಂಕಾಗೆ ಏಂಜೆಲೊ ಮ್ಯಾಥ್ಯೂಸ್ 28 ರನ್ (75 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ಧನಂಜಯ ಡಿಸಿಲ್ವ 30 ರನ್ (58 ಎಸೆತ, 5 ಬೌಂಡರಿ) ಸಿಡಿಸಿ ಅಲ್ಪ ಚೇತರಿಕೆ ನೀಡದರು. ಈ ಜೋಡಿ 4ನೇ ವಿಕೆಟ್‍ಗೆ 49 ರನ್ (102 ಎಸೆತ) ಗಳ ಜೊತೆಯಾಟವಾಡಿತು. ಇವರಿಬ್ಬರ ವಿಕೆಟ್ ಕಳೆದುಕೊಂಡ ಬಳಿಕ ಶ್ರೀಲಂಕಾ ಮತ್ತೆ ಕುಸಿತಕಂಡಿತು. ಟೀಂ ಇಂಡಿಯಾದ ಸ್ಪಿನ್ ಜೋಡಿ ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜಾ ನಾ ಮುಂದು ತಾ ಮುಂದು ಎಂಬಂತೆ ವಿಕೆಟ್ ಬೇಟೆ ಆರಂಭಿಸಿದರು. ಇವರಿಬ್ಬರ ದಾಳಿಗೆ ನಲುಗಿದ ಲಂಕಾ ಬ್ಯಾಟ್ಸ್‌ಮ್ಯಾನ್‌ಗಳಾದ ಚರಿತ್ ಅಸಲಂಕಾ 20 ರನ್ (9 ಎಸೆತ, 2 ಬೌಂಡರಿ, 2 ಸಿಕ್ಸ್), ಸುರಂಗ ಲಕ್ಮಲ್ 0, ಲಸಿತ್ ಎಂಬುಲ್ದೇನಿಯ 2, ವಿಶ್ವ ಫೆರ್ನಾಂಡೋ 0, ಲಹಿರು ಕುಮಾರ್‌ 4 ರನ್‌ ವಿಕೆಟ್‌ ಒಪ್ಪಿಸಿದರು. ನಿರೋಶನ್ ಡಿಕ್ವೆಲ್ಲಾ ಅಜೇಯ 51  ರನ್‍  (81 ಎಸೆತ, 6 ಬೌಂಡರಿ) ಸಿಡಿಸಿ ಮಿಂಚಿದರು. ಅಂತಿಮವಾಗಿ 60 ಓವರ್‌ಗಳ ಅಂತ್ಯಕ್ಕೆ 178 ರನ್ ಗಳಿಗೆ ಆಲೌಟ್ ಆಗಿ ಸೋಲು ಕಂಡಿದೆ. ಇದನ್ನೂ ಓದಿ: ಅಂದು ಸಚಿನ್, ಇಂದು ಜಡೇಜಾ – ದ್ರಾವಿಡ್, ರೋಹಿತ್ ನಡೆಗೆ ನೆಟ್ಟಿಗರು ಕಿಡಿ


ಟೀಂ ಇಂಡಿಯಾ ಪರ ಭರ್ಜರಿ ದಾಳಿ ನಡೆಸಿದ ರವೀಂದ್ರ ಜಡೇಜಾ ಮತ್ತು ಆರ್.ಅಶ್ವಿನ್ ತಲಾ  4 ವಿಕೆಟ್‌ ಪಡೆದು ಸಂಭ್ರಮಿಸಿದರು., ಮೊಹಮ್ಮದ್ ಶಮಿ 2 ವಿಕೆಟ್ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *