ಕೊಹ್ಲಿ, ಪಾಂಡ್ಯ ಪಂಚ್‍ಗೆ ಪಾಕ್ ಪಂಚರ್ – ಶುಭಾರಂಭ ಕಂಡ ಭಾರತ

Public TV
3 Min Read

ಮೆಲ್ಬರ್ನ್: ಚೇಸಿಂಗ್ ಮಾಸ್ಟರ್‌ ವಿರಾಟ್‌ ಕೊಹ್ಲಿಯ (Virat Kohli) ದಿಟ್ಟೆದೆಯ ಹೋರಾಟಕ್ಕೆ ಪಾಕಿಸ್ತಾನ (Pakistan) ಮಂಡಿಯೂರಿದೆ. ಹೈವೋಲ್ಟೆಜ್ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತ (India) 4 ವಿಕೆಟ್‍ಗಳ ರೋಚಕ ಜಯದೊಂದಿಗೆ ಭಾರತೀಯರಿಗೆ ದೀಪಾವಳಿ (Deepavali) ಉಡುಗೊರೆ ನೀಡಿದೆ.

ಪಾಕಿಸ್ತಾನ ನೀಡಿದ 160 ರನ್‍ಗಳ ಉತ್ತಮ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ ಆರಂಭಿಕ ಆಘಾತದ ನಡುವೆಯೇ ಕೊಹ್ಲಿ, ಪಾಂಡ್ಯರ 113 ರನ್‌ (78 ಎಸೆತ) ಜೊತೆಯಾಟ ಮತ್ತು ಕೊನೆಯ ಎಸೆತದಲ್ಲಿ ಅಶ್ವಿನ್‌ ಸಿಡಿಸಿದ ಬೌಂಡರಿ ನೆರವಿನಿಂದ ಭಾರತ 4 ವಿಕೆಟ್‍ಗಳ ಅಂತರದಿಂದ ಗೆದ್ದು ಬೀಗಿತು. ಈ ಗೆಲುವಿನೊಂದಿಗೆ ಟಿ20 ವಿಶ್ವಕಪ್‍ನಲ್ಲಿ ಭಾರತ ಶುಭಾರಂಭ ಕಂಡಿದೆ.

ಕೊನೆಯ 12 ಎಸೆತಗಳಲ್ಲಿ ಭಾರತ ಗೆಲುವಿಗೆ 31 ರನ್ ಬೇಕಾಗಿತ್ತು. 19ನೇ ಓವರ್‌ನಲ್ಲಿ ಒಟ್ಟು 16 ರನ್ ಹರಿದು ಬಂತು. ಕೊನೆಯ 6 ಎಸೆತಗಳಲ್ಲಿ ಭಾರತ ಗೆಲುವಿಗೆ 16 ರನ್ ಬೇಕಾಗಿತ್ತು. ಈ ವೇಳೆ ಹಲವು ಹೈಡ್ರಾಮಾಗಳೊಂದಿಗೆ ಬೌಂಡರಿ, ಸಿಕ್ಸ್, ವಿಕೆಟ್‍ಗಳ ಪತನದ ನಡುವೆಯೇ ಕೊನೆಯ ಎಸೆತದಲ್ಲಿ ಅಶ್ವಿನ್‌ ಹೊಡೆದ ಬೌಂಡರಿಯೊಂದಿಗೆ ಭಾರತ 4 ವಿಕೆಟ್‍ಗಳ ಜಯ ಸಾಧಿಸಿ ಸಂಭ್ರಮಿಸಿತು.

ಭಾರತಕ್ಕೆ ಆರಂಭಿಕ ಅಘಾತ:
ಪಾಕಿಸ್ತಾನ ನೀಡಿದ 160 ರನ್‍ಗಳ ಪೈಪೋಟಿಯ ಮೊತ್ತವನ್ನು ಚೇಸಿಂಗ್ ಮಾಡಲು ಹೊರಟ ಭಾರತ ಆರಂಭಿಕ ಅಘಾತ ಎದುರಿಸಿತು. ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ತಲಾ 4 ರನ್‍ಗಳಿಗೆ ಸುಸ್ತಾದರು.

ಆ ಬಳಿಕ ಬಂದ ಸೂರ್ಯಕುಮಾರ್ ಯಾದವ್ ಅಬ್ಬರಿಸಲಿಲ್ಲ. ಕೇವಲ 15 ರನ್ (10 ಎಸೆತ, 2 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿ ಹೊರನಡೆದರು. ಅಕ್ಷರ್ ಪಟೇಲ್ ಕೂಡ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದೆ 2 ರನ್ ಸಿಡಿಸಿ ನಿರಾಸೆ ಮೂಡಿಸಿದರು. ಈ ವೇಳೆ ಕೇವಲ 31 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿತು.

ಪಾಂಡ್ಯ, ಕೊಹ್ಲಿ ಜುಗಲ್ ಬಂದಿ:
ಆ ಬಳಿಕ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಜವಾಬ್ಧಾರಿಯುತ ಆಟವಾಡಿದರು. ಈ ಜೋಡಿ ನಿಧಾನವಾಗಿ ಪಾಕ್ ಬೌಲರ್‌ಗಳಿಗೆ ಚಾರ್ಚ್ ಮಾಡಲಾರಂಭಿಸಿ ಬೆಂಡೆತ್ತಿದರು. ಪಾಂಡ್ಯ 40 ರನ್ (37 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿ ಕೊನೆಯ ಓವರ್‌ನಲ್ಲಿ ಔಟ್ ಆದರು. ಇತ್ತ ಕೊಹ್ಲಿ ಗೆಲುವಿಗಾಗಿ ಟೊಂಕ ಕಟ್ಟಿ ನಿಂತು ಅಜೇಯ 82 ರನ್ (53 ಎಸೆತ, 6 ಬೌಂಡರಿ, 4 ಸಿಕ್ಸ್) ಚಚ್ಚಿ ಗೆಲುವಿನ ರೂವಾರಿಯಾದರು.

ಈ ಮೊದಲು ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಪಾಕಿಸ್ತಾನಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಬಾಬರ್‌ ಆಜಂ (Babar Azam) ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ರಿಜ್ವಾನ್‌ ಅಲ್ಪ ಮೊತ್ತಕ್ಕೆ ನಿರ್ಗಮಿಸಿದರು. ಅರ್ಶ್‌ದೀಪ್‌ ಸಿಂಗ್‌ ಮೊದಲ ಎಸೆತದಲ್ಲಿ ಬಾಬರ್‌ ಆಜಂಗೆ ಪೆವಿಲಿಯನ್‌ ದಾರಿ ತೋರಿದರು. ಇನ್ನೂ ಭರವಸೆಯ ಅಟಗಾರ ಮೊಹಮ್ಮದ್‌ ರಿಜ್ವಾನ್‌ 12 ಎಸತೆಗಳಲ್ಲಿ ಕೇವಲ 4 ರನ್‌ಗಳಿಸಿ ಅರ್ಶ್‌ದೀಪ್‌ಗೆ ವಿಕೆಟ್‌ ಒಪ್ಪಿಸಿದರು.

ಶಾನ್‌ ಮಸೂದ್‌, ಇಫ್ತಿಖರ್‌ ಅರ್ಧಶತಕಗಳ ಆಟ:
ಮೂರು ಮತ್ತು 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಶಾನ್‌ ಮಸೂದ್‌ ಹಾಗೂ ಇಫ್ತಿಖರ್‌ ಫಿಕರ್‌ ಅಹ್ಮದ್‌ ಸಾಂಘಿಕ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಭರ್ಜರಿ ಬೌಂಡರಿ ಸಿಕ್ಸರ್‌ಗಳ ಆಟದಿಂದ ಇವರಿಬ್ಬರ ಜೊತೆಯಾಟದಲ್ಲಿ ತಂಡಕ್ಕೆ 50 ಎಸೆತಗಳಲ್ಲಿ 76 ರನ್‌ಗಳು ಸೇರ್ಪಡೆಯಾಯಿತು. ಭರ್ಜರಿ ಸಿಕ್ಸ್‌ ಬಾರಿಸಿದ ಇಫ್ತಿಖರ್‌ 34 ಎಸೆತಗಳಲ್ಲಿ ಆಕರ್ಷಕ 51 ರನ್‌ (4 ಸಿಕ್ಸರ್‌, 2 ಬೌಂಡರಿ) ಗಳಿಸಿ ಮಿಂಚಿದರು. ಈ ವೇಳೆ ಇಫ್ತಿಖರ್‌ ಆಟಕ್ಕೆ ಶಮಿ ಬ್ರೇಕ್‌ ಹಾಕಿದರು. ಆ ನಂತರವೂ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಮಸೂದ್‌ 42 ಎಸೆತಗಳಲ್ಲಿ 5 ಬೌಂಡರಿಯೊಂದಿಗೆ 52 ರನ್‌ ಸಿಡಿಸಿ ತಂಡಕ್ಕೆ ಆಸರೆಯಾದರು.

ನಂತರದಲ್ಲಿ ಕ್ರೀಸ್‌ಗಿಳಿಸಿದ ಶಹದಾಬ್‌ ಖಾನ್‌ 5 ರನ್‌, ಹೈದರ್‌ ಅಲಿ 2 ರನ್‌, ಮೊಹಮ್ಮದ್‌ ನವಾಜ್‌ 9 ರನ್‌, ಅಸಿಫ್‌ ಅಲಿ 2 ರನ್‌ ಹಾಗೂ ಶಾಹೀನ್ ಶಾ ಆಫ್ರಿದಿ 16 ರನ್‌ ಗಳಿಸಿದರೆ ಹ್ಯಾರಿಸ್‌ ರಫ್‌ 6 ರನ್‌ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ 20 ಓವರ್‌ಗಳಲ್ಲಿ ಪಾಕಿಸ್ತಾನ 8 ವಿಕೆಟ್‌ ನಷ್ಟಕ್ಕೆ 189 ರನ್‌ ಕಲೆ ಹಾಕಿತು.

ಪಾಂಡ್ಯ, ಅರ್ಶ್‌ದೀಪ್‌ ಬೌಲಿಂಗ್‌ ಮಿಂಚು: 
ಪಾಕ್‌ ತಂಡದ ಎದುರು ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ ಹಾರ್ದಿಕ್‌ ಪಾಂಡ್ಯ 4 ಓವರ್‌ಗಳಲ್ಲಿ 30 ರನ್‌ ನೀಡಿ 3 ವಿಕೆಟ್‌ ಕಬಳಿಸಿದರೇ 32 ರನ್‌ ನೀಡಿದ ಅರ್ಶ್‌ದೀಪ್‌ ಸಿಂಗ್‌ 3 ವಿಕೆಟ್‌ ಪಡೆದು ಮಿಂಚಿದರು.  ಮೊಹಮ್ಮದ್‌ ಶಮಿ ಮತ್ತು ಭುವನೇಶ್ವರ್‌ ಕುಮಾರ್‌ ತಲಾ ಒಂದೊಂದು ವಿಕೆಟ್‌ ಹಂಚಿಕೊಂಡರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *