ದುಬೈ: ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2025ರ ಟೂರ್ನಿಯ ಪಾಕ್ ವಿರುದ್ಧದ ಪಂದ್ಯದಲ್ಲಿ ಮೊದಲ ಎಸತೆದಲ್ಲೇ ವಿಕೆಟ್ ಪಡೆದು ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಇತಿಹಾಸ ಬರೆದಿದ್ದಾರೆ.
ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಹಾರ್ದಿಕ್ ಪಾಂಡ್ಯ ಮೊದಲ ಎಸೆತದಲ್ಲೇ ಸೈಮ್ ಅಯೂಬ್ ವಿಕೆಟ್ ಪಡೆದರು. ಆ ಮೂಲಕ ಪಾಕ್ ವಿರುದ್ಧದ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಬೀಳಿಸಿದ ಸ್ಟಾರ್ ಆಲ್‌ರೌಂಡರ್ ಎಂಬ ದಾಖಲೆ ಬರೆದಿದ್ದಾರೆ.
ಪಾಕಿಸ್ತಾನ ವಿರುದ್ಧದ ಅಂತರರಾಷ್ಟ್ರೀಯ ಟಿ20 ಪಂದ್ಯದ ಮೊದಲ ಎಸೆತದಲ್ಲಿ ಭಾರತೀಯ ಆಟಗಾರನೊಬ್ಬ ವಿಕೆಟ್ ಪಡೆದಿರುವುದು ಇದೇ ಮೊದಲು. 2024 ರ ಟಿ20 ವಿಶ್ವಕಪ್‌ನಲ್ಲಿ ಯುಎಸ್ಎ ವಿರುದ್ಧ ಅರ್ಶ್ದೀಪ್ ಸಿಂಗ್ ಈ ಸಾಧನೆ ಮಾಡಿದ್ದಾರೆ. ಪಂದ್ಯದ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾಂಡ್ಯ ಪಾತ್ರರಾಗಿದ್ದಾರೆ.
ಪಾಕಿಸ್ತಾನ ವಿರುದ್ಧದ ಟಿ20ಐ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಆಟಗಾರರಲ್ಲಿ ಹಾರ್ದಿಕ್ ಪಾಂಡ್ಯ ಮೂರನೇ ಬೌಲರ್ ಆಗಿದ್ದಾರೆ. ಶ್ರೀಲಂಕಾದ ನುವಾನ್ ಕುಲಶೇಖರ 2009 ರಲ್ಲಿ ನಡೆದ ಪಂದ್ಯದಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಜಾರ್ಜ್ ಲಿಂಡೆ 2021 ರಲ್ಲಿ ಮೊದಲ ಎಸೆತಕ್ಕೆ ಪಾಕ್ ಆಟಗಾರನ ವಿಕೆಟ್ ಕಿತ್ತು ಈ ಸಾಧನೆ ಮಾಡಿದ್ದಾರೆ.