ಇಂದು (ಸೆ.14) ದುಬೈನಲ್ಲಿ ನಡೆಯಲಿರುವ ಟೀಂ ಇಂಡಿಯಾ ಹಾಗೂ ಪಾಕ್ (India vs Pakistan) ತಂಡದ ನಡುವಿನ ಪಂದ್ಯಕ್ಕೆ (Asia Cup) ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಪ್ರವಾಸಿಗರ ಸ್ವರ್ಗದಲ್ಲಿ ಭಯಾನಕ ನರಮೇಧವನ್ನು (Pahalgam Attack) ನಡೆಸಿ 26 ಜನರ ನೆತ್ತರ ಹರಿಸಿದ ಪಹಲ್ಗಾಮ್ ದುರಂತವನ್ನು ಭಾರತೀಯರು ಎಂದು ಮರೆಯುವುದಿಲ್ಲ. ನಮ್ಮ ಹೆಣ್ಣುಮಕ್ಕಳ ಸಿಂದೂರವನ್ನು ಅಳಿಸಿ ಕಣ್ಣೀರ ಕೋಡಿ ಹರಿಸಿದ ನರರಾಕ್ಷಸರ ಅಟ್ಟಹಾಸ ಎಂದಿಗೂ ಮರೆಯಲು ಸಾಧ್ಯವಿಲ್ಲ. ರಕ್ತಹರಿಸಿದ ಪಾಪಿಗಳನ್ನು ಪೋಷಿಸಿದ ಈ ಪಾಪಿ ಪಾಕಿಸ್ತಾನ ಭಾರತ ಪಾಲಿಗೆ ಎಂದಿದ್ರೂ ಶತ್ರು ದೇಶವೆ. ಇಡೀ ದೇಶ ಪಾಕ್ ವಿರುದ್ಧ ಆಕ್ರೋಶಗೊಂಡಿರುವಾಗ ನಡೆಯುತ್ತಿರುವ ಭಾರತ – ಪಾಕ್ ಮಧ್ಯೆ ಕ್ರಿಕೆಟ್ ಪಂದ್ಯ ದೇಶದ ಜನರನ್ನು ರೊಚ್ಚಿಗೆಬ್ಬಿಸಿದೆ. ಇದನ್ನೂ ಓದಿ: ಭಾರತ ತಂಡವನ್ನೂ ಸೋಲಿಸುವಷ್ಟು ಸಮರ್ಥರಿದ್ದೇವೆ – ಪಂದ್ಯಕ್ಕೂ ಮುನ್ನ ಪಾಕ್ ಕ್ಯಾಪ್ಟನ್ ವಾರ್ನಿಂಗ್
ಧರ್ಮ ಕೇಳಿ ಕೊಂದವರು, ಪತ್ನಿಯ ಎದುರಿನಲ್ಲಿ ಪತಿಯ ಕತ್ತುಸೀಳಿದವರು, ನವದಂಪತಿಯ ಬದುಕಿನ ಕನಸಿಗೆ ಕೊಳ್ಳಿ ಇಟ್ಟವರು, ಪುಟ್ಟ ಮಕ್ಕಳ ಮುಂದೆಯೇ ಅಪ್ಪನ ನೆತ್ತರ ಹರಿಸಿ ಬದುಕು ಪೂರ್ತಿ ಕರಾಳ ನೆನಪನ್ನೇ ಕೊಟ್ಟವರು ಪಾಕ್ ಪೋಷಿತ ಉಗ್ರರು. ಏಷ್ಯಾಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದ್ದು ಇದಕ್ಕೆ ಇಡೀ ದೇಶದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.
ರಕ್ತ ನೀರು ಒಟ್ಟಿಗೆ ಹೋಗಲು ಸಾಧ್ಯವಿಲ್ಲ. ಪಾಕ್ ಜೊತೆಗೆ ಎಲ್ಲಾ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡು ಉಗ್ರರ ಪೋಷಣೆ ಮಾಡುವ ನಿಮ್ಮನ್ನು ಮಂಡಿಯೂರುವಂತೆ ಮಾಡುತ್ತೇವೆ ಎಂದು ಪಾಕಿಸ್ತಾನಕ್ಕೆ ಅಪರೇಷನ್ ಸಿಂದೂರದ ಮೂಲಕ ಭಾರತ ಉತ್ತರ ಕೊಟ್ಟಿತ್ತು. ಆದರೆ ಈಗ ಭಯೋತ್ಪಾದಕ ದೇಶದ ಜೊತೆಗೆ ಕ್ರೀಡಾಸ್ಫೂರ್ತಿಗಾಗಿ ಕ್ರಿಕೆಟ್ ಆಡಲು ಬಿಸಿಸಿಐ ನಿರ್ಣಯಕೈಗೊಂಡಿದೆ. ಈಗ ಜನ ಪಾಕ್ ಜೊತೆಗೆ ಕ್ರಿಕೆಟ್ ಬೇಡ, ದೇಶಕ್ಕಿಂತ ಕ್ರಿಕೆಟ್ ದೊಡ್ಡದಾ ಎನ್ನುವ ಪ್ರಶ್ನೆ ಎತ್ತಿದ್ದಾರೆ.
ರಕ್ತ ಹರಿಸಿದವರ ಜೊತೆಗೆ ಈಗ ಶಿಳ್ಳೆ ಚಪ್ಪಾಳೆ ಹೊಡೆದು ಕ್ರಿಕೆಟ್ ಆಟವನ್ನು ನೋಡೋದಾದ್ರೂ ಹೇಗೆ? ಅವರು ಗುಂಡು ಹೊಡೆದ್ರೂ ಅದನ್ನು ಮರೆತು ಈಗ ಕ್ರಿಕೆಟ್ ನೆಪದಲ್ಲಿ ಸ್ನೇಹದ ಕೈಚಾಚಬೇಕಾ? ಹಾಗಿದ್ರೇ ಈ ನರಮೇಧ, ಸೈನಿಕರ ಆಪರೇಷನ್ ಸಿಂಧೂರ, ಪಹಲ್ಗಾಮ್‍ನಲ್ಲಿ ಹರಿದ ಭಾರತೀಯರ ನೆತ್ತರ ಪ್ರತೀಕಾರ ಎಲ್ಲವೂ ಹುಸಿಯಾಗಿಯೇ ಬಿಡ್ತಾ ಅನ್ನುವ ಪ್ರಶ್ನೆ ಈಗ ಎಲ್ಲರಲ್ಲೂ ಕಾಡುತ್ತಿದೆ. ಇದರ ನಡುವೆ ಪಂದ್ಯದ ಟಿಕೆಟ್ ಬೇಡಿಕೆ ಸಹ ಕುಸಿದಿದೆ.
ಪಂದ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್, ಭಾರತ – ಪಾಕಿಸ್ತಾನದ ಜೊತೆ ಕ್ರಿಕೆಟ್ ಆಟವಾಡಬಾರದು, ಐಸಿಸಿ ಟೂರ್ನಿಮೆಂಟ್‍ಗಳಲ್ಲೂ ಆಡಬಾರದು. ಇದು ನನ್ನ ವೈಯಕ್ತಿಕ ಅಭಿಪ್ರಾಯ. ದೇಶಕ್ಕಿಂತ ಯಾವುದು ಮುಖ್ಯವಲ್ಲ. ನನ್ನ ವೈಯಕ್ತಿ ಅಭಿಪ್ರಾಯದಲ್ಲಿ ಭಾರತ, ಪಾಕ್‍ಜೊತೆ ಆಡಬಾರದು. ಇನ್ನುಳಿದಂತೆ ಅಂತಿಮ ನಿರ್ಧಾರ ಕೇಂದ್ರ ಸರ್ಕಾರದ್ದು ಎಂದಿದ್ದಾರೆ. ಇದನ್ನೂ ಓದಿ: ಇದು ಮ್ಯಾಚ್ ಅಷ್ಟೇ; ಭಾರತ – ಪಾಕ್ ಪಂದ್ಯ ಬೇಡ ಎಂದ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ನಕಾರ