10 ರನ್ ಅಂತರದಲ್ಲಿ 4 ವಿಕೆಟ್ ಪತನ- ಕಿವೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

Public TV
4 Min Read

– ಸರಣಿ ಕ್ಲೀನ್‍ಸ್ವಿಪ್, ರಾಹುಲ್ ನಾಯಕತ್ವದಲ್ಲಿ ಮೊದ್ಲ ಗೆಲುವು
– 4 ಓವರ್ ಎಸೆದು 12 ರನ್ ನೀಡಿ 3 ವಿಕೆಟ್ ಕಿತ್ತ ಬುಮ್ರಾ

ಮೌಂಟ್ ಮಾಂಗನುಯಿ: ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಭರ್ಜರಿ ಬ್ಯಾಟಿಂಗ್ ಹಾಗೂ ಜಸ್‍ಪ್ರೀತ್ ಬುಮ್ರಾ, ನವದೀಪ್ ಸೈನಿ ಅದ್ಭುತ ಬೌಲಿಂಗ್‍ನಿಂದ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 7 ರನ್‍ಗಳಿಂದ ಭರ್ಜರಿ ಗೆದ್ದು, ಕ್ಲೀನ್‍ಸ್ವಿಪ್ ಮಾಡುವ ಮೂಲಕ  ಸರಣಿಯನ್ನು ಮುಡಿಗೇರಿಸಿಕೊಂಡಿದೆ.

ಮೌಂಟ್ ಮಾಂಗನುಯಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಕೊನೆ ಹಾಗೂ 5ನೇ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿದ್ದು, ಸರಣಿಯನ್ನು 5-0 ಅಂತರದಿಂದ ಗೆದ್ದು ಬೀಗಿದೆ. ಭಾರತ ನೀಡಿದ್ದ 163 ರನ್‍ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್‍ಗೆ 156 ರನ್‍ಗಳಿಂದ ಗಳಿಸಿ ಸೋತಿದೆ. ಇದನ್ನೂ ಓದಿ: ಕೀಪಿಂಗ್ ಆಯ್ತು, ಈಗ ಟೀಂ ಇಂಡಿಯಾ ಕ್ಯಾಪ್ಟನ್ ಜವಾಬ್ದಾರಿ ಹೊತ್ತ ಕನ್ನಡಿಗ ರಾಹುಲ್

ಟೀಂ ಇಂಡಿಯಾ ನೀಡಿದ್ದ 164 ರನ್‍ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು ಆರಂಭದಲ್ಲೇ ಓಪನರ್ ಬ್ಯಾಟ್ಸ್‌ಮನ್‌ ಮಾರ್ಟಿನ್ ಗಪ್ಟಿಲ್ ವಿಕೆಟ್ ಕಳೆದುಕೊಂಡು ಆಘಾತಕ್ಕೆ ತುತ್ತಾಯಿತು. ಬಳಿಕ ಮೈದಾಕ್ಕಿಳಿದ ಟಿಮ್ ಸೀಫರ್ಟ್ ವಿಕೆಟ್ ಕಾಯ್ದುಕೊಂಡು ತಂಡದ ರನ್ ಮೊತ್ತವನ್ನು ಏರಿಸಲು ಯತ್ನಿಸಿದರು. ಆದರೆ 15 ರನ್ ಗಳಿದ್ದ ಕಾಲಿನ್ ಮನ್ರೊ ಕೂಡ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಬಳಿಕ ಮೈದಾಕ್ಕಿಳಿದ ಟಾಮ್ ಬೂಸ್ ಯಾವುದೇ ರನ್ ಗಳಿಸದೆ ವಿಕೆಟ್ ಒಪ್ಪಿಸಿದರು. ನ್ಯೂಜಿಲೆಂಡ್ 3 ವಿಕೆಟ್‍ಗೆ ಕೇವಲ 17 ರನ್ ಗಳಿಸಿತು.

ದುಬಾರಿಯಾದ ದುಬೈ:
ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಟಿಮ್ ಸೀಫರ್ಟ್ ಹಾಗೂ ರಾಸ್ ಟೇಲರ್ ಉತ್ತಮ ಜೊತೆಯಾಟ ನೀಡಿದರು. ನಾಲ್ಕನೇ ವಿಕೆಟ್‍ಗೆ ಈ ಜೋಡಿಯು 99 ರನ್‍ಗಳ ಜೊತೆಯಾಟದ ಕೊಡುಗೆ ನೀಡಿತು. ಈ ಜೋಡಿಯು ಶಿವಂ ದುಬೆ ಎಸೆದ ಇನ್ನಿಂಗ್ಸ್ ನ 10ನೇ ಓವರಿನಲ್ಲಿ ನಾಲ್ಕು ಸಿಕ್ಸರ್, ಎರಡು ಬೌಂಡರಿ ಸೇರಿ ಒಟ್ಟು 34 ರನ್ ಸಿಡಿಸಿತು.

ಸೈನಿ ಶೈನ್:
ಗೆಲುವಿನ ದಡ ಸಮೀಪಿಸಲು ಮುಂದಾಗಿದ್ದ ಸೀಫರ್ಟ್ ಹಾಗೂ ಟೇಲರ್ ಜೊತೆಯಾಟವನ್ನು ನವದೀಪ್ ಸೈನಿ ಮುರಿದರು. ಸೀಫರ್ಟ್ 50 ರನ್ (30 ಎಸೆತ, 5 ಬೌಂಡರಿ, 3 ಸಿಕ್ಸರ್) ಗಳಿಸಿ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಕಡೆಗೆ ಪರೇಡ್ ನಡೆಸಿದರು. ಇನ್ನಿಂಗ್ಸ್ ನ 17ನೇ ಓವರಿನ ಮೊದಲ ಎಸೆತದಲ್ಲೇ ಸೈನಿ 53 ರನ್ ಗಳಿಸಿದ್ದ ಟೇಲರ್ ವಿಕೆಟ್ ಕಿತ್ತರು. ಪಂದ್ಯಕ್ಕೆ ತಿರುವು ನೀಡಿದರು.

ಜಸ್‍ಪ್ರೀತ್ ಬುಮ್ರಾ 4 ಓವರ್ ಬೌಲಿಂಗ್ ಮಾಡಿ ಕೇವಲ 12 ರನ್ ನೀಡಿ, ಮೂರು ವಿಕೆಟ್ ಪಡೆದು ಮಿಂಚಿದರು. ಟೀಂ ಇಂಡಿಯಾ ಯುವ ವೇಗದ ಬೌಲರ್ ಗಳಾದ ನವದೀಪ್ ಸೈನಿ ಹಾಗೂ ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಕಿತ್ತರೆ, ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಪಡೆದರು. ಆದರೆ ಕೇವಲ ಒಂದು ಓವರ್ ಬೌಲಿಂಗ್ ಮಾಡಿದ ಶಿವಂ ದುಬೆ ಯಾವುದೇ ವಿಕೆಟ್ ಪಡೆಯದೆ 34 ರನ್ ನೀಡಿ ತಂಡಕ್ಕೆ ದುಬಾರಿಯಾದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ರೋಹಿತ್ ಶರ್ಮಾ ಔಟಾಗದೆ 60 ರನ್ (41 ಎಸೆತ, 3 ಬೌಂಡರಿ, 3 ಸಿಕ್ಸರ್), ಕೆ.ಎಲ್.ರಾಹುಲ್ (45 ರನ್, 33 ಎಸೆತ) ಸಹಾಯದಿಂದ 3 ವಿಕೆಟ್ ನಷ್ಟಕ್ಕೆ 163ರನ್ ಪೇರಿಸಿತ್ತು.

ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಕಣಕ್ಕಿಳಿದಿತ್ತು. ಆರಂಭಿಕರಾಗಿ ಕೆ.ಎಲ್.ರಾಹುಲ್ ಮತ್ತು ಸಂಜು ಸ್ಯಾಮ್ಸನ್ ಕಣಕ್ಕಿಳಿದಿದ್ದರು. ಐದು ಎಸೆತದಲ್ಲಿ ಎರಡು ರನ್ ಗಳಿಸಿದ್ದ ಸ್ಯಾಮ್ಸನ್ ಕುಗ್ಗಿಲಿಯನ್ ಗೆ ವಿಕೆಟ್ ಒಪ್ಪಿಸುವ ಮೂಲಕ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸುಕೊಳ್ಳುವಲ್ಲಿ ವಿಫರಾದರು. ಸ್ಯಾಮ್ಸನ್ (2 ರನ್, 5 ಎಸೆತ) ವಿಕೆಟ್ ಪಡೆಯುವ ಮೂಲಕ ಕುಗ್ಗಿಲಿಯನ್ ಟೀಂ ಇಂಡಿಯಾಗೆ ಆರಂಭಿಕ ಆಘಾತ ನೀಡಿದ್ದರು. ನಂತರ ಕೆ.ಎಲ್.ರಾಹುಲ್ ಗೆ ನಾಯಕ ರೋಹಿತ್ ಶರ್ಮಾ ಜೊತೆಯಾಗಿ ಕಿವಿಸ್ ಬೌಲರ್ ಗಳನ್ನು ತಮ್ಮ ಬಿರುಸಿನ ಹೊಡೆತದ ಮೂಲಕ ದಂಡಿಸಿದ್ದರು.

ಹ್ಯಾಮಿಶ್ ಬೆನ್ನೆಟ್ ಎಸೆದ 11.3ನೇ ಎಸೆತದಲ್ಲಿ ಕೆ.ಎಲ್.ರಾಹುಲ್ (45 ರನ್, 33 ಎಸೆತ) ಸ್ನಾಂಟ್ನರ್ ಗೆ ಕ್ಯಾಚ್ ನೀಡಿ ಔಟ್ ಆದ್ರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ರಾಹುಲ್ ಮತ್ತು ರೋಹಿತ್ ಜೋಡಿ 96 ರನ್ ಕಲೆ ಹಾಕಿತ್ತು. ಕೆ.ಎಲ್.ರಾಹುಲ್ ಬಳಿಕ ಕ್ರಿಸ್ ಗೆ ಬಂದ ಶ್ರೇಯಸ್ ಅಯ್ಯರ್ ಆರಂಭದಿಂದಲೇ ಬಿರುಸಿನ ಆಟಕ್ಕೆ ಮುಂದಾಗಿದ್ದರು.

ರೋಹಿತ್ ಹೊಸ ಮೈಲುಗಲ್ಲು:
35ನೇ ಎಸೆತದಲ್ಲಿ ಅರ್ಧ ಶತಕಗಳಿಸುವ ಮೂಲಕ ರೋಹಿತ್ ಶರ್ಮಾ ಟಿಟ್ವೆಂಟಿಯ ತಮ್ಮ ವೃತ್ತಿ ಜೀವನದ 25ನೇ ಅರ್ಧ ಶತಕವನ್ನು ದಾಖಲಿಸಿದರು. ಇದುವರೆಗೂ ವಿರಾಟ್ ಕೊಹ್ಲಿ ಟಿಟ್ವೆಂಟಿಯಲ್ಲಿ 24 ಅರ್ಧ ಶತಕ ಗಳಿಸಿದ್ದಾರೆ. ಇದರ ಜೊತೆಗೆ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 14 ಸಾವಿರ ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಎಂಟನೇ ಸ್ಥಾನ ಪಡೆದರು.

ಕಾಲಿನ ಹಿಂಭಾಗದಲ್ಲಿ ರೋಹಿತ್ ಶರ್ಮಾರಿಗೆ ಆಟ ಮುಂದುವರಿಸಲಾಗಲಿಲ್ಲ. ಹಾಗಾಗಿ ನಿವೃತ್ತಿ ಘೋಷಿಸಿ ಪೆವಿಲಿಯನ್ ಗೆ ಮರಳಿದರು. ಈ ವೇಳೆ ರೋಹಿತ್ ಶರ್ಮಾ 41 ಎಸೆತದಲ್ಲಿ 60 ರನ್ ಗಳಿಸಿದರು. ಇದಾದ ಬಳಿಕ ಶ್ರೇಯಸ್ ಅಯ್ಯರ್‍ಗೆ ಜೊತೆಯಾದ ಶಿವಂ ದುಬೆ 6 ಎಸೆತದಲ್ಲಿ 5 ರನ್ ಗಳಿಸಿ ಬೇಗನೇ ಪೆವಿಲಿಯನ್ ಗೆ ಮರಳಿದರು. ಮನೀಶ್ ಪಾಂಡೆ ಔಟಾಗದೇ 11 ರನ್ ಮತ್ತು ಶ್ರೇಯಸ್ ಅಯ್ಯರ್ 33 ರನ್ ಗಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *