ಶತಕ ಸಿಡಿಸಿ ಮೆರೆದ ಸೂರ್ಯ – ಕೀವಿಸ್ ಕಿವಿ ಹಿಂಡಿದ ಭಾರತ

By
3 Min Read

ಮೌಂಟ್ ಮೌಂಗನುಯಿ: ಬ್ಯಾಟಿಂಗ್‍ನಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ಸಿಡಿಸಿದ ಸಿಡಿಲಬ್ಬರದ ಶತಕಕ್ಕೆ ಕಂಗಾಲಾಗಿದ್ದ ನ್ಯೂಜಿಲೆಂಡ್‍ಗೆ (New Zealand) ಬೌಲಿಂಗ್‍ನಲ್ಲಿ ಹೂಡಾ ನೀಡಿದ ಆಘಾತದ ಪರಿಣಾಮ ತವರಿನಲ್ಲಿ ಸೋತಿದೆ.

ಭಾರತ (India) ನೀಡಿದ 192 ರನ್‍ಗಳ ಬೃಹತ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಪರ ನಾಯಕ ಕೇನ್ ವಿಲಿಯಮ್ಸನ್ ಹೋರಾಟದ ಹೊರತಾಗಿಯೂ 18.5 ಓವರ್‌ಗಳಲ್ಲಿ ಅಂತ್ಯಕ್ಕೆ 126 ರನ್‍ಗಳಿಗೆ ಸರ್ವಪತನ ಕಂಡಿತು. ಮೊದಲ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಇಂದು ನಡೆದ ಎರಡನೇ ಪಂದ್ಯದಲ್ಲಿ ಪಾಂಡ್ಯ ಪಡೆ 65 ರನ್‍ಗಳ ಭರ್ಜರಿ ಜಯ ದಾಖಲಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಇದನ್ನೂ ಓದಿ: ಅರ್ಜುನ ಪ್ರಶಸ್ತಿ ಸಿಕ್ಕಿದ್ದು 2017ರಲ್ಲಿ ಕೈ ಸೇರಿದ್ದು 2022ರಲ್ಲಿ – 5 ವರ್ಷಗಳ ಬಳಿಕ ಪೂಜಾರ ಪ್ರಶಸ್ತಿ ಸ್ವೀಕಾರ

ನ್ಯೂಜಿಲೆಂಡ್ ತಂಡ ಆರಂಭದಲ್ಲೇ ಫಿನ್ ಅಲೆನ್ ವಿಕೆಟ್‍ನ್ನು ಶೂನ್ಯಕ್ಕೆ ಕಳೆದುಕೊಂಡಿತು. ಬಳಿಕ ಡೆವೂನ್ ಕಾನ್ವೇ 25 ರನ್ (22 ಎಸೆತ, 3 ಬೌಂಡರಿ) ಸಿಡಿಸಿ ವಿಕೆಟ್ ಕೈಚೆಲ್ಲಿಕೊಂಡರು. ಆ ಬಳಿಕ ಕುಸಿತ ಕಂಡ ನ್ಯೂಜಿಲೆಂಡ್ ತಂಡಕ್ಕೆ ವಿಲಿಯಮ್ಸನ್ ಮಾತ್ರ ಆಸರೆಯಾದರು. ಕೊನೆಗೆ 18ನೇ ಓವರ್‌ನಲ್ಲಿ ವಿಲಿಯಮ್ಸನ್ 61 ರನ್ (52 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆಗುವುದರೊಂದಿಗೆ ನ್ಯೂಜಿಲೆಂಡ್ ಗೆಲುವಿನ ಕನಸು ಭಗ್ನಗೊಂಡಿತು. ಅಂತಿಮವಾಗಿ 18.5 ಓವರ್‌ಗಳ ಅಂತ್ಯಕ್ಕೆ 126 ರನ್‍ಗಳಿಗೆ ಆಲೌಟ್ ಆಯಿತು.

ಬೌಲಿಂಗ್‍ನಲ್ಲಿ ದೀಪಕ್ ಹೂಡಾ 4 ವಿಕೆಟ್ ಕಿತ್ತು ಮಿಂಚಿದರು. ಸಿರಾಜ್, ಚಾಹಲ್ ತಲಾ 2 ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್ ಮತ್ತು ಭುವನೇಶ್ವರ್‌ ಕುಮಾರ್‌ 1 ವಿಕೆಟ್ ಕಬಳಿಸಿದರು. ಇದನ್ನೂ ಓದಿ: 11 ಬೌಂಡರಿ, 7 ಸಿಕ್ಸ್ – ಶತಕ ಸಿಡಿಸಿದ ದಾಖಲೆ ವೀರ ಸೂರ್ಯ

ಈ ಮೊದಲು ಟಾಸ್ ಗೆದ್ದ ಅತಿಥೇಯ ತಂಡ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಇತ್ತ ಬ್ಯಾಟಿಂಗ್ ಆರಂಭಿಸಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಯುವ ತಂಡ ಆರಂಭದಲ್ಲಿ ಡಲ್ ಹೊಡೆಸಿತು. ಆರಂಭಿಕರಾಗಿ ಕಣಕ್ಕಿಳಿದ ರಿಷಭ್ ಪಂತ್ 6 ರನ್ (13 ಎಸೆತ, 1 ಬೌಂಡರಿ) ಸಿಡಿಸಿ ಪೆವಿಲಿಯನ್ ದಾರಿ ಹಿಡಿದರು.

ಇನ್ನೋರ್ವ ಆರಂಭಿಕ ಆಟಗಾರ ಇಶಾನ್ ಕಿಶನ್ ಒಂದು ಕಡೆ ಅಬ್ಬರಿಸುತ್ತ 36 ರನ್ (31 ಎಸೆತ, 4 ಬೌಂಡರಿ, 1 ಸಿಕ್ಸ್) ಚಚ್ಚಿ ಅಬ್ಬರ ನಿಲ್ಲಿಸಿದರು. ಬಳಿಕ ಬಂದ ಶ್ರೇಯಸ್ ಅಯ್ಯರ್ ಆಟ 13 ರನ್‍ಗೆ (9 ಎಸೆತ, 1 ಬೌಂಡರಿ, 1 ಸಿಕ್ಸ್) ಅಂತ್ಯಕಂಡಿತು.

ಸೂರ್ಯ ಶತಕ ವೀರ:
ಭಾರತದ ಮೊದಲ ಹತ್ತು ಓವರ್‌ಗಳಲ್ಲಿ ಕುಂಟುತ್ತ ಸಾಗುತ್ತಿದ್ದ ವೇಳೆ ವೇಗ ಹೆಚ್ಚಿಸಲು ಸೂರ್ಯಕುಮಾರ್ ಯಾದವ್ ಮುಂದಾದರು. ತಮ್ಮ ಎಂದಿನ ಹೊಡಿಬಡಿ ಅಟ ಆರಂಭಿಸಿದ ಸೂರ್ಯ 50 ರನ್ (32 ಎಸೆತ) ಸಿಡಿಸಿ ಅರ್ಧಶತಕ ಪೂರೈಸಿದರು. ಬಳಿಕ ಮತ್ತಷ್ಟೂ ಆಕ್ರಮಣ ಶೈಲಿಯಲ್ಲಿ ಬ್ಯಾಟ್‍ಬೀಸಿ ನ್ಯೂಜಿಲೆಂಡ್ ಬೌಲರ್‌ಗಳ ಬೆವರಿಳಿಸಿದ ಸೂರ್ಯ ಮುಂದಿನ 17 ಎಸೆತಗಳಲ್ಲಿ 50 ರನ್ ಚಚ್ಚಿ ಶತಕ ಪೂರೈಸಿದರು.

ಈ ಶತಕದೊಂದಿಗೆ 2022ರಲ್ಲಿ ಟಿ20 ಕ್ರಿಕೆಟ್‍ನಲ್ಲಿ 2 ಶತಕ ಸಿಡಿಸಿ ಮಿಂಚಿದರು. ಕೊನೆಯ ವರೆಗೆ ಆಡಿದ ಸೂರ್ಯ ಅಜೇಯ 111 ರನ್ (51 ಎಸೆತ, 11 ಬೌಂಡರಿ, 7 ಸಿಕ್ಸ್) ಚಚ್ಚಿ ಸಿಡಿಲಬ್ಬರದ ಬ್ಯಾಟಿಂಗ್‍ನಿಂದಾಗಿ ತಂಡದ ಮೊತ್ತವನ್ನು 190ರ ಗಡಿದಾಟಿಸಿದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 191 ರನ್ ಬಾರಿಸಿತು. ಟೀಂ ಇಂಡಿಯಾ ಬ್ಯಾಟಿಂಗ್ ಸರದಿಯಲ್ಲಿ ಸೂರ್ಯ 51 ಎಸೆತಗಳಲ್ಲಿ 111 ರನ್ ಬಾರಿಸಿದರೆ, ಉಳಿದ ಬ್ಯಾಟ್ಸ್‌ಮ್ಯಾನ್‌ಗಳು 69 ಎಸೆತಗಳಲ್ಲಿ ಕೇವಲ 67 ರನ್ ಕಲೆಹಾಕಲಷ್ಟೇ ಶಕ್ತರಾದರು.

ಇತ್ತ ಬೌಲಿಂಗ್‍ನಲ್ಲಿ ಮಿಂಚಿದ ಕೀವಿಸ್ ವೇಗಿ ಟಿಮ್ ಸೌಥಿ ಕೊನೆಯ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *