ಶ್ರೇಯಸ್ ಅಯ್ಯರ್ ಶತಕದಾಟ – ಕಿವೀಸ್ ಉತ್ತಮ ಆರಂಭ

Public TV
2 Min Read

ಲಕ್ನೋ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ದಿನ ಬ್ಯಾಟ್ಸ್‌ಮ್ಯಾನ್‌ಗಳ ಮೇಲಾಟ ನಡೆದಿದೆ. ಭಾರತದ ಪರ ಶ್ರೇಯಸ್ ಅಯ್ಯರ್ ಶತಕ ಸಿಡಿಸಿ ಭಾರತ ತಂಡ ಬೃಹತ್ ಮೊತ್ತ ಪೇರಿಸಲು ನೆರವಾದರು.

75 ರನ್ ಸಿಡಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಶ್ರೇಯಸ್ ಅಯ್ಯರ್ ಭರ್ಜರಿ ಶತಕ ಸಿಡಿಸಿ ಪಾದಾರ್ಪಣ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. ಅಯ್ಯರ್ 105 ರನ್ (171 ಎಸೆತ, 13 ಬೌಂಡರಿ, 1 ಸಿಕ್ಸ್) ಸಿಡಿಸಿ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದರು. ಈ ಮೊದಲು ದಿನದ ಆರಂಭದಲ್ಲೇ ರವೀಂದ್ರ ಜಡೇಜಾ ಮೊದಲ ದಿನ ಪೇರಿಸಿದ್ದ 50 ರನ್ (112 ಎಸೆತ, 6 ಬೌಂಡರಿ) ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ನಂತರ ಬಂದ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ವೃದ್ಧಿಮಾನ್ ಸಹಾ 1 ರನ್ ಬಾರಿಸಿ ಔಟ್ ಆಗಿ ನಿರಾಸೆ ಮೂಡಿಸಿದರೆ, ರವಿಚಂದ್ರನ್ ಅಶ್ವಿನ್ 38 ರನ್ (56 ಎಸೆತ, 5 ಬೌಂಡರಿ ಸಿಡಿಸಿ) ಭಾರತದ ಮೊತ್ತ 300ರ ಗಡಿ ದಾಟುವಂತೆ ನೋಡಿಕೊಂಡರು. ಇನ್ನುಳಿದಂತೆ ಅಕ್ಷರ್ ಪಟೇಲ್ 3 ರನ್, ಇಶಾಂತ್ ಶರ್ಮಾ ಶೂನ್ಯ ಸುತ್ತಿದರು. ನಂತರ ಉಮೇಶ್ ಯಾದವ್ ಅಜೇಯ 10 ರನ್ ನೆರವಿನಿಂದ 345 ರನ್‍ಗೆ ಭಾರತ ಸರ್ವಪತನ ಕಂಡಿತು. ಇದನ್ನೂ ಓದಿ: ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ದಾಖಲೆಯ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್

ನ್ಯೂಜಿಲೆಂಡ್ ಪರ ಟಿಮ್ ಸೌಥಿ 5 ವಿಕೆಟ್ ಪಡೆದು ಸಂಭ್ರಮಿಸಿದರೆ, ಕೈಲ್ ಜೇಮಿಸನ್ 3 ವಿಕೆಟ್ ಮತ್ತು ಏಜಾಜ್ ಪಟೇಲ್ 2 ವಿಕೆಟ್ ಕಿತ್ತು ಮಿಂಚಿದರು. ಇದನ್ನೂ ಓದಿ: 4 ವರ್ಷದಿಂದಲೂ ಒಂದೇ ವಾಟ್ಸಪ್ ಡಿಪಿ – ಶ್ರೇಯಸ್ ಅಯ್ಯರ್ ತಂದೆಯ ಕನಸು ಕೊನೆಗೂ ನನಸು

ನಂತರ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ತಂಡ ಭರ್ಜರಿ ಆರಂಭ ಪಡೆಯಿತು. ಟಾಮ್ ಲ್ಯಾಥಮ್ ಮತ್ತು ವಿಲ್ ಯಂಗ್ ಭಾರತದ ಬೌಲರ್‌ಗಳ ಬೆವರಿಳಿಸಿದರು. ಈ ಜೋಡಿ ಮೊದಲ ವಿಕೆಟ್‍ಗೆ ಅಜೇಯ 129 ರನ್ ಪೇರಿಸಿದೆ. ವಿಲ್ ಯಂಗ್ ಅಜೇಯ 75 ರನ್ (180 ಎಸೆತ, 12 ಬೌಂಡರಿ) ಮತ್ತು ಟಾಮ್ ಲ್ಯಾಥಮ್ 50 ರನ್ (165 ಎಸೆತ, 4 ಬೌಂಡರಿ) ಬಾರಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದನ್ನೂ ಓದಿ: ಐಪಿಎಲ್‍ನಲ್ಲಿ ಧೋನಿ CSK ಪರ ಆಡುವುದು ಕನ್ಫರ್ಮ್ – ರೈನಾ ಡೌಟ್?

Share This Article
Leave a Comment

Leave a Reply

Your email address will not be published. Required fields are marked *