ಸರಣಿ ಕ್ಲೀನ್ ಸ್ವೀಪ್ ಮೇಲೆ ಭಾರತದ ಕಣ್ಣು- ನ್ಯೂಜಿಲೆಂಡ್‍ಗೆ ಗೆಲುವು ಅನಿವಾರ್ಯ

Public TV
2 Min Read

ಮೌಂಟ್ ಮಾಂಗನುಯಿ: ಸತತ 4 ಪಂದ್ಯ ಗೆಲುವಿನೊಂದಿಗೆ ನ್ಯೂಜಿಲೆಂಡ್ ವಿರುದ್ಧ ಐತಿಹಾಸಿಕ ಟಿ20 ಸರಣಿ ಗೆದ್ದಿರೋ ಟೀಂ ಇಂಡಿಯಾ ಇಂದು ನ್ಯೂಜಿಲೆಂಡ್ ವಿರುದ್ಧ 5ನೇ ಟಿ20 ಪಂದ್ಯ ಆಡಲಿದೆ. ಈಗಾಗಲೇ 4-0 ಅಂತರದಲ್ಲಿ ಗೆದ್ದು ಟೀಂ ಇಂಡಿಯಾ ಸರಣಿ ಗೆದ್ದಿದೆ. ಇಂದಿನ ಪಂದ್ಯ ನೆಪ ಮಾತ್ರಕ್ಕೆ ನಡೆಯಲಿದ್ದು, ಈ ಪಂದ್ಯವನ್ನ ಗೆಲ್ಲೋ ಮೂಲಕ ಭಾರತ ತಂಡ ಸರಣಿ ಕ್ಲೀನ್ ಸ್ವೀಪ್ ಮಾಡೋ ತವಕದಲ್ಲಿದೆ.

ನ್ಯೂಜಿಲೆಂಡ್‍ನ ಬೇ ಓವಲ್ ಮೌಂಟ್ ಮೌಂಗನುಯಿ ಕ್ರೀಡಾಂಗಣದಲ್ಲಿ ಇಂದಿನ ಪಂದ್ಯ ನಡೆಯಲಿದೆ. ಬೆಟ್ಟದ ಮೇಲೆ ಪಿಚ್ ಇರೋದ್ರಿಂದ ಬೌಲಿಂಗ್ ಮೇಲೆ ಗಾಳಿ ಪ್ರಭಾವ ಬೀರಲಿದೆ. ಬೌಲರ್ ಗಳಿಗೆ ತುಸು ಕಷ್ಟವಾಗೋ ಪಿಚ್ ಇದು. ಮೊದಲು ಬ್ಯಾಟಿಂಗ್ ಮಾಡೋ ತಂಡಗಳು ಸರಾಸರಿ 199 ರನ್ ಗಳಿಸಿವೆ. ಈ ಪಿಚ್ ನಲ್ಲಿ ಆಡಿರೋ 5 ಪಂದ್ಯಗಳು ಮೊದಲು ಬ್ಯಾಟ್ ಮಾಡಿರೋ ತಂಡ ಗೆದ್ದ ಇತಿಹಾಸ ಇದೆ. ಹೀಗಾಗಿ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳೋ ಸಾಧ್ಯತೆ ಇದೆ.

ಈಗಾಗಲೇ ಸರಣಿ ಗೆದ್ದಿರೋ ಭಾರತ ತಂಡ ಈ ಪಂದ್ಯದಲ್ಲಿ ಕಳೆದ ಪಂದ್ಯದ ತಂಡವನ್ನೇ ಉಳಿಸಿಕೊಳ್ಳೋ ಸಾಧ್ಯತೆ ಇದೆ. ಕಳೆದ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್, ಜಡೇಜಾ, ಶಮಿ ಇವತ್ತಿನ ಪಂದ್ಯದಲ್ಲೂ ವಿಶ್ರಾಂತಿ ಪಡಿಯೋ ಸಾಧ್ಯತೆ ಇದೆ. ಸರಣಿಯಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ತೋರುತ್ತಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದು ಇಂದಿನ ಪಂದ್ಯದಲ್ಲೂ ಇದೇ ಪ್ರದರ್ಶನದ ನಿರೀಕ್ಷೆ ಇದೆ. ರಾಹುಲ್, ಕೊಹ್ಲಿ, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್‍ಸನ್ ಬ್ಯಾಟಿಂಗ್ ಅಸ್ತ್ರ. ಬೂಮ್ರಾ, ಸೈನಿ ಠಾಕೂರ್, ಚಹಲ್ ಬೌಲಿಂಗ್ ಪಡೆಯಲ್ಲಿದ್ದರೆ, ವಾಷಿಂಗ್ಟನ್ ಸುಂದರ, ಶಿವಂ ದುಬೆ ಆಲ್ ರೌಂಡರ್ ಸ್ಥಾನ ನಿರ್ವಹಣೆ ಮಾಡಲಿದ್ದಾರೆ.

ಸತತ 4 ಪಂದ್ಯಗಳಲ್ಲಿ ಸೋತು ಸುಣ್ಣವಾಗಿರೋ ನ್ಯೂಜಿಲೆಂಡ್ ತಂಡ ಇಂದು ಗೆಲ್ಲುವ ಒತ್ತಡದಲ್ಲಿದೆ. ಕೊನೆಯ ಪಂದ್ಯದಲ್ಲಾದರೂ ಗೆದ್ದು ಮಾನ ಉಳಿಸಿಕೊಳ್ಳೋ ತವಕದಲ್ಲಿದೆ. 4 ನೇ ಪಂದ್ಯದಿಂದ ದೂರ ಉಳಿದಿದ್ದ ನಾಯಕ ವಿಲಿಯಮ್ಸನ್ ಇಂದಿನ ಪಂದ್ಯದಲ್ಲಿ ಆಡೋ ಸಾಧ್ಯತೆ ಇದೆ. 4 ಪಂದ್ಯದಲ್ಲಿ ಕಳಪೆ ಬೌಲಿಂಗ್ ಮಾಡಿರೋ ನ್ಯೂಜಿಲೆಂಡ್ ತಂಡ ಇಂದು ಉತ್ತಮ ಬೌಲಿಂಗ್ ನಿರ್ವಹಣೆ ಮಾಡೋಕೆ ಸಿದ್ಧವಾಗಿದೆ. ಗಪ್ಟಿಲ್, ರಾಸ್ ಟೇಲರ್, ಮನ್ರೋ, ವಿಲಿಯಮ್ಸನ್ ನ್ಯೂಜಿಲೆಂಡ್ ಬ್ಯಾಟಿಂಗ್ ಬಲ. ಸ್ಯಾಂಟ್ನರ್, ಆಲ್ ರೌಂಡರ್ ಸ್ಥಾನ ತುಂಬಲಿದ್ದಾರೆ. ಸೋಧಿ, ಸೌಥಿ, ಹ್ಯಾಮಿಶ್ ಬೆನ್ನೆಟ್, ಕುಗ್ಗಿಲಿಯನ್ ಬೌಲಿಂಗ್ ಪಡೆಯಲಿದ್ದಾರೆ.

ಸಂಭವನೀಯ ಆಟಗಾರರ ತಂಡ:
ಭಾರತ: ವಿರಾಟ್ ಕೊಹ್ಲಿ(ನಾಯಕ) ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಶಿವಂ ದುಬೆ, ವಾಷಿಂಗ್ಟನ್ ಸುಂದರಂ, ಚಹಲ್ ಕುಲ್ದೀಪ್, ಠಾಕೂರ್ ಸೈನಿ, ಬೂಮ್ರಾ.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್(ನಾಯಕ) ಗಪ್ಟಿಲ್, ಟೇಲರ್, ಮನ್ರೋ, ಡರೆಲ್ ಮಿಚೆಲ್, ಟಿಮ್ ಸೀಫರ್ಟ್, ಸ್ಯಾಂಟ್ನರ್, ಕುಗ್ಗಿಲಿಯನ್, ಸೌಥಿ, ಸೋಧಿ, ಹ್ಯಾಮಿಶ್ ಬೆನ್ನೆಟ್.

Share This Article
Leave a Comment

Leave a Reply

Your email address will not be published. Required fields are marked *