ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ

Public TV
2 Min Read

ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧ ಶನಿವಾರ ನಡೆಯಲಿರುವ ಏಕದಿನ ಪಂದ್ಯವು ಟೀಂ ಇಂಡಿಯಾಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲೇ ಸೋಲುಂಡಿರುವ ಟೀಂ ಇಂಡಿಯಾ ಸರಣಿಯಲ್ಲಿ ಸಮಬಲ ಸಾಧಿಸಬೇಕಾದರೆ ಎರಡನೇ ಪಂದ್ಯದಲ್ಲಿ ಗೆಲ್ಲಲೇಬೇಕು.

ಆಕ್ಲೆಂಡ್‍ನ ಈಡನ್ ಪಾರ್ಕ್ ನಲ್ಲಿ ಶನಿವಾರ ಬೆಳಗ್ಗೆ 7.30ಕ್ಕೆ ಪಂದ್ಯ ಆರಂಭವಾಗಲಿದ್ದು, ಉಭಯ ತಂಡಗಳು ಗೆಲುವಿನ ಮಂತ್ರದೊಂದಿಗೆ ಕಣಕ್ಕಿಳಿಯಲಿವೆ. ಈಗಾಗಲೇ ಮೂರು ಪಂದ್ಯಗಳ ಸರಣಿಯಲ್ಲಿ ಒಂದು ಪಂದ್ಯ ಗೆದ್ದು ಬೀಗುತ್ತಿರುವ ಕಿವೀಸ್ ಪಡೆ, ನಾಳೆಯ ಪಂದ್ಯದಲ್ಲೂ ಗೆದ್ದು ಸರಣಿ ಕೈವಶ ಮಾಡಿಕೊಳ್ಳಲು ಭರ್ಜರಿ ತಯಾರಿ ನಡೆಸಿದೆ. ಇತ್ತ ಮೊದಲ ಪಂದ್ಯದಲ್ಲಿ ಸೋಲುಂಡಿರುವ ಕೊಹ್ಲಿ ಪಡೆ, ಸರಣಿ ಗೆಲ್ಲಲು ಉಳದಿರುವ ಎರಡು ಪಂದ್ಯಗಳಲ್ಲಿ ಜಯಸಾಧಿಸಲೇಬೇಕು.

ಮೊದಲ ಪಂದ್ಯದಲ್ಲಿ ಬೃಹತ್ ಮೊತ್ತ ನೀಡಿದ್ದರೂ ಭಾರತ ಸೋಲಬೇಕಾಯಿತು. ಆ ಸೋಲಿನಿಂದ ಎಚ್ಚೆತ್ತುಕೊಂಡಿರುವ ಟೀಂ ಇಂಡಿಯಾ ತಂಡದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಬೃಹತ್ ಮೊತ್ತವಿದ್ದರೂ ಬೌಲರ್‍ಗಳು ಕಿವೀಸ್ ರನ್ ಓಟಕ್ಕೆ ಕಡಿವಾಣ ಹಾಕುವಲ್ಲಿ ವಿಫಲರಾದರು. ಈ ಹಿನ್ನೆಲೆಯಲ್ಲಿ ಬೌಲಿಂಗ್‍ನತ್ತ ಹೆಚ್ಚು ಗಮನಹರಿಸಲಾಗಿದೆ. ಕುಲ್‍ದೀಪ್ ಯಾದವ್ ಬದಲಿಗೆ ಯಜುವೇಂದ್ರ ಚಹಲ್ ಹಾಗೂ ಶಾರ್ದೂಲ್ ಠಾಕೂರ್ ಸ್ಥಾನದಲ್ಲಿ ನವದೀಪ್ ಸೈನಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಮೊದಲ ಪಂದ್ಯದಲ್ಲಿ ಕುಲ್‍ದೀಪ್, ಠಾಕೂರ್ ಭಾರೀ ದುಬಾರಿಯಾಗಿದ್ದರು. ಇನ್ನುಳಿದಂತೆ ಬ್ಯಾಟಿಂಗ್ ಲೈನ್‍ಅಪ್‍ನಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಮಯಾಂಕ್ ಅಗರ್ವಾಲ್ ಹಾಗೂ ಪೃಥ್ವಿ ಶಾ ಓಪನಿಂಗ್ ಆಗಿ ಬ್ಯಾಟ್ ಬೀಸಲಿದ್ದಾರೆ.

ಟಿ20 ಪಂದ್ಯದ ಸೋಲುನಿಂದ ಫಿನಿಕ್ಸ್ ನಂತೆ ಎದ್ದು ನಿಂತಿರುವ ಕಿವೀಸ್ ಪಡೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ. ನಾಳೆಯ ಪಂದ್ಯದಲ್ಲಿ ಭಾರತವನ್ನು ಮಣಿಸಿ ಏಕದಿನ ಸರಣಿ ವಶಕ್ಕೆ ಪಡೆಯಲು ರಣತಂತ್ರದಲ್ಲಿದೆ. ಇನ್ನೂ ಚೇತರಿಸಿಕೊಳ್ಳದ ಕೀವಿಸ್ ತಂಡದ ನಾಯಕ ಕೇನ್ ವಿಲಿಯಮ್ಸನ್ ನಾಳೆಯ ಪಂದ್ಯದಲ್ಲೂ ಆಡುತ್ತಿಲ್ಲ. ವೇಗಿ ಕೈಲ್ ಜಾಮೀಸನ್ ಏಕದಿನ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. 6 ಅಡಿ ಎಚ್ಚರದ ದೈತ್ಯ ತವರು ನೆಲದಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ನಾಳೆಯ ಪಂದ್ಯ ಕೊಹ್ಲಿ ಪಡೆಗೆ ಅಗ್ನಿಪರೀಕ್ಷೆಯಾಗಿದೆ. ಪಂದ್ಯವನ್ನ ಗೆದ್ದು ಸರಣಿ ಜೀವಂವಾಗಿರಿಸಿಕೊಳ್ಳಲು ಟೀಂ ಇಂಡಿಯಾ ತಂತ್ರ ರೂಪಿಸಿದ್ದಾರೆ. ಕಿವೀಸ್ ಸಹ ಗೆಲುವಿನ ವಿಶ್ವಾಸದಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *