IND vs NZ | ಕಿವೀಸ್‌ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ – ಪಾಂಡ್ಯ, ಶಮಿಗೆ ಕೂಡಿಬಾರದ ಮುಹೂರ್ತ!

2 Min Read

ಮುಂಬೈ: ಜನವರಿ 11 ರಿಂದ ನಡೆಯಲಿರುವ ಭಾರತ v/s ನ್ಯೂಜಿಲೆಂಡ್‌ (Ind vs NZ) ನಡುವಿನ 3 ಪಂದ್ಯಗಳ ಏಕದಿನ ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿಯು 15 ಸದಸ್ಯರ ಭಾರತ ತಂಡವನ್ನ ಪ್ರಕಟಿಸಿದೆ. ನಿರೀಕ್ಷೆಯಂತೆ ಶುಭಮನ್ ಗಿಲ್ (Shubman Gill) ನಾಯಕನಾಗಿ, ಶ್ರೇಯಸ್‌ ಅಯ್ಯರ್‌ (Shreyas Iyer) ಉಪನಾಯಕನಾಗಿ ತಂಡವನ್ನ ಸೇರಿಕೊಂಡಿದ್ದಾರೆ.

2027ರ ಐಸಿಸಿ ಏಕದಿನ ವಿಶ್ವಕಪ್‌ ಗಮನದಲ್ಲಿರಿಸಿಕೊಂಡು ಬಿಸಿಸಿಐ (BCCI) ಆಯ್ಕೆ ಸಮಿತಿ ತಂಡವನ್ನ ಪ್ರಕಟಿಸಿದೆ. ಹೀಗಾಗಿ ರೋಹಿತ್‌ ಶರ್ಮಾ (Rohit Sharma), ವಿರಾಟ್‌ ಕೊಹ್ಲಿ, ಕೆ.ಎಲ್‌ ರಾಹುಲ್‌, ರಿಷಭ್‌ ಪಂತ್‌, ಮೊಹಮ್ಮದ್‌ ಸಿರಾಜ್‌, ರವೀಂದ್ರ ಜಡೇಜಾ, ಅವರಂತಹ ಹಿರಿಯ ಆಟಗಾರರಿಗೆ ಮಣೆ ಹಾಕಲಾಗಿದೆ. ಆಸ್ಟ್ರೇಲಿಯಾ ಏಕದಿನ ಸರಣಿ ವೇಳೆ ಗಾಯದ ಸಮಸ್ಯೆಗೆ ತುತ್ತಾಗಿದ್ದ ಶ್ರೇಯಸ್‌ ಅಯ್ಯರ್‌ ಕೂಡ ಕಂಬ್ಯಾಕ್‌ ಮಾಡಿದ್ದಾರೆ. ಆದ್ರೆ ಇತ್ತೀಚೆಗೆ ದೇಶೀಯ ಟೂರ್ನಿಯಲ್ಲಿ ಅಬ್ಬರಿಸಿದ ವಿಕೆಟ್​​ ಕೀಪರ್ ಬ್ಯಾಟರ್ ಇಶಾನ್ ಕಿಶನ್, ಸರ್ಫರಾಜ್‌ ಖಾನ್‌, ಹಾಗೂ ದೀರ್ಘಕಾಲದಿಂದ ತಂಡದಿಂದ ಹೊರಗೇ ಇರುವ ಮೊಹಮ್ಮದ್ ಶಮಿ ಸೇರಿದಂತೆ ಹಲವರನ್ನ ತಂಡದಿಂದ ಕೈ ಬಿಡಲಾಗಿದೆ.

ಏಕದಿನ ಸರಣಿಗೆ ಭಾರತ ತಂಡ ಹೀಗಿದೆ
ಶುಭಮನ್‌ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (Virat Kohli), ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್‌ ಕೃಷ್ಣ, ಕುಲ್‌ದೀಪ್‌ ಯಾದವ್, ರಿಷಭ್‌ ಪಂತ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಅರ್ಷ್‌ದೀಪ್ ಸಿಂಗ್, ಯಶಸ್ವಿ ಜೈಸ್ವಾಲ್.

ಇದೇ ಜನವರಿ 11 ರಿಂದ ಜ.15ರ ವರೆಗೆ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಜ.21 ರಿಂದ ಜ.31ರ ವರೆಗೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ಅಯ್ಯರ್‌ ಆಡೋದು ಡೌಟಾ?
ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿಗೆ ಶ್ರೇಯಸ್‌ ಅಯ್ಯರ್‌ ಉಪನಾಯಕನಾಗಿ ಆಯ್ಕೆಯಾಗಿದ್ದರೂ, ಶ್ರೇಯಸ್‌ ಲಭ್ಯತೆಯು ಇನ್ನೂ ಪಕ್ಕಾ ಆಗಿಲ್ಲ. ಬಿಸಿಸಿಐ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (BCCI CEO) ಅವರಿಂದ ಫಿಟ್ನೆಸ್ ಕ್ಲಿಯರೆನ್ಸ್‌ಗೆ ಒಳಪಟ್ಟಿರುತ್ತದೆ. ಫಿಟ್ನೆಸ್‌ ಕ್ಲಿಯರೆನ್ಸ್‌ ಸಿಕ್ಕರೆ, ಪ್ಲೇಯಿಂಗ್ -11 ನಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಪಾಂಡ್ಯ, ಬುಮ್ರಾ ಕೂಡ ಔಟ್‌
2026ರ ಟಿ20 ವಿಶ್ವಕಪ್‌ ಟೂರ್ನಿ ಗಮನದಲ್ಲಿಟ್ಟುಕೊಂಡು ಏಕದಿನ ತಂಡದಿಂದ ಹಾರ್ದಿಕ್‌ ಪಾಂಡ್ಯ ಹಾಗೂ ಜಸ್ಪ್ರೀತ್‌ ಬುಮ್ರಾ ಅವರನ್ನು ತಂಡದಿಂದ ಕೈಬಿಡಲಾಗಿದೆ. ಹಾರ್ದಿಕ್ ಪಾಂಡ್ಯ ಅವರಿಗೆ ಪಂದ್ಯದಲ್ಲಿ 10 ಓವರ್‌ ಬೌಲಿಂಗ್ ಮಾಡಲು ಬಿಸಿಸಿಐ ಸಿಒಇ ಅನುಮತಿ ನೀಡಿಲ್ಲ, ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಅವರ ಮೇಲಿನ ಹೊರೆ ತಗ್ಗಿಸಲು ಬಿಸಿಸಿಐ ಈ ಕ್ರಮ ತೆಗೆದುಕೊಂಡಿದೆ ಎಂದು ವಿಶೇಷ ಸೂಚನೆಯಲ್ಲಿ ತಿಳಿಸಿದೆ.

ಶಮಿಗೆ ಕೂಡಿಬಾರದ ಮುಹೂರ್ತ
2023ರ ವಿಶ್ವಕಪ್ ನಲ್ಲಿ ಗಾಯಗೊಂಡು ಒಂದೂವರೆ ವರ್ಷಗಳ ಕಾಲ ಕಣದಿಂದ ಹೊರಗಿದ್ದ ಮೊಹಮ್ಮದ್ ಶಮಿ ಅವರು ಕಳೆದ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆ ತಂಡವನ್ನ ಕೂಡಿಕೊಂಡಿದ್ದರು. ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರೂ ಫಿಟ್ನೆಸ್ ಕಾರಣಕ್ಕಾಗಿ ಅವರನ್ನ ಹೊರಗಿಡಲಾಗಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ. ಇದೀಗ ಶಮಿ ದೇಶೀಯ ಪಂದ್ಯಗಳಲ್ಲಿ ಅದ್ಭುತ ಬೌಲಿಂಗ್ ಮಾಡುತ್ತಿದ್ದು ರಾಷ್ಟ್ರೀಯ ತಂಡವನ್ನು ಸೇರಲು ಉತ್ಸುಕರಾಗಿದ್ದರು. ನ್ಯೂಜಿಲೆಂಡ್‌ ವಿರದ್ಧದ ಸರಣಿಗೆ ಶಮಿ ಅವರನ್ನ ಆಯ್ಕೆ ಮಾಡುವ ಸಾಧ್ಯತೆಗಳಿವೆ ಎಂದೇ ಊಹಿಸಲಾಗಿತ್ತು. ಆದ್ರೆ ಬಿಸಿಸಿಐ ತಂಡದಿಂದ ಕೈಬಿಟ್ಟಿದೆ.

Share This Article