ವೇಗದ ಬೌಲರ್‌ಗಳು ಗೆಲುವು ತಂದು ಕೊಡುವ ಸಾಮರ್ಥ್ಯ ಹೊಂದಿದ್ದಾರೆ: ಇಶಾಂತ್ ಶರ್ಮಾ

Public TV
1 Min Read

ನವದೆಹಲಿ: ಬಹುನಿರೀಕ್ಷಿತ ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಸರಣಿ ಆರಂಭದಲ್ಲೇ ಟೀಂ ಇಂಡಿಯಾ ಪ್ರಮುಖ ವೇಗಿಗಳ ಸಮಸ್ಯೆ ಎದುರಿಸಿದ ಹೊರತಾಗಿಯೂ ತಂಡದ ಪೇಸರ್ ಗಳು ಗೆಲುವು ತಂದು ಕೊಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಇಶಾಂತ್ ಶರ್ಮಾ ಹೇಳಿದ್ದಾರೆ.

ಟೀಂ ಇಂಡಿಯಾ ಉತ್ತಮ ವೇಗದ ಬೌಲರ್ ಗಳನ್ನು ನೀಡುವ ಸಾಮರ್ಥ್ಯ ಹೊಂದಿಲ್ಲ ಎಂಬ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಆದರೆ ಸದ್ಯ ತಂಡದಲ್ಲಿ 8 ರಿಂದ 9 ವೇಗಿಗಳು ಇದ್ದು ಯಾವುದೇ ಸಂದರ್ಭದಲ್ಲಿ ಟೆಸ್ಟ್ ಪಂದ್ಯವನ್ನು ಆಡುವ ಸಾಮರ್ಥ್ಯ ಟೀಂ ಇಂಡಿಯಾ ಹೊಂದಿದೆ ಎಂದು ತಿಳಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಆಗಸ್ಟ್ 1 ರಿಂದ ಆರಂಭಗೊಳ್ಳಲಿದ್ದು, ಗಾಯದ ಸಮಸ್ಯೆಯಿಂದ ತಂಡದ ಪ್ರಮುಖ ವೇಗಿಗಳಾದ ಭುವನೇಶ್ವರ್ ಕುಮಾರ್, ಜಸ್‍ಪ್ರೀತ್ ಬುಮ್ರಾ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಆದರೆ ಇವರ ಹೊರತಾಗಿಯೂ ಮಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ ಎದುರಾಳಿಗಳ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಅದ್ದರಿಂದ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಗೆಲ್ಲುವ ಅವಕಾಶಗಳು ಹೆಚ್ಚಿದೆ ಎಂದು ಇಶಾಂತ್ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್ ಪಿಚ್ ಗಳು ಸಹ ವೇಗದ ಬೌಲಿಂಗ್ ಹೆಚ್ಚು ಸಹಕಾರ ನೀಡುವುದರಿಂದ ಬೌಲರ್ ಗಳು ಉತ್ತಮ ಸ್ಪೇಲ್ ನಡೆಸಲು ಸಾಧ್ಯ. ಆದರೆ ತವರು ನೆಲದಲ್ಲಿ ಹಾಗೂ ಇಂಗ್ಲೆಂಡ್ ನಲ್ಲಿ ಆಡಲು ಸಾಕಷ್ಟು ವ್ಯತ್ಯಾಸಗಳಿದೆ. ಅವುಗಳನ್ನು ಅರಿತು ಬೌಲ್ ಮಾಡಬೇಕಿದೆ ಎಂದು ಹೇಳಿದ್ದಾರೆ.

ತಮ್ಮ ಬೌಲಿಂಗ್ ನಲ್ಲಿಯೂ ಸಾಕಷ್ಟು ಸುಧಾರಣೆಯಾಗಿದೆ. ಈ ಹಿಂದೆ ತರಬೇತಿಯ ಅಗತ್ಯದ ಮಹತ್ವದ ಬಗ್ಗೆ ತಿಳಿದಿರಲಿಲ್ಲ. ಸದ್ಯ ಉತ್ತಮ ತರಬೇತಿ ಪಡೆಯುತ್ತಿದ್ದು, ತಮ್ಮ ಬೌಲಿಂಗ್ ಕೌಶಲ್ಯಗಳಲ್ಲಿ ಮಹತ್ವದ ಬದಲಾವಣೆಯಾಗಿದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *