ತಿಲಕ್‌ ವರ್ಮಾ ಜವಾಬ್ದಾರಿಯುತ ಆಟ – ಆಂಗ್ಲರ ವಿರುದ್ಧ ಟೀಂ ಇಂಡಿಯಾಗೆ 2 ವಿಕೆಟ್‌ಗಳ ಜಯ

Public TV
2 Min Read

ಚೆನ್ನೈ: ತಿಲಕ್‌ ವರ್ಮಾ ಜವಾಬ್ದಾರಿಯುತ ಆಟದಿಂದ ಇಂಗ್ಲೆಂಡ್‌ ವಿರುದ್ಧ ಟೀಂ ಇಂಡಿಯಾಗೆ (India vs England) 2 ವಿಕೆಟ್‌ಗಳ ಜಯ ಸಿಕ್ಕಿದೆ. ಆ ಮೂಲಕ ಟಿ20 ಸರಣಿಯಲ್ಲಿ ಭಾರತ 2-0 ಮುನ್ನಡೆ ಕಾಯ್ದುಕೊಂಡಿದೆ.

ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ – ಇಂಗ್ಲೆಂಡ್ (India vs England)​ ನಡುವಿನ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ ನೀಡಿದ 166 ರನ್​ಗಳ ಸವಾಲಿನ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 19.2 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 166 ರನ್‌ ಕಲೆಹಾಕಿ ಜಯಗಳಿಸಿತು.

ಭಾರತದ ಪರ ತಿಲಕ್‌ ವರ್ಮ 55 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 4 ಬೌಂಡರಿಗಳ ನೆರವಿನಿಂದ 72 ರನ್‌ ಕಲೆಹಾಕಿದರು. ವಾಷಿಂಗ್ಟನ್‌ ಸುಂದರ್‌ 19 ಎಸೆತಗಳಲ್ಲಿ 26, ಸೂರ್ಯಕುಮಾರ್‌ ಯಾದವ್‌, ಅಭಿಷೇಕ್‌ ಶರ್ಮಾ ತಲಾ 12, ರನ್‌ ಕಲೆ ಹಾಕಿದರು. ಉಳಿದ ಆಟಗಾರರು ಒಂದಂಕಿಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು.

ಇಂಗ್ಲೆಂಡ್‌ ತಂಡ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 165 ರನ್‌ ಕಲೆಹಾಕಿತು. ಇಂಗ್ಲೆಂಡ್‌ ಪರ ಮೊದಲು ಬ್ಯಾಟಿಂಗ್ ಮಾಡಿದ ನಾಯಕ ಬಟ್ಲರ್ 30 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್​ಗಳ ನೆರವಿನಿಂದ 45 ರನ್​ಗಳಿಸಿ ತಂಡಕ್ಕೆ ನೆರವಾದರು. ಮೊದಲ ಪಂದ್ಯದಂತೆ ಎರಡನೇ ಟಿ20 ಪಂದ್ಯದಲ್ಲೂ ಇಂಗ್ಲೆಂಡ್ ಆರಂಭಿಕ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

ಟಾಸ್​ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾಗಿ ಆಗಮಿಸಿದ್ದ ಫಿಲ್​ ಸಾಲ್ಟ್​ 4 ಹಾಗೂ ಬೆನ್​ ಡಕೆಟ್​ 3 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಸಾಲ್ಟ್ ಮತ್ತೊಮ್ಮೆ ಅರ್ಷದೀಪ್​ಗೆ ವಿಕೆಟ್​ ಒಪ್ಪಿಸಿದರೆ, ಡಕೆಟ್ ಲೋಕಲ್ ಬಾಯ್ ವಾಷಿಂಗ್ಟನ್ ಸುಂದರ್ ಬೌಲಿಂಗ್​ನಲ್ಲಿ ಜುರೆಲ್​ಗೆ ಕ್ಯಾಚ್​ ಕೊಟ್ಟು ಪೆವಿಲಿಯನ್​ ಸೇರಿದರು.

ಅಟ್ಕಿನ್ಸನ್​ ಬದಲಿಗೆ ಅವಕಾಶ ಪಡೆದಿದ್ದ ವೇಗದ ಬೌಲರ್ ಬ್ರಿಡನ್ ಕೇರ್ಸ್ 17 ಎಸೆತಗಳಲ್ಲಿ 3 ಸಿಕ್ಸರ್, 1 ಬೌಂಡರಿ ಸಹಿತ 31 ರನ್​ಗಳಿಸಿ ರನ್​ಔಟ್ ಆದರು. ಕೊನೆಯಲ್ಲಿ ಆರ್ಚರ್​ ಅಜೇಯ 12, ರಶೀದ್ 10, ಮಾರ್ಕ್​ ವುಡ್ 5 ರನ್​ಗಳಿಸಿದರು.

ಭಾರತದ ಪರ ವರುಣ್ ಚಕ್ರವರ್ತಿ 38ಕ್ಕೆ 2 ವಿಕೆಟ್, ಅಕ್ಷರ್ ಪಟೇಲ್ 32ಕ್ಕೆ2, ಹಾರ್ದಿಕ್ ಪಾಂಡ್ಯ 6ಕ್ಕೆ1, ಅರ್ಷದೀಪ್ ಸಿಂಗ್ 40ಕ್ಕೆ1 ಹಾಗೂ ಅಭಿಷೇಕ್ ಶರ್ಮಾ 12ಕ್ಕೆ1 ವಿಕೆಟ್ ಪಡೆದು ಮಿಂಚಿದರು.

Share This Article