ಬಾಂಗ್ಲಾ ವಿರುದ್ಧದ ಟಿ-20 ಪಂದ್ಯಕ್ಕೂ ಮುನ್ನವೇ ಹಿಟ್‍ಮ್ಯಾನ್‍ಗೆ ಗಾಯ

Public TV
1 Min Read

ನವದೆಹಲಿ: ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಮೂರು ಟಿ-20 ಪಂದ್ಯಗಳ ಕ್ರಿಕೆಟ್ ಸರಣಿಗೆ ದಿನಗಣನೆ ಆರಂಭವಾಗಿದೆ. ಆದರೆ ನೆಟ್ ಅಭ್ಯಾಸದ ವೇಳೆ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‍ಮನ್ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ.

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಇಂದು ಟೀಂ ಇಂಡಿಯಾ ನೆಟ್ ಅಭ್ಯಾಸ ನಡೆಸಿತ್ತು. ಈ ವೇಳೆ ಭಾರತದ ಥ್ರೋಡೌನ್ ಪರಿಣಿತ ನುವಾನ್ ಸೆನೆವಿರತ್ನ ಬೌಲಿಂಗ್ ಮಾಡುತ್ತಿದ್ದರು. ಚೆಂಡು ಏಕಾಏಕಿ ರೋಹಿತ್ ಶರ್ಮಾ ಕಾಲಿಗೆ ಬಡಿದ ಪರಿಣಾಮ ನೋವಿನಿಂದ ತಕ್ಷಣವೇ ಅಭ್ಯಾಸ ಮೊಟಕುಗೊಳಿಸಿ ಕ್ರೀಡಾಂಗಣದಿಂದ ಹೊರ ನಡೆದಿದ್ದಾರೆ.

ದಿನವಿಡಿ ಅಭ್ಯಾಸದಿಂದ ರೋಹಿತ್ ಶರ್ಮಾ ಮೈದಾನದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ರೋಹಿತ್ ಶರ್ಮಾ ಬಾಂಗ್ಲಾ ವಿರುದ್ಧ ಟಿ-20 ಪಂದ್ಯಕ್ಕೆ ಅಲಭ್ಯರಾಗುತ್ತಾರಾ ಎನ್ನುವ ಆತಂಕ ಅಭಿಮಾನಿಗಳಲ್ಲಿ ಶುರುವಾಗಿದೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕತ್ವದ ಜವಾಬ್ದಾರಿ ರೋಹಿತ್ ಶರ್ಮಾ ಹೊತ್ತುಕೊಂಡಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನವೆಂಬರ್ 3ರಂದು ಬಾಂಗ್ಲಾ ವಿರುದ್ಧದ ಮೊದಲ ಟಿ-20 ಪಂದ್ಯ ನಡೆಯಲಿದೆ. ಅದಕ್ಕಾಗಿ ಈಗಾಗಲೇ ಉಭಯ ತಂಡಗಳು ನೆಟ್‍ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿವೆ.

ರೋಹಿತ್ ಶರ್ಮಾ ಇನ್ನೆರಡು ದಿನಗಳಲ್ಲಿ ಚೇತರಿಸಿಕೊಂಡು ಬಾಂಗ್ಲಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಅಂತ ಟೀಂ ಇಂಡಿಯಾ ತಿಳಿಸಿದೆ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *