ನನಗೆ ಯಾಕೆ, ಶಮಿಯನ್ನು ಹುರಿದುಂಬಿಸಿ- ಅಭಿಮಾನಿಗಳಿಗೆ ಕೊಹ್ಲಿ ಮನವಿಯ ವಿಡಿಯೋ ವೈರಲ್

Public TV
2 Min Read

ಇಂದೋರ್: ಬಾಂಗ್ಲಾದೇಶದ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಭರ್ಜರಿ ಮಿಂಚಿದ್ದಾರೆ. ಪಂದ್ಯವು ಪ್ರಮುಖ ತಿರುವು ಪಡೆದುಕೊಳ್ಳಲು ಕಾರಣವಾದ ಶಮಿ ಅವರನ್ನು ಹುರಿದುಂಬಿಸುಂತೆ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಮನವಿ ಮಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಂದೋರ್‍ನ ಹೋಳ್ಕರ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ ಉತ್ತಮ ಹಿಡಿತ ಸಾಧಿಸಿದೆ. ಬಾಂಗ್ಲಾ ತಂಡವನ್ನು ಕೇವಲ 150 ರನ್‍ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ ಬೌಲರ್ ಗಳು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ.

ಬಾಂಗ್ಲಾದ ಸ್ಫೋಟಕ ಬ್ಯಾಟ್ಸ್‌ಮನ್ ಮುಷ್ಫಿಕರ್ ರಹೀಂ ಹಾಗೂ ಮೊಮಿನುಲ್ ಹಕ್ ವಿಕೆಟ್ ಕಾಯ್ದುಕೊಂಡು ಭರ್ಜರಿ ಬ್ಯಾಟಿಂಗ್ ನಡೆಸಿದ್ದರು. ಆದರೆ 37 ರನ್ ಗಳಿಸಿದ್ದ ಮೊಮಿನುಲ್ ಹಕ್ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಬಳಿಕ 54ನೇ ಓವರಿನಲ್ಲಿ ಮೊಹಮ್ಮದ್ ಶಮಿ ಕೊನೆಯ ಎರಡು ಎಸೆತಗಳಲ್ಲಿ 43 ರನ್ ಗಳಿಸಿದ್ದ ಮುಷ್ಫಿಕರ್ ರಹೀಂ ಹಾಗೂ ಮೆಹದಿ ಹಸನ್ ಮಿರಾಜ್ ವಿಕೆಟ್ ಕಿತ್ತರು.

2019ರ ವಿಶ್ವಕಪ್ ಟೂರ್ನಿಯಲ್ಲಿ ಮಿಂಚಿದ್ದ ಮೊಹಮ್ಮದ್ ಶಮಿ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಈ ವೇಳೆ ಹ್ಯಾಟ್ರಿಕ್ ವಿಕೆಟ್ ಪಡೆದುಕೊಂಡಿದ್ದ ಶಮಿ ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಈ ಇನ್ನಿಂಗ್ಸ್ ನಲ್ಲಿ ಈ ಸಾಧನೆ ಪುನಾರವರ್ತನೆ ಮಾಡುವಲ್ಲಿ ಜಸ್ಟ್ ಮಿಸ್ ಮಾಡಿಕೊಂಡಿದ್ದಾರೆ. 13 ಓವರ್ ಎಸೆದ ಶಮಿ 5 ಮೆಡನ್ ಓವರ್ ಸೇರಿದಂತೆ ಕೇವಲ 27 ರನ್ ನೀಡಿ 3 ವಿಕೆಟ್ ಪಡೆದುಕೊಂಡಿದ್ದಾರೆ. ಉಳಿದಂತೆ ಇಶಾಂತ್ ಶರ್ಮಾ, ರವಿಚಂದ್ರನ್ ಅಶ್ವಿನ್ ಮತ್ತು ಉಮೇಶ್ ಯಾದವ್ ತಲಾ 2 ವಿಕೆಟ್ ಪಡೆದು ಮುಂಚಿದ್ದಾರೆ.

https://twitter.com/AkshayxVirat/status/1194903056141279232

ಮೊಹಮ್ಮದ್ ಶಮಿ ವಿಕೆಟ್ ಪಡೆದುಕೊಳ್ಳುತ್ತಿದ್ದಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಂಭ್ರಮಿಸಿದ್ದಾರೆ. ಜೊತೆಗೆ ಶಮಿ ಅವರನ್ನು ಚಪ್ಪಾಳೆ ಮೂಲಕ ಹುರಿದುಂಬಿಸಿ ಎಂದು ಕ್ಯಾಪ್ಟನ್ ಮನವಿ ಮಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟಾಸ್ ಗೆದ್ದ ಬಾಂಗ್ಲಾ 58.3 ಓವರ್‌ಗಳಲ್ಲಿ 150 ರನ್‍ಗಳಿಗೆ ಆಲೌಟ್ ಆಗಿದೆ. ತಂಡದ ಮುಷ್ಫಿಕರ್ ರಹೀಮ್ 43 ರನ್, ಮೊಮಿನುಲ್ ಹಕ್ 37 ರನ್ ಗಳಿಸಿ ತಂಡಕ್ಕೆ ಆಸರೆಯಾದರು. 5 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಬಾಂಗ್ಲಾ 10 ರನ್ ಗಳಿಸುವಷ್ಟರಲ್ಲಿ ಉಳಿದ 5 ವಿಕೆಟ್ ಕಳೆದುಕೊಂಡಿತು. 6 ಬ್ಯಾಟ್ಸ್‍ಮನ್‍ಗಳು ಎರಡಂಕಿ ರನ್ ಗಡಿ ದಾಟದ ಪರಿಣಾಮ ಬಾಂಗ್ಲಾ ಕುಸಿತ ಕಂಡಿತು.

ಮುರಳೀಧರನ್ ಸರಿಗಟ್ಟಿದ ಅಶ್ವಿನ್:
ಟೀಂ ಇಂಡಿಯಾ ಸ್ಪಿನ್ನರ್ ಆರ್.ಅಶ್ವಿನ್ ತವರು ಮೈದಾನದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಬಾಂಗ್ಲಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 2 ವಿಕೆಟ್ ಪಡೆದ ಅಶ್ವಿನ್, ಅತಿ ವೇಗದಲ್ಲಿ 250 ವಿಕೆಟ್ ಪಡೆಯುವ ಮೂಲಕ ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರನ್ನು ಸರಿಗಟ್ಟಿದ್ದಾರೆ. ಇಬ್ಬರೂ ಸ್ಪಿನ್ನರ್‍ಗಳು 42 ಟೆಸ್ಟ್‍ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ 6 ರನ್‍ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಮೊದಲ ಇನ್ನಿಂಗ್ಸ್ ಅಂತ್ಯಕ್ಕೆ ಮಯಾಂಕ್ ಅಗರ್‍ವಾಲ್ 37 ರನ್ ಹಾಗೂ ಚೇತೇಶ್ವರ ಪೂಜಾರ 43 ರನ್ ಸಹಾಯದಿಂದ ಟೀಂ ಇಂಡಿಯಾ 86 ರನ್ ಗಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *