ಮ್ಯಾಚ್ ನೋಡಲು ಬಂದ ವಿಜಯ್ ಮಲ್ಯ

Public TV
2 Min Read

ಟೌಂಟನ್: ಲಂಡನ್‍ನ ಕೆನ್ನಿಂಗ್ಟನ್ ಓವಲ್‍ನಲ್ಲಿ ಇಂದು ನಡೆಯುತ್ತಿರುವ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಪಂದ್ಯವನ್ನು ನೋಡಲು ಉದ್ಯಮಿ ವಿಜಯ್ ಮಲ್ಯ ಆಗಮಿಸಿದ್ದಾರೆ.

ವಿಜಯ್ ಮಲ್ಯ ಕ್ರೀಡಾಂಗಣದ ಗೇಟ್ ಬಳಿ ಟಿಕೆಟ್ ನೀಡಿ ಒಳ ಹೋಗುತ್ತಿದ್ದವೇಳೆ ಮಾಧ್ಯಮಗಳು ಪ್ರಶ್ನೆ ಕೇಳುತ್ತಿದ್ದರೂ ಮೌನವಾಗಿದ್ದು ಸ್ವಲ್ಪ ಸಮಯದ ಬಳಿಕ, ನಾನು ಮ್ಯಾಚ್ ನೋಡಲು ಬಂದಿದ್ದೇನೆ ಎಂದು ಕ್ರಿಡಾಂಗಣದ ಒಳಗೆ ಹೋದರು.

ಐಸಿಸಿ 2019 ಏಕದಿನ ವಿಶ್ವಕಪ್‍ನಲ್ಲಿ ಟೀ ಇಂಡಿಯಾವು ತನ್ನ ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಕೊಹ್ಲಿ ಪಡೆ 27 ಓವರ್ ನಲ್ಲಿ ಒಂದು ವಿಕೇಟ್ ನಷ್ಟಕ್ಕೆ 153 ರನ್ ಕಲೆ ಹಾಕಿದೆ.

ಮದ್ಯದ ದೊರೆ ವಿಜಯ್ ಮಲ್ಯ ಬ್ಯಾಂಕ್‍ಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ಮರುಪಾವತಿ ಮಾಡದೇ ಲಂಡನ್‍ನಲ್ಲಿ ತಲೆಮರೆಸಿಕೊಂಡಿದ್ದಾರೆ. ಮಲ್ಯ ಗಡಿಪಾರಿಗೆ ಬ್ರಿಟನ್ ಆಂತರಿಕ ಸಂಸತ್ತು ಒಪ್ಪಿಗೆ ನೀಡಿದೆ. ಆದರೆ ಈ ಸಂಬಂಧ ವಿಚಾರಣೆ ಮುಂದೂಡಲಾಗಿದೆ.

ಕಳೆದ ವರ್ಷ ಡಿಸೆಂಬರಿನಲ್ಲಿ ಈ ಕುರಿತು ವಿಚಾರಣೆ ನಡೆಸಿ ತೀರ್ಪು ನೀಡಿದ್ದ ಲಂಡನ್ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಮಲ್ಯ ಗಡಿಪಾರಿಗೆ ಅನುಮತಿ ನೀಡಿತ್ತು. ಅಲ್ಲದೇ ಗಡಿಪಾರು ಆದೇಶ ನೀಡುವುದರಿಂದ ಮಾನವ ಹಕ್ಕುಗಳ ಉಲ್ಲಂಘನೆ ಆಗುವುದಿಲ್ಲ ಎಂದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು. ನ್ಯಾಯಾಲಯದ ತೀರ್ಪಿಗೆ ಸಂಸತ್ ಒಪ್ಪಿಗೆ ಮಾತ್ರ ಬಾಕಿ ಇತ್ತು. ಆದರೆ ಮಲ್ಯ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿ ಬ್ಯಾಂಕ್ ಸಾಲ ಮರು ಪಾವತಿ ಮಾಡಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದರು.

ಬ್ಯಾಂಕ್‍ಗಳಿಗೆ ಸಾವಿರಾರು ಕೋಟಿ ರೂ. ವಂಚನೆ ಮಾಡಿ ವಿದೇಶದಲ್ಲಿರುವ ಮದ್ಯದ ದೊರೆ ವಿಜಯ್ ಮಲ್ಯ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಅಕ್ರಮ ಹಣ ವರ್ಗಾವಣೆ ತಡೆ ನ್ಯಾಯಾಲಯ (ಪಿಎಂಎಲ್‍ಎ) ಘೋಷಿಸಿದೆ. ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ ಜಾರಿಗೆ ಬಂದ ಬಳಿಕ ಘೋಷಣೆಯಾದ ಮೊದಲ ಉದ್ಯಮಿ ವಿಜಯ್ ಮಲ್ಯ ಆಗಿದ್ದಾರೆ.

ಸಾಲ ತೆಗೆದುಕೊಂಡು ಮರು ಪಾವತಿಸದೇ ವಿದೇಶದಲ್ಲಿ ನೆಲೆಸಿರುವ ವಿಜಯ್ ಮಲ್ಯರನ್ನ ಆರ್ಥಿಕ ಅಪರಾಧಿ ಎಂದು ಘೋಷಿಸಬೇಕೆಂದು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐ 2018, ನವೆಂಬರ್ ನಲ್ಲಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಇಡಿ ಮತ್ತು ಸಿಬಿಐ ಸುಳ್ಳು ಆರೋಪ ಮಾಡುತ್ತಿದ್ದು, ಸಾಲ ಮರುಪಾವತಿಸಲು ನ್ಯಾಯಾಲಯ ಅವಕಾಶ ನೀಡಬೇಕೆಂದು ಮಲ್ಯ ಪರ ವಕೀಲರು ವಾದ ಮಂಡಿಸಿದ್ದರು. ಇದನ್ನು ಆಲಿಸಿದ ನ್ಯಾಯಾಲಯ ವಿಜಯ್ ಮಲ್ಯ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಕೋರ್ಟ್ 2019 ಜನವರಿ 1ರಂದು ತೀರ್ಪು ನೀಡಿತ್ತು.

Share This Article
Leave a Comment

Leave a Reply

Your email address will not be published. Required fields are marked *