ಅಶ್ವಿನ್‌ಗೆ 6 ವಿಕೆಟ್ – ಆಸ್ಟ್ರೇಲಿಯಾ 480 ರನ್‌ಗಳಿಗೆ ಆಲೌಟ್

Public TV
2 Min Read

ಅಹಮದಾಬಾದ್: ಬಾರ್ಡರ್ ಗಾವಾಸ್ಕರ್ ಟ್ರೋಫಿ (Border Gavaskar Trophy) ಸರಣಿಯ 4ನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ (Australia) 480 ರನ್‌ಗಳಿಗೆ ಆಲೌಟ್ ಆಗಿದೆ. ತನ್ನ ಸರದಿ ಆರಂಭಿಸಿರುವ ಭಾರತ 10 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 36 ರನ್ ಗಳಿಸಿದೆ.

ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 255 ರನ್ ಗಳಿಸಿದ್ದ ಆಸ್ಟ್ರೇಲಿಯಾ 2ನೇ ದಿನವೂ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾಗಿದೆ. ಮೊದಲ ದಿನ 49 ರನ್ ಗಳಿಸಿದ್ದ ಕ್ಯಾಮರೂನ್ ಗ್ರೀನ್ (Cameron Green) 2ನೇ ದಿನ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಅಲ್ಲದೇ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಗ್ರೀನ್, ಉಸ್ಮಾನ್ ಖವಾಜ ಜೊತೆಗೂಡಿ 208 ರನ್‌ಗಳ ಜೊತೆಯಾಟ ಆಡುವ ಮೂಲಕ ಭಾರತ ತಂಡದ ಬೌಲರ್‌ಗಳನ್ನು ಬೆಂಡೆತ್ತಿದರು.

Cameron Green

ಕ್ಯಾಮರೂನ್ ಗ್ರೀನ್ 170 ಎಸೆತಗಳಲ್ಲಿ 18 ಬೌಂಡರಿಗಳೊಂದಿಗೆ 114 ರನ್ ಗಳಿಸಿದರೆ, 2ನೇ ದಿನವೂ ತಾಳ್ಮೆಯ ಆಟವಾಡಿದ ಖವಾಜ ಒಟ್ಟು 422 ಎಸೆತಗಳಲ್ಲಿ 180 ರನ್‌ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇದನ್ನೂ ಓದಿ: ಉಸ್ಮಾನ್ ಖವಾಜ ಶತಕದಾಟ – ಮೊದಲ ದಿನ ಆಸ್ಟ್ರೇಲಿಯಾಗೆ ಮೇಲುಗೈ

ಕೊನೆಯಲ್ಲಿ ನಥನ್ ಲಿಯಾನ್ ಹಾಗೂ ಟಾಡ್ ಮರ್ಫಿ ಜೋಡಿ ಸಹ ಭರ್ಜರಿ ಬ್ಯಾಟಿಂಗ್ ನಡೆಸಿತು. 9ನೇ ವಿಕೆಟ್ ಪತನಕ್ಕೆ ಈ ಜೋಡಿ 117 ಎಸೆತಗಳಲ್ಲಿ 70 ರನ್ ಕಲೆಹಾಕಿತು. ಪರಿಣಾಮ ಆಸ್ಟ್ರೇಲಿಯಾ ತಂಡ 167.2 ಓವರ್‌ಗಳಲ್ಲಿ 480 ರನ್ ಬೃಹತ್ ಮೊತ್ತ ಗಳಿಸಿತು. ಇದನ್ನೂ ಓದಿ: 20 ವರ್ಷಗಳ ನಂತ್ರ ಭಾರತ ನೆಲದಲ್ಲಿ ವಿಶೇಷ ಸಾಧನೆಗೈದ ಖವಾಜ

ಅಶ್ಚಿನ್ ಸ್ಪಿನ್ ಮಿಂಚು: 4ನೇ ಪಂದ್ಯದಲ್ಲೂ ತಮ್ಮ ಉತ್ತಮ ಫಾರ್ಮ್ ಮುಂದುವರಿಸಿದ ಅಶ್ವಿನ್ (Ravichandran Ashwin) ಮೊದಲ ಇನ್ನಿಂಗ್ಸ್‌ನಲ್ಲಿ 6 ಪ್ರಮುಖ ವಿಕೆಟ್ ಉರುಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಮೊಹಮ್ಮದ್ ಶಮಿ 2 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.

INDvsAUS 2

ತನ್ನ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಸಹ ಉತ್ತಮ ಆರಂಭ ಪಡೆದುಕೊಂಡಿದೆ. ಎಚ್ಚರಿಕೆಯ ಬ್ಯಾಟಿಂಗ್ ಮಾಡಿದ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಶುಭಮನ್ ಗಿಲ್ ಜೋಡಿ ಯಾವುದೇ ವಿಕೆಟ್ ನಷ್ಟವಿಲ್ಲದೆ 10 ಓವರ್‌ಗಳಲ್ಲಿ 36 ರನ್ ಕಲೆಹಾಕಿದೆ. ರೋಹಿತ್ ಶರ್ಮಾ 33 ಎಸೆತಗಳಲ್ಲಿ ಎರಡು ಬೌಂಡರಿ ಸಹಿತ 17 ರನ್ ಗಳಿಸಿದರೆ, ಶುಭಮನ್ ಗಿಲ್ 27 ಎಸೆತಗಳಲ್ಲಿ 18 ರನ್ (1 ಬೌಂಡರಿ, 1 ಸಿಕ್ಸರ್) ಗಳಿಸಿ ಅಜೇಯರಾಗುಳಿದಿದ್ದು, ಶನಿವಾರ ಬ್ಯಾಟಿಂಗ್ ಮುಂದುವರಿಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *