ಆಸೀಸ್ ವಿರುದ್ಧ ರೋಹಿತ್, ವಿರಾಟ್ ಅಬ್ಬರ- ಸರಣಿ ಗೆದ್ದ ಭಾರತ

Public TV
3 Min Read

– ಮಿಂಚಿದ ಶ್ರೇಯಸ್ ಅಯ್ಯರ್

ಬೆಂಗಳೂರು: ಮೊಹಮ್ಮದ ಶಮಿ, ರವೀಂದ್ರ ಜಡೇಜಾ ಬೌಲಿಂಗ್ ದಾಳಿ ಹಾಗೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಅಬ್ಬರದ ಮುಂದೆ ಆಸ್ಟ್ರೇಲಿಯಾ ಸೋಲಿಗೆ ಶರಣಾಗಿದ್ದು, ಸರಣಿ ಗೆಲ್ಲುವ ಕನಸನ್ನು ಕೈಚೆಲ್ಲಿಕೊಂಡಿದೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾನುವಾರ ನಡೆದ ಏಕದಿನ ಸರಣಿಯ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ 15 ಎಸೆತಗಳು ಬಾಕಿ ಇರುವಂತೆ 7 ವಿಕೆಟ್‍ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 2-1 ಅಂತರದಿಂದ ಕೊಹ್ಲಿ ಪಡೆ ಸರಣಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಆಸ್ಟ್ರೇಲಿಯಾ ನೀಡಿದ್ದ 287 ರನ್‍ಗಳ ಸಾಧಾರಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ರೋಹಿತ್ ಶರ್ಮಾ 119 ರನ್ (128 ಎಸೆತ, 8 ಬೌಂಡರಿ, 6 ಸಿಕ್ಸರ್), ವಿರಾಟ್ ಕೊಹ್ಲಿ 89 ರನ್ (91 ಎಸೆತ, 8 ಬೌಂಡರಿ) ಹಾಗೂ ಶ್ರೇಯಸ್ ಅಯ್ಯರ್ 44 ರನ್ (35 ಎಸೆತ, 6ಬೌಂಡರಿ, ಸಿಕ್ಸ್) ಸಹಾಯದಿಂದ 47.3 ಓವರ್‌ಗಳಲ್ಲಿ 289 ರನ್ ಗಳಿಸಿ ಗೆದ್ದು ಬೀಗಿದೆ.

ಶರ್ಮಾ ದಾಖಲೆ:
ಹಿಟ್‍ಮ್ಯಾನ್ ರೋಹಿತ್ ಶರ್ಮಾ ಪಂದ್ಯದ ಆರಂಭದಲ್ಲಿ ಮೊದಲ ನಾಲ್ಕು ರನ್‍ಗಳಿಸುವ ಮೂಲಕ ಭಾರತದ ಪರ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ 9,000 ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ರೋಹಿತ್ 9 ಸಾವಿರ ಏಕದಿನ ರನ್‍ಗಳನ್ನು ಪೂರೈಸಿದ ವಿಶ್ವದ 3ನೇ ವೇಗದ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಇದನ್ನೂ ಓದಿ: ಗಂಗೂಲಿ, ಸಚಿನ್ ಹಿಂದಿಕ್ಕಿ ವಿಶ್ವ ಕ್ರಿಕೆಟ್‍ನಲ್ಲಿ ಹಿಟ್‍ಮ್ಯಾನ್ ಸಾಧನೆ

ಆಸ್ಟ್ರೇಲಿಯಾ ವಿರುದ್ಧ ಕಳೆದ ಎರಡು ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ದ ಕೆ.ಎಲ್.ರಾಹುಲ್ ಈ ಪಂದ್ಯದಲ್ಲಿ 19 ರನ್‍ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಬಳಿಕ ಮೈದಾನಕ್ಕಿಳಿದ ನಾಯಕ ವಿರಾಟ್ ಕೊಹ್ಲಿ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಜೊತೆಗೂಡಿ ಉತ್ತಮ ಇನ್ನಿಂಗ್ಸ್ ಕಟ್ಟಿದರು.

56 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರೋಹಿತ್ ಶರ್ಮಾ ತಾಳ್ಮೆ ಆಟದ ಮೂಲಕ 110 ಎಸೆತಗಳಲ್ಲಿ ಶತಕ ದಾಖಲಿಸಿದರು. ಇದು ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‍ನ 29ನೇ ಶತಕವಾಗಿದೆ. ಈ ಬೆನ್ನಲ್ಲೇ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದರು. ಈ ಜೋಡಿಯು 2ನೇ ವಿಕೆಟ್‍ಗೆ 137 ಜೊತೆಯಾಟದ ಕೊಡುಗೆ ನೀಡಿತು. ಆ್ಯಡಂ ಜಂಪಾ ಇನ್ನಿಂಗ್ಸ್ ನ 37ನೇ ಓವರ್ ನಲ್ಲಿ ರೋಹಿತ್ ಶರ್ಮಾ ವಿಕೆಟ್ ಕಿತ್ತರು. ರೋಹಿತ್ ಶರ್ಮಾ 119 ರನ್ (128 ಎಸೆತ, 8 ಬೌಂಡರಿ, 6 ಸಿಕ್ಸರ್) ಗಳಿಸಿ ವಿಕೆಟ್ ಒಪ್ಪಿಸಿದರು.

ಬಳಿಕ ಮೈದಾಕ್ಕಿಳಿದ ಶ್ರೇಯಸ್ ಅಯ್ಯರ್ ನಾಯಕ ವಿರಾಟ್ ಕೊಹ್ಲಿಗೆ ಸಾಥ್ ನೀಡಿದರು. ಈ ಜೋಡಿ ವಿಕೆಟ್ ಕಾಯ್ದುಕೊಂಡು ಅರ್ಧಶತಕ ಪೂರೈಸಿದರು. ಟೀಂ ಇಂಡಿಯಾ ಗೆಲುವಿನ ಹಂತದಲ್ಲಿ ಇದ್ದಾಗ ಅಂದ್ರೆ ಇನ್ನಿಂಗ್ಸ್ ನ 46ನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು. ವಿರಾಟ್ ಕೊಹ್ಲಿ 89 ರನ್ (91 ಎಸೆತ, 8 ಬೌಂಡರಿ) ಗಳಿಸಿ ವಿಕೆಟ್ ನೀಡಿ ಪೆವಿಲಿಯನ್‍ಗೆ ತೆರಳಿದರು. ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಶ್ರೇಯಸ್ ಅಯ್ಯರ್ ಔಟಾಗದೆ 44 ರನ್ (35 ಎಸೆತ, 6ಬೌಂಡರಿ, ಸಿಕ್ಸ್) ಹಾಗೂ ಮನೀಶ್ ಪಾಂಡೆ 8 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.

ಭಾರತದ ರನ್ ಏರಿಕೆ?:
50 ರನ್- 49 ಎಸೆತ
100 ರನ್- 123 ಎಸೆತ
150 ರನ್- 170 ಎಸೆತ
200 ರನ್- 214 ಎಸೆತ
250 ರನ್- 259 ಎಸೆತ

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ 131 ರನ್ (132 ಎಸೆತ, 14 ಬೌಂಡರಿ, ಸಿಕ್ಸ್), ಮಾರ್ನಸ್ ಲಾಬುಶೇನ್ 54 ರನ್ (64 ಎಸೆತ, 5 ಬೌಂಡರಿ), ಅಲೆಕ್ಸ್ ಕ್ಯಾರಿ 35 ರನ್ ( 36 ಎಸೆತ, 5 ಬೌಂಡರಿ) ಸಹಾಯದಿಂದ 9 ವಿಕೆಟ್‍ಗಳ ನಷ್ಟಕ್ಕೆ 286 ರನ್‍ಗಳ ಸಾಧಾರಣ ಮೊತ್ತ ಪೇರಿಸಿತ್ತು.

ಟೀಂ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ 4 ವಿಕೆಟ್ ಕಿತ್ತು ತಂಡಕ್ಕೆ ಆಸರೆಯಾಗಿದ್ದರು. ಸ್ಪಿನ್ನರ್ ರವೀಂದ್ರ ಜಡೇಜಾ ಎರಡು ವಿಕೆಟ್ ಪಡೆದರೆ, ನವದೀಪ್ ಸೈನಿ ಹಾಗೂ ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದಿದ್ದರು. ಆದರೆ ಯಾವುದೇ ವಿಕೆಟ್ ಪಡೆಯದ ಜಸ್‍ಪ್ರೀತ್ ಬುಮ್ರಾ 10 ಓವರ್ ಮಾಡಿ ಕೇವಲ 38 ರನ್ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *