ಕ್ಯಾಪ್ಟನ್ ಕೊಹ್ಲಿ ಶತಕದಾಸರೆ – ಸ್ಪರ್ಧಾತ್ಮಕ ಮೊತ್ತ ದಾಖಲಿಸಿದ ಟೀಂ ಇಂಡಿಯಾ

Public TV
2 Min Read

ನಾಗ್ಪುರ: ಇಲ್ಲಿನ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಶತಕದ ಸಾಧನೆ ಮಾಡಿದ್ದು, ಟೀಂ ಇಂಡಿಯಾ 48.2 ಓವರ್ ಗಳಲ್ಲಿ 250 ರನ್ ಗಳಿಸಿ ಸವಾಲಿನ ಗುರಿ ನೀಡಿದೆ.

ತಂಡದ ಆರಂಭಿಕರ ವೈಫಲ್ಯದ ನಡುವೆಯೂ ಕೊಹ್ಲಿ ನಾಯಕತ್ವದ ಜವಾಬ್ದಾರಿಯನ್ನು ನಿರ್ವಹಿಸಿದ್ದು, 120 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 116 ರನ್ ಗಳಿಸಿ ಮಿಂಚಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಇನ್ನಿಂಗ್ಸ್ ಮೊದಲ ಓವರಿನ ಅಂತಿಮ ಎಸೆತದಲ್ಲಿ ಔಟಾಗಿ ಶೂನ್ಯ ಸಾಧನೆ ಮಾಡಿದ ರೋಹಿತ್ ನಿರಾಸೆ ಮೂಡಿಸಿದರೆ, ಕಳೆದ ಪಂದ್ಯದಲ್ಲಿ ವಿಫಲರಾಗಿ ಮತ್ತೊಂದು ಅವಕಾಶ ಪಡೆದ ಧವನ್ 21 ರನ್ ಗಳಿಸಿ ನಿರ್ಗಮಿಸಿದರು. ತಂಡ 38 ರನ್ ಗಳಿಸುವ ವೇಳೆ ಇಬ್ಬರು ಆರಂಭಿಕರು ಪೆವಿಲಿಯನ್ ಸೇರಿದ್ದರು.

ಈ ಹಂತದಲ್ಲಿ ನಾಯಕ ವಿರಾಟ್ ಕೊಹ್ಲಿ ಜೊತೆಗೂಡಿದ ಅಂಬಾಟಿ ರಾಯುಡು ಕೂಡ 18 ರನ್ ಗಳಿಸಿ ಆಸೀಸ್ ಬೌಲರ್ ನಥನ್ ಲಯನ್‍ಗೆ ವಿಕೆಟ್ ಒಪ್ಪಿಸಿದರು. ಆಸೀಸ್ ಅಂಪೈರ್ ತೀರ್ಪಿನ ವಿರುದ್ಧ ಮನವಿ ಡಿಆರ್ ಎಸ್ ಸಲ್ಲಿಸಿ ಈ ಪಂದ್ಯದಲ್ಲೂ ಯಶಸ್ವಿಯಾಯಿತು. ಬಳಿಕ ಬಂದ ಯುವ ಆಟಗಾರ ವಿಜಯ್ ಶಂಕರ್ ನಾಯಕನೊಂದಿಗೆ ಜವಾಬ್ದಾರಿ ಹಂಚಿಕೊಂಡು ಬಿರುಸಿನ ಬ್ಯಾಟಿಂಗ್ ನಡೆಸಿದರು. ಆದರೆ 46 ರನ್ ಗಳಿಸಿದ್ದ ವೇಳೆ ಅನಿರೀಕ್ಷಿತವಾಗಿ ರನೌಟ್ ಆದ್ರು. ಆದಾಗಲೇ ಶಂಕರ್, ಕೊಹ್ಲಿಯೊಂದಿಗೆ 81 ರನ್‍ಗಳ ಜತೆಯಾಟದಲ್ಲಿ ಭಾಗಿಯಾದರು.

ಮೊದಲ ಪಂದ್ಯದಲ್ಲಿ ತಂಡದ ಗೆಲುವಿಗೆ ಕಾರಣರಾಗಿದ್ದ ಧೋನಿ ಹಾಗೂ ಜಾಧವ್ ರನ್ನು ಈ ಬಾರಿ ಬ್ಯಾಕ್ ಟು ಬ್ಯಾಕ್ ಎಸೆತಗಳಲ್ಲೇ ಜಾಂಪಾ ಪೆವಿಲಿಯನ್‍ಗಟ್ಟಿದ್ದರು. ಈ ವೇಳೆಗೆ ಟೀಂ ಇಂಡಿಯಾ 25 ಓವರ್‍ಗಳಲ್ಲಿ ಭಾರತ ಮೂರು ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿತ್ತು. ಒತ್ತಡ ಪರಿಸ್ಥಿತಿಯ ನಡುವೆಯೇ ಆಕರ್ಷಕವಾಗಿ ಬ್ಯಾಟ್ ಬೀಸಿದ ನಾಯಕ ಕೊಹ್ಲಿ ತಂಡದ ಮೊತ್ತವನ್ನು ಹೆಚ್ಚಿಸುವತ್ತ ಗಮನ ಹರಿಸಿದ್ದರು. ಅಲ್ಲದೇ ಅತ್ಯಂತ ಒತ್ತಡ ಸಮಯದಲ್ಲಿ ಶತಕ ಸಿಡಿಸಿ ಮಿಂಚಿದರು. ಕೇವಲ 107 ಎಸೆತಗಳಲ್ಲಿ ಕೊಹ್ಲಿ ಶತಕ ಸಾಧನೆ ಮಾಡಿದ್ದರು.

ಇನ್ನಿಂಗ್ಸ್ ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಲು ಮುಂದಾದ ಕೊಹ್ಲಿ 116 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಜಡೇಜಾ 21 ರನ್ ಗಳಿಸಿದ್ದು ಹೊರತುಪಡಿಸಿದರೆ ಬೇರೆ ಯಾವ ಆಟಗಾರ ಕೂಡ ಎರಡಂಕ್ಕಿ ಮೊತ್ತ ದಾಟಲಿಲ್ಲ. ಅಂತಿಮವಾಗಿ ಟೀಂ ಇಂಡಿಯಾ 48.2 ಓವರ್ ಗಳಲ್ಲಿ 250 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಆಸೀಸ್ ಪರ ಕಮ್ಮಿನ್ಸ್ 4 ವಿಕೆಟ್ ಪಡೆದು ಪ್ರಭಾವಿ ಎನಿಸಿಕೊಂಡರೆ ಜಾಂಪಾ 2, ಲಯನ್, ಮ್ಯಾಕ್ಸ್ ವೆಲ್, ನೈಲ್ ತಲಾ 1 ವಿಕೆಟ್ ಪಡೆದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *