ಗೆಲುವಿನ ಸಮೀಪ ಬಂದು ಕೊನೆಯ ಓವರ್‌ನಲ್ಲಿ ಸೋತ ಭಾರತ!

Public TV
3 Min Read

ಬ್ರಿಸ್ಬೇನ್: ಗೆಲುವಿನ ಸಮೀಪ ಬಂದಿದ್ದ ಭಾರತ ಕೊನೆಯ ಓವರ್ ನಲ್ಲಿ ಎಡವಿದ ಪರಿಣಾಮ ಮೊದಲ ಟಿ20 ಪಂದ್ಯವನ್ನು ಆಸ್ಟ್ರೇಲಿಯಾ 4 ರನ್ ಗಳಿಂದ ರೋಚಕವಾಗಿ ಗೆದ್ದುಕೊಂಡಿದೆ.

ಮಳೆಯಿಂದಾಗಿ ಡಕ್‍ವರ್ಥ್ ಲೂಯಿಸ್ ನಿಯಮದ ಅನ್ವಯ ಭಾರತಕ್ಕೆ 17 ಓವರ್ ಗಳಲ್ಲಿ 174 ರನ್ ಗಳ ಗುರಿಯನ್ನು ನೀಡಲಾಗಿತ್ತು. ಗುರಿಯನ್ನು ಬೆನ್ನಟ್ಟಿದ ಭಾರತ 17 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

ಅಂತಿಮ 6 ಎಸೆತಗಳಲ್ಲಿ ಗೆಲ್ಲಲು 13 ರನ್ ಗುರಿ ಪಡೆದ ಟೀಂ ಇಂಡಿಯಾ ಗೆ ದಿನೇಶ್ ಕಾರ್ತಿಕ್ ಗೆಲುವಿನ ಸಿಹಿ ನೀಡಲು ವಿಫಲರಾದರು. ಓವರ್ ಮೊದಲ ಎಸೆತದಲ್ಲಿ 2 ರನ್ ಸಿಡಿಸಿದ ಪಾಂಡ್ಯ ಹಾಗೂ ಕಾರ್ತಿಕ್ ಕ್ಯಾಚ್ ನೀಡಿ ಪೆವಿಲಿಯನ್ ದಾರಿ ಹಿಡಿದರು. ಬೀಗಿ ಬೌಲಿಂಗ್ ದಾಳಿ ನಡೆಸಿದ ಸ್ಟೋಯಿನಿಸ್ ಆಸೀಸ್ ಗೆಲುವಿಗೆ ಕಾರಣರಾದರು.

24 ಬಾಲಿಗೆ 60 ರನ್ ಬೇಕಿದ್ದಾಗ 14ನೇ ಓವರ್ ನಲ್ಲಿ 25 ರನ್ ಬಂದಿದ್ದರೆ, 15 ಮತ್ತು 16ನೇ ಓವರ್ ನಲ್ಲಿ ತಲಾ 11 ರನ್ ಬಂದಿತ್ತು. ಹೀಗಾಗಿ ಕೊನೆಯ ಓವರ್ ನಲ್ಲಿ ಭಾರತ ಜಯಗಳಿಸಬಹುದೆಂಬ ವಿಶ್ವಾಸವನ್ನು ಅಭಿಮಾನಿಗಳು ಇಟ್ಟಕೊಂಡರು. ದಿನೇಶ್ ಕಾರ್ತಿಕ್ 30 ರನ್(13 ಎಸೆತ, 4 ಬೌಂಡರಿ, 1 ಸಿಕ್ಸರ್), ರಿಷಭ್ ಪಂತ್ 20 ರನ್(16 ಎಸೆತ, 1 ಬೌಂಡರಿ, 1 ಸಿಕ್ಸರ್) ಸಿಡಿಸಿ ರೋಚಕ ಕೈಮ್ಯಾಕ್ಸ್ ನತ್ತ ಭಾರತವನ್ನು ತಂದಿದ್ದರು. ಆದರೆ ಇಬ್ಬರು ಕೊನೆಯ ಓವರ್ ನಲ್ಲಿ ಔಟಾಗುವ ಮೂಲಕ ಭಾರತ ಸೋಲನ್ನು ಒಪ್ಪಿಕೊಂಡಿತು.

ಭಾರತದ ಪರ ಶಿಖರ್ ಧವನ್ 76 ರನ್(42 ಎಸೆತ, 10 ಬೌಂಡರಿ, 2 ಸಿಕ್ಸರ್) ಸಿಡಿಸಿ ಮಿಂಚಿದರೆ, ನಾಯಕ ವಿರಾಟ್ ಕೊಹ್ಲಿ 4 ರನ್, ಪಾಂಡ್ಯ 2 ಗಳಿಸಲಷ್ಟೇ ಶಕ್ತರಾದರು. ಆಸೀಸ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಸ್ಟೋಯಿನಿಸ್ ಮತ್ತು ಜಂಪಾ ತಲಾ 2 ವಿಕೆಟ್ ಪಡೆದರು. ಉಳಿದಂತೆ ಟೈ, ಸ್ಟಾನ್ ಲೇಕ್, ಬೆರೆನ್ ಡ್ರಾಪ್ ತಲಾ ಒಂದು ವಿಕೆಟ್ ಪಡೆದರು.

174 ರನ್ ಗುರಿ ಪಡೆದ ಟೀಂ ಇಂಡಿಯಾಗೆ ಆರಂಭಿಕ ಶಿಖರ್ ಧವನ್ ಮೊದಲ ಓವರಿನಲ್ಲೇ 2 ಬೌಂಡರಿ ಸಿಡಿಸಿ ಬಿರುಸಿನ ಆರಂಭ ನೀಡಿದರು. ಆದರೆ ರೋಹಿತ್ ಶರ್ಮಾ 7 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್ ಮೊದಲು ಕ್ಷೇತ್ರರಕ್ಷಣೆ ಆಯ್ದುಕೊಂಡಿದ್ದರು. ಕೊಹ್ಲಿ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ಮಾಡಿದ ಮಹ್ಮದ್ ಖಲೀಲ್ 7 ರನ್ ಗಳಿಸಿದ್ದ ಡಿಜೆಎಂ ಶಾರ್ಟ್ ವಿಕೆಟ್ ಪಡೆದು ಆಸೀಸ್‍ಗೆ ಮೊದಲ ಆಘಾತ ನೀಡಿದರು. ವಿರಾಟ್ ಕೊಹ್ಲಿ ಪಂದ್ಯದ ನಾಲ್ಕನೇ ಓವರ್ ಬೌಲ್ ಮಾಡಿದ ಬುಮ್ರಾ ದಾಳಿಯಲ್ಲಿ ಆಸೀಸ್ ನಾಯಕ ಆರೋನ್ ಫಿಂಚ್ ಕ್ಯಾಚ್ ಕೈಚೆಲ್ಲಿದರು.

ಪಂದ್ಯದ ಆರಂಭದಿಂದಲೂ ಟೀಂ ಇಂಡಿಯಾ ಬೌಲರ್‍ಗಳು ಬೀಗಿ ಬೌಲಿಂಗ್ ದಾಳಿ ನಡೆಸಿದರು. ಕೊಹ್ಲಿ ನೀಡಿದ ಜೀವನದಾವನ್ನು ಸಮರ್ಥವಾಗಿ ಬಳಸಿಕೊಂಡ ನಾಯಕ ಫಿಂಚ್ ತಂಡಕ್ಕೆ ಆಸರೆಯಾಗುವ ಮುನ್ಸೂಚನೆ ನೀಡಿದರು. ಈ ಹಂತದಲ್ಲಿ ದಾಳಿಗಿಳಿದ ಕುಲದೀಪ್ ಯಾದವ್ ಫಿಂಚ್ ವಿಕೆಟ್ ಪಡೆದರು.

ಬಳಿಕ ಬಂದ ಕ್ರಿಸ್ ಲಿನ್ ಬೀರುಸಿನ ಬ್ಯಾಟಿಂಗ್ ನಡೆಸಿ ತಂಡ ಸ್ಕೋರ್ ಹೆಚ್ಚಿಸಿದರು. ಈ ಹಂತದಲ್ಲಿ ಮತ್ತೆ ಮೋಡಿ ಮಾಡಿದ ಕುಲದೀಪ್ ಯಾದವ್ ಲಿನ್‍ಗೆ ಪೆವಿಲಿಯನ್ ಹಾದಿ ತೋರಿದರು. ಕೇವಲ 20 ಎಸೆತ ಎದುರಿಸಿದ ಲಿನ್ 37 ಗಳಿಸಿ ನಿರ್ಗಮಿಸಿದರು.

ಕುಲದೀಪ್ ದಾಳಿಯಿಂದ ಒತ್ತಡಕ್ಕೆ ಎದುರಿಸಿದ ತಂಡಕ್ಕೆ ಸ್ಫೋಟಕ ಆಟಗಾರ ಮ್ಯಾಕ್ಸ್‍ವೆಲ್ 46 ರನ್ ಸಿಡಿಸಿ ತಂಡ ಸವಾಲಿನ ಮೊತ್ತಗಳಿಸಲು ಕಾರಣರಾದರು. 14ನೇ ಓವರ್ ನಲ್ಲಿ ಆಲ್‍ರೌಂಡರ್ ಕೃಣಾಲ್ ಪಾಂಡ್ಯ ಬೌಲಿಂಗ್‍ನಲ್ಲಿ 23 ಎನ್ ಸಿಡಿಸಿದರು. 16.1 ಓವರ್ ವೇಳೆಗೆ ಮಳೆ ಅಡ್ಡಿ ಪಡಿಸಿದ ಕಾರಣ ಪಂದ್ಯವನ್ನು 17 ಓವರ್‍ಗಳಿಗೆ ಇಳಿಕೆ ಮಾಡಲಾಯಿತು. ಇನ್ನಿಂಗ್ಸ್‍ನಲ್ಲಿ 19 ಎಸೆತಗಳನ್ನು ಎದುರಿಸಿದ ಸ್ಟೊಯಿನಿಸ್ 33 ರನ್ ಗಳಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಆಸ್ಟ್ರೇಲಿಯಾ 17 ಓವರ್ ಗೆ 4 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *